Advertisement

ಮೃಗಾಲಯಕ್ಕೆ 125ರ ಸಂಭ್ರಮ: ವರ್ಷಪೂರ್ತಿ ಕಾರ್ಯಕ್ರಮ

12:01 PM Aug 09, 2017 | |

ಮೈಸೂರು: ಮೈಸೂರು ಮೃಗಾಲಯ ಎಂದೇ ಹೆಸರಾಗಿರುವ ಶ್ರೀಚಾಮರಾಜೇಂದ್ರ ಮೃಗಾಲಯದ 125ನೇ ವರ್ಷಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಭ್ರಮದ ಹಿನ್ನೆಲೆ ಮೈಸೂರು ಮೃಗಾಲಯದಿಂದ ಗದಗ್‌ನ ಬಿಂಕದಕಟ್ಟಿ ಮೃಗಾಲಯವನ್ನು ದತ್ತುಪಡೆಯಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ರೀತಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಕಲಬುರ್ಗಿಯ ಕಿರು ಮೃಗಾಲಯವನ್ನು ದತ್ತು ಪಡೆಯಲು ನಿರ್ಧರಿಸಿದ್ದು, ಈ ಎರಡೂ ಮೃಗಾಲಯಗಳ ಅಭಿವೃದ್ಧಿಗಾಗಿ ತಲಾ 1.25 ಕೋಟಿ ರೂ.ನೀಡಲು ಚಿಂತನೆ ಮಾಡಲಾಗಿದೆ ಎಂದರು.

ವಿವಿಧ ಕಾರ್ಯಕ್ರಮಗಳು: ಮೈಸೂರು ಮೃಗಾಲಯ 125ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಮುಖವಾಗಿ ಭಾರತ ದೇಶದ ಕಾರ್ಯನಿರ್ವಾಹಕ ನಿರ್ದೇಶಕರ ಸಮ್ಮೇಳನ, ಭಾರತೀಯ ಪಶುವೈದ್ಯರ ಸಮ್ಮೇಳನ, ಸಂರಕ್ಷಣಾ ನುಡಿ, ಮೃಗಾಲಯದ ಶೈಕ್ಷಣಿಕ ಚಟುವಟಿಕೆಗಳು, ವನ್ಯಜೀವಿಗಳ ಛಾಯಾ ಚಿತ್ರ ಪ್ರದರ್ಶನ, ಜ, ಔಟ್‌ರೀಚ್‌ ಮತ್ತು ಇನ್‌ರಿಚ್‌ ಕಾರ್ಯಕ್ರಮ, ವಿಕಲಚೇತನರಿಗೆ ವಿಶೇಷ ಕಾರ್ಯಕ್ರಮ, ಪ್ರಾಣಿಪಾಲಕರಿಗೆ ತರಬೇತಿ, ವನ್ಯಪ್ರಾಣಿ ಸಪ್ತಾಹ ಹಾಗೂ ಪರಿಸರ ದಿನಾಚರಣೆ, ಶಿಕ್ಷಕರ ಕಾರ್ಯಕ್ರಮ, ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಾಹನ ನಿಲುಗಡೆ ವ್ಯವಸ್ಥೆ: ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಉಂಟಾಗಿರುವ ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ಮೃಗಾಲಯದ ಮುಂಭಾಗ ಅಂಡರ್‌ಪಾಸ್‌ ನಿರ್ಮಿಸುವ ಬಗ್ಗೆಯೂ ಕ್ರಮವಹಿಸಲಾಗಿದೆ.

ಉಳಿದಂತೆ ಮೈಸೂರು ಮೃಗಾಲಯಕ್ಕೆ 2015-16ನೇ ಸಾಲಿನಲ್ಲಿ ಪ್ರಾಣಿಗಳ ದತ್ತು ಯೋಜನೆಯಲ್ಲಿ 35 ಲಕ್ಷ ರೂ. ಆದಾಯ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಜುಲೈವರೆಗೆ 12 ಲಕ್ಷ ರೂ. ಆದಾಯ ಬಂದಿದ್ದು, ಈ ಸಾಲಿನಲ್ಲಿ 40 ಲಕ್ಷ ರೂ. ಆದಾಯ ಬರುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್‌ ತಿಳಿಸಿದರು. ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಹಾಜರಿದ್ದರು.

Advertisement

ವನ್ಯರಂಗಮಂದಿರ: ಮೃಗಾಲಯದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಮೃಗಾಲಯದ ಆವರಣದಲ್ಲಿ 2.4ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವನ್ಯರಂಗಮಂದಿರವನ್ನು ಆ.10ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಇದೇ ಸಂದರ್ಭದಲ್ಲಿ ಇತ್ತೀಚೆಗೆ ಜನಿಸಿದ ಆನೆ ಮರಿಗೆ ಮುಖ್ಯಮಂತ್ರಿಯ ನಾಮಕರಣ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next