ನವದೆಹಲಿ: ಭಾರತದಲ್ಲಿ ಐಪಿಎಲ್ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವುದು ಪ್ರೊ ಕಬಡ್ಡಿ ಲೀಗ್. ಈ ವರ್ಷ 5ನೇ ಆವೃತ್ತಿ ಆರಂಭವಾಗಲಿದ್ದು, ವಿಶೇಷ ಎಂದರೆ 5ನೇ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸಲಿವೆ. ಇಲ್ಲಿಯವರೆಗೆ 8 ತಂಡಗಳು ಮಾತ್ರ ಸ್ಪರ್ಧಿಸುತ್ತಿದ್ದವು. ಇದೀಗ ಹೊಸದಾಗಿ ತಮಿಳುನಾಡು, ಹರ್ಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಫ್ರಾಂಚೈಸಿಗಳು ಹೊಸದಾಗಿ ಸೇರ್ಪಡೆಗೊಳ್ಳಲಿವೆ ಎಂದು ತಿಳಿಸಲಾಗಿದೆ. ಇದರಿಂದ ಕಬಡ್ಡಿ ಲೀಗ್‌ನ ವಿಸ್ತಾರ ಹೆಚ್ಚಾಗಲಿದೆ, ಪಂದ್ಯಗಳ ಸಂಖ್ಯೆ, ಒಟ್ಟು ದಿನಗಳ
ಸಂಖ್ಯೆಯೂ ಹೆಚ್ಚಾಗಲಿದೆ.
ಪ್ರೊ ಕಬಡ್ಡಿಯಲ್ಲಿ ತಮಿಳುನಾಡು ಮತ್ತು ಹರ್ಯಾಣದ ಅನೇಕ ಆಟಗಾರರು ಪಾಲ್ಗೊಂಡಿದ್ದಾರೆ. ಆದರೆ ಅಲ್ಲಿಯ ಫ್ರಾಂಚೈಸಿ ಇರಲಿಲ್ಲ. ಈಗ ಹೊಸ ಫ್ರಾಂಚೈಸಿಗಳು ಆರಂಭವಾಗಿರುವುದು ಆಟಗಾರರಲ್ಲಿ, ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಬಡ್ಡಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಹೀಗಾಗಿ ಅಲ್ಲಿ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಗುಜರಾತ್‌ನಲ್ಲಿ 2016ರಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿ ಯಶಸ್ವಿಗೊಂಡಿದೆ.
ಈ ಎಲ್ಲಾ ದೃಷ್ಟಿಯಿಂದ ನಾಲ್ಕು ಹೊಸ ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ. 5ನೇ ಆವೃತ್ತಿ 13 ವಾರಗಳ ಕಾಲ ನಡೆಯಲಿದ್ದು, ಒಟ್ಟು 130ಕ್ಕೂ ಅಧಿಕ ಪಂದ್ಯಗಳು ನಡೆಯಲಿವೆ ಎಂದು ತಿಳಿಸಲಾಗಿದೆ.