Advertisement

ಕರ್ನಾಟಕ ಇತಿಹಾಸದಲ್ಲಿ 12ನೇ ಶತಮಾನ ಸುವರ್ಣ ಯುಗ

06:42 PM Oct 10, 2022 | Team Udayavani |

ಮುದ್ದೇಬಿಹಾಳ: ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಅದು ಶರಣರ ಯುಗವಾಗಿತ್ತು. ವಚನ ಸಾಹಿತ್ಯ ಎನ್ನುವ ವಿಶಿಷ್ಟ ಸಾಹಿತ್ಯದ ಪ್ರಾಕಾರ ಕಣ್ಣು ತೆರೆದುಕೊಂಡ ಕಾಲ ಅದಾಗಿತ್ತು. ವಚನ ಸಾಹಿತ್ಯವು ವಿಶ್ವ ಸಾಹಿತ್ಯ ಪ್ರಪಂಚಕ್ಕೆ ಕನ್ನಡ ಸಾಹಿತ್ಯ ಪರಂಪರೆ ನೀಡಿದ ಅಮೂಲ್ಯ ರತ್ನ ಎನ್ನಿಸಿಕೊಂಡಿದೆ ಎಂದು ವಿಜಯಪುರದ ಅಂಕಣಕಾರ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.

Advertisement

ಇಲ್ಲಿನ ಎಂಜಿವಿಸಿ ಡಿಇಡಿ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌, ಎಸ್‌ಜಿವಿಸಿ ವಿದ್ಯಾಪ್ರಸಾರಕ ವಿಶ್ವಸ್ಥ ನಿಧಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಲಿಂ| ವಾಸಂತಿಬಾಯಿ ಮತ್ತು ಡಾ| ಸಿದ್ದವೀರಪ್ಪ ಜಿಗಜಿನ್ನಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವ ಜನತೆಗಾಗಿ ವಚನ ಸಾಹಿತ್ಯ ವಿಷಯ ಕುರಿತು ಅವರು ಅನುಭಾವ ನಡೆಸಿಕೊಟ್ಟರು.

ಸಮಾನತೆ, ಕ್ಷೇಮಾಭ್ಯುದಯ, ಕಾಯಕ, ರಾಮರಾಜ್ಯದ ಪರಿಕಲ್ಪನೆ, ಶಾಂತಿಯ ಸಹಬಾಳ್ವೆ ಇತ್ಯಾದಿ ಅನೇಕ ಅಂಶಗಳನ್ನು ವಚನ ಸಾಹಿತ್ಯವು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಬಸವಣ್ಣನವರನ್ನು ಕೇವಲ ವೇದಿಕೆಗೆ ಮತ್ತು ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಇದು ನಿಲ್ಲಬೇಕು.

ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ಮೂರ್ತಿಗಳನ್ನು ವಿಧಾನಸೌಧದ ಹೊರಗೆ ನಿಲ್ಲಿಸಿದ್ದೇವೆಯೇ ಹೊರತು ಅವರ ತತ್ವಗಳನ್ನು ಕಲಿತುಕೊಂಡಿಲ್ಲ. ಕ್ಷಮಿಸಿಬಿಡು
ಬಸವಣ್ಣ ಎಂದು ಹೇಳುವಷ್ಟು ಕಾರ್ಯಗಳನ್ನು ಬಸವಣ್ಣನವರ ಹೆಸರಿನಲ್ಲಿ ಮಾಡುತ್ತಿದ್ದೇವೆ. ಅವರ ತತ್ವಗಳನ್ನು ನಮ್ಮ ಅಂತರಾತ್ಮದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಶಿಕ್ಷಕ, ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ವಾಸಂತಿಬಾಯಿ ಮತ್ತು ಸಿದ್ದವೀರಪ್ಪನವರು ತ್ಯಾಗ ಜೀವಿಗಳಾಗಿದ್ದರು. ಆಧುನಿಕ ಜಗತ್ತಿಗೆ ವಾಸಂತಿಬಾಯಿಯವರು ಮಾದರಿಯಾಗಿದ್ದಾರೆ. ಮಹಿಳಾ ಲೋಕಕ್ಕೆ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

Advertisement

ಅತಿಥಿಯಾಗಿದ್ದ ಎಸ್‌ಜಿವಿಸಿ ವಿದ್ಯಾಪ್ರಸಾರಕ ವಿಶ್ವಸ್ಥ ನಿಧಿಯ ಕಾರ್ಯದರ್ಶಿ ಅಶೋಕ ತಡಸದ ಮಾತನಾಡಿ, ಜಿಗಜಿನ್ನಿಯವರ ಮನೆತನ ವೈದ್ಯಕೀಯ ಮನೆತನವಾಗಿ ಸಮಾಜಕ್ಕೆ ಔಚಿತ್ಯಪೂರ್ಣ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯೇ ದೇವರ ಸೇವೆ ಎಂದು ಮನಗಂಡು ಅವರು ಸಮಾಜ ಸೇವೆ ಮಾಡಿದರು. ಎಸ್‌ಜಿವಿಸಿ ಟ್ರಸ್ಟ್‌ ಧರ್ಮದರ್ಶಿಗಳಾಗಿ ಸಲ್ಲಿಸಿದ ಅವರ ಸೇವೆ ಮರೆಯಲಾಗದಂಥದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ದತ್ತಿ ದಾನಿ, ಬಿಎಲ್‌ಡಿಇ ಡೀಮ್ಡ್ ವಿವಿಯ ವಿಶ್ರಾಂತ ಅಧಿಕಾರಿ ಡಾ| ಸತೀಶ ಜಿಗಜಿನ್ನಿ ಮಾತನಾಡಿ, ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಯುವಕರಲ್ಲಿ ವೈಚಾರಿಕ ಮನೋಭಾವ ಮತ್ತು ಅವರ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಹಿರಿಯರಾದ ಬಸವರಾಜ ಮೋಟಗಿ ಅವರು ಬಸವ ಭಾವಪೂಜೆ ನೆರವೇರಿಸಿದರು. ಎಂಜಿವಿಸಿ ಕಾಲೇಜಿನ ಆಡಳಿತಾಧಿಕಾರಿ ಎ.ಬಿ. ಕುಲಕರ್ಣಿ, ವಿರೂಪಾಕ್ಷಪ್ಪ ತಡಸದ, ಎಸ್‌.ಎಸ್‌. ತಳವಾರ ವೇದಿಕೆಯಲ್ಲಿದ್ದರು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ಅವರು ವಾಸಂತಿಬಾಯಿ ಜಿಗಜಿನ್ನಿ ಅವರ ಜೀವನ, ಸಾಧನೆ ಕುರಿತು ಮಾತನಾಡಿದರು.

ಬಿ.ಎಸ್‌.ಬೋಳಿಶೆಟ್ಟಿ, ಎಸ್‌.ಬಿ.ಸುತಾರ, ಎಸ್‌ .ಎ.ಜಕ್ಕೇರಾಳ, ಸವಿತಾ ವಿಜಯಪುರ, ಜೆ.ಎಸ್‌. ರಾಮೋಡಗಿ, ಕೆ.ಕೆ.ಹಿರೇಕುರುಬರ, ಪಿ.ಎಚ್‌. ಉಪ್ಪಲದಿನ್ನಿ, ಕೆ.ಎಲ್‌.ಅವಟಿ, ಎಸ್‌.ಎಸ್‌.ಹುನಗುಂದ, ಬಸವರಾಜ ಲಿಂಗದಳ್ಳಿ, ಸಂಗಣ್ಣ ಕಟ್ಟಿ, ಎಸ್‌.ಎಚ್‌ .ಪಾಟೀಲ, ಎಸ್‌.ಎಸ್‌.ಬಡಿಗೇರ, ಬಿ.ಎಂ.ರಾಂಪುರ, ಎಂ.ಬಿ.ಗುಡಗುಂಟಿ, ಎಸ್‌.ಎಸ್‌.ಬೇವಿನಗಿಡದ ಇದ್ದರು. ಅನುಭಾವ ನಡೆಸಿಕೊಟ್ಟ ಜುನಗೊಂಡ ಅವರನ್ನು ಸನ್ಮಾನಿಸಲಾಯಿತು.

ಸಂಗಣ್ಣ ಶಿವಣಗಿ ಮತ್ತು ಮಹಾಲಿಂಗಪ್ಪ ಹೂಗಾರ ಸಂಗೀತ ಸೇವೆ ನೀಡಿದರು. ಪ್ರತಿಭಾ ಹಿರೇಮಠ ಪ್ರಾರ್ಥಿಸಿದರು. ಸಿ.ಜಿ.ನಾಗರಾಳ ಸ್ವಾಗತಿಸಿದರು. ಬಾಪುಗೌಡ ಪಾಟೀಲ, ಎಚ್‌.ಡಿ. ನದಾಫ್‌ ಕಾರ್ಯಕ್ರಮ ನಿರ್ವಹಿಸಿದರು.

ವಾಸಂತಿಬಾಯಿ ಜಿಗಜಿನ್ನಿ ಅವರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಕ್ಷೇತ್ರದಲ್ಲಿ ಅಸಿಸ್ಟಂಟ್‌ ಕಮೀಷನರ್‌ ಫಾರ್‌ ಗೈಡ್ಸ್‌ ಆಗಿ ಸೇವೆ ಸಲ್ಲಿಸಿ ಸಿಲ್ವರ್‌ ಸ್ಟಾರ್‌ ಮತ್ತು ಎಲಿಫಂಟ್‌ ಸ್ಟಾರ್‌ನಂತಹ ಉನ್ನತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.
ಬಸವರಾಜ ನಾಲತವಾಡ,
ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್‌, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next