ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣ ಚಾಮುಂಡಿಬೆಟ್ಟದ ನಂದಿವಿಗ್ರಹಕ್ಕೆ ಭಾನುವಾರ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ 12ನೇ ವರ್ಷದ ಮಹಾಭಿಷೇಕವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಚಾಮುಂಡಿಬೆಟ್ಟದ ವತಿಯಿಂದ ಆಯೋಜಿಸಿದ್ದ ಪೂಜಾ ಮಹೋತ್ಸವ, ಮಹಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ಏಕಶಿಲಾಮೂರ್ತಿ ನಂದಿ ವಿಗ್ರಹಕ್ಕೆ ವಿವಿಧ ಸುಗಂಧ ದ್ರವ್ಯಗಳ ಅಭಿಷೇಕವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಮೈಸೂರು ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆ ಭಕ್ತರು ನಂದಿಯ ಮಜ್ಜನ ಕಂಡು ಪುನೀತರಾದರು.
ಮಹಾಭಿಷೇಕದ ಹಿನ್ನೆಲೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ ನಂದಿಮೂರ್ತಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ನಂದಿಗೆ ಪಾದ್ಯ, ಆಚಮಾನ, ಮಧಪರ್ಕ,
-ಭಸ್ಮ, ಪಂಚಾಮೃತ, ಜೇನು, ಸಕ್ಕರೆ, ಅರಿಶಿನ, ಕುಂಕುಮ, ಶ್ರೀಗಂಧ, ಅರ್ಚನ, ನಿಂಬೆ ರಸ, ಪತ್ರೆಗಳು, ವಿವಿಧ ಪುಷ್ಪ, ಬಿಲ್ವಪತ್ರೆ, ಹಾಲು, ಮೊಸರು, ಬಾಳೆಹಣ್ಣು ಸೇರಿದಂತೆ ಒಟ್ಟು 34 ಬಗೆಯ ದ್ರವ್ಯಗಳಿಂದ 3 ಗಂಟೆಗಳ ಕಾಲ ಅಭಿಷೇಕ ನಡೆಯಿತು. ಬಳಿಕ ಇದೇ ಮೊದಲ ಬಾರಿಗೆ ನಂದಿಗೆ 50 ಮೀಟರ್‌ನ ನೀಲಿಬಣ್ಣದ ಬಟ್ಟೆ ಅಳವಡಿಸಿ ನಂತರ ತೆಗೆಯಲಾಯಿತು.
ಮಹಾಭಿಷೇಕದ ವೇಳೆ ಸಂಗೀತ ವಾದ್ಯಗಳ ಕಂಪು ಮುಳುಗಿದರೆ, ಮತ್ತೂಂದು ಕಡೆ ಭಕ್ತರಿಂದ ಶ್ರೀನಂದಿಗೆ, ಚಾಮುಂಡೇಶ್ವರಿ ಅಮ್ಮನವರಿಗೆ ಜೈಕಾರದ ಘೋಷಣೆಗಳು ಕೇಳಿಬಂತು. ಇದೇ ವೇಳೆ ಅಭಿಷೇಕದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರಿಗೆ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ ಪ್ರಸಾದ ವಿನಿಯೋಗ ಮಾಡಲಾಯಿತು.