Advertisement

ಒಂದೇ ಒಂದ್ಸಲ ನಿನ್ನನ್ನು ನೋಡಬೇಕು ಅನ್ನಿಸ್ತಿದೆ, ಅಷ್ಟೇ… 

03:45 AM Jul 04, 2017 | Harsha Rao |

ಇಪ್ಪತ್ತು ಮೂವತ್ತು ವರ್ಷಗಳ ನಂತರ ಎಲ್ಲೋ ಇರುವ ತಾಯಿಯನ್ನು ಮಗನೊಂದಿಗೆ ಸೇರಿಸುತ್ತವೆಯಂತೆ ಈ ಪೇಸುºಕ್‌, ವಾಟ್ಸಪ್‌, ಟ್ವಿಟರ್‌… ಕೇವಲ ಹತ್ತು ವರ್ಷಗಳ ಹಿಂದೆ ಹೊರಟು ಹೋದ ನನ್ನ ಹುಡುಗಿಯನ್ನು ಹುಡುಕಲಾಗಲಿಲ್ಲ ಇವುಗಳಿಗೆ! ಈ ಜನಗಳೂ ಅಷ್ಟೇ: ಅವಳು ಎಲ್ಲಿದ್ದಾಳೆ ಹೇಳಿ ಅಂದ್ರೆ ಕಳ್ಳರ ಹಾಗೆ ತಪ್ಪಿಸಿಕೊಳ್ಳುತ್ತಾರೆ! ಈ ಸಮಾಜ ಲವ್‌ನ ಪ್ರೋತ್ಸಾಹಿಸುವುದೇ ಇಲ್ಲ ಬಿಡಿ. ಭಕ್ತ, ದೇವರನ್ನು ಹುಡುಕುವಂತೆ ನಾ ಅವಳನ್ನು ಹುಡುಕದ ಜಾಗವಿಲ್ಲ. ಅದೆಷ್ಟು ಪತ್ರಗಳನ್ನು ಬರೆದಿದ್ದೇನೆ. ಯಾವ ವಿಳಾಸಕ್ಕೆ ಹಾಕಲಿ!? ಚೀಲದಲ್ಲಿ ತುಂಬಿದ್ದೀನಿ. ನನ್ನವ್ವ ನೋಡಿದರೆ ನೀರು ಕಾಯಿಸಲು ಬಳಸಿಕೊಂಡಾಳು! ಆಕೆ ಎಲ್ಲಿರಬಹುದು? ಮತ್ತೇನೂ ಆಸೆಯಿಲ್ಲ. ಉಸಿರು ನಿಲ್ಲುವುದರೊಳಗೆ ಒಮ್ಮೆ ನೋಡಬೇಕು, ಅಷ್ಟೇ! ಅವಳ ಮುಂದೆ- ನನ್ನ ಪ್ರೀತಿ ಹಾಗೆ, ಹೀಗೆ, ಕಾದೆ, ಸೋತೆ, ಬಸವಳಿದೆ ಅಂತ ಕೊಚ್ಚಿಕೊಳ್ಳುವ ಹುಂಬತನವಂತೂ ಮೊದಲೇ ಇಲ್ಲ.

Advertisement

ಮೇಘದೂತರಿಲ್ಲ! ಟಿವಿಯಲ್ಲಿ ಜಾಹಿರಾತು ಕೊಡಲೇ!? ಅತಿಯಾಯ್ತು ಅಲ್ವಾ!? ಅಕಸ್ಮಾತ್‌ ಹೀಗೇನಾದ್ರೂ ಮಾಡಿಬಿಟ್ರೆ ನಾಳೆ ಸಮಾಜ ಅವಳನ್ನು ಹೇಗೆ ನೋಡಲಾರಂಭಿಸೀತು!? ಹೀಗೆ ಗೌಪ್ಯವಾಗಿ ನಿನ್ನ ನೋಡಬೇಕು ಕಣೇ ಒಮ್ಮೆ ಅಂತ ಪತ್ರಿಕೆಯಲ್ಲಿ ಬರೆದರೆ, ಅವಳು ಗೃಹಿಣಿಯಾಗಿದ್ದರೆ ಮಧ್ಯಾಹ್ನದ ಬೇಸರಕ್ಕೆಂದು ತರಿಸಿಕೊಂಡ ಪತ್ರಿಕೆಯಲ್ಲಿ ನಾನು ಇಣುಕಬಹುದು. ಎಲ್ಲೋ ಜರ್ನಿಯಲ್ಲಿದ್ದರೆ ಪಕ್ಕದ ಸೀಟಿನವರ ಕೈಯಲ್ಲಿರುವ ಪತ್ರಿಕೆಯಲ್ಲಿ ಕದ್ದು ನೋಡಬಹುದು. ಪಾಠ ಮಾಡೋ ಮೇಡಂ ಆಗಿದ್ದರೆ, ಮಕ್ಕಳಿಗೆ ಓದಿ ಹೇಳ್ಳೋಕೆ ಅಂತ ತೆಗೆದುಕೊಂಡು ಹೋದ ಪತ್ರಿಕೆಯಲ್ಲಿ ನನ್ನ ಮನದ ದುಗುಡ ತಿಳಿಸಬಹುದು. ಇರುವುದೊಂದೇ, ಇದೊಂದೇ ಮಾರ್ಗ! ಗೆಲ್ಲುತ್ತೇನಾ!? ಗೊತ್ತಿಲ್ಲ.

ಅವಳು ಪತ್ರಿಕೆ ಓದಿ ಸಂಪಾದಕರಿಗೆ ದುಂಬಾಲು ಬಿದ್ದು, ಮೊಬೈಲ್‌ ನಂಬರ್‌ ತಗೊಂಡು, ಒಮ್ಮೆ ಮಾತಿಗೆ ಸಿಕ್ಕರೆ ನಾನು ಹೇಳಬೇಕೆಂದಿರುವುದು ಒಂದೇ ಮಾತು: “ನಿನ್ನ ನೋಡಬೇಕು ಅನಿಸಿತು ಸಾಯೋದರೊಳಗೆ ಒಮ್ಮೆ! ಅದಕ್ಕೇ ಇಷ್ಟೆಲ್ಲಾ ಹುಚ್ಚಾಟ. ಕ್ಷಮಿಸಿಬಿಡು’. “ಏನೋ ಮಾರಾಯಾ ಅದೆಷ್ಟು ಮುಂಗಾರು ಮಳೆ ಬಿದ್ದು ಹೋಗಿವೆ, ಹೂವುಗಳು ರಾಶಿ ರಾಶಿ ಬಾಡಿ ಹೋಗಿವೆ, ನದಿಯಲ್ಲಿ ಅದೆಷ್ಟು ನೀರು ಹರಿದಿದೆ. ನೀನು ಹೀಗೇಕೆ ಇನ್ನೂ ಅದೇ ಬಾವಿಯಲ್ಲಿ ಬಿದ್ದಿದ್ದೀಯಾ? ಹುಚ್ಚಾ! ಇನ್ನೂ ನನ್ನ ನೆನಪಿಟ್ಟುಕೊಂಡಿದ್ದಾನೆ. ಮಾಡೋಕೆ ಕೆಲ್ಸ ಇಲ್ಲ” ಅಂತ ಅವಳು ಅಹಂನಲ್ಲಿ ಮಾತಾಡಬಹುದು. ಅಥವಾ ನನ್ನನ್ನೂ ಕಂಡ ತಕ್ಷಣ ಕಣ್ಣೀರಾಗಿ “ಯಾಕೋ ನಿಂಗೆ ಇಷ್ಟೊಂದು ಪ್ರೀತಿ ನನ್ನ ಮೇಲೆ? ನಾ ಮೋಸಗಾತಿ. ನನಗೆ ನಿನ್ನನ್ನು ಮಾತಾಡಿಸುವ ಯೋಗ್ಯತೆ ಇಲ್ಲ. ಅದಕ್ಕೆಂದೇ ದೂರ ಉಳಿದುಬಿಟ್ಟೆ. ಮತ್ಯಾಕೆ ಬಂದೆ? ಮತ್ಯಾಕೆ ನಿನ್ನ ಜೀವನವನ್ನು ಕದಡಿಕೊಳ್ಳುತ್ತೀಯಾ? ಪ್ಲೀಸ್‌ ಉಸಿರು, ಸಾವು ಅಂತ ಏನೆಲ್ಲಾ ಮಾತಾಡಬೇಡ. ಸಂಕಟವಾಗುತ್ತೆ. ನನ್ನ ತಪ್ಪಿಗೆ ಕ್ಷಮಿಸಿಬಿಡು’ ಅನ್ನಬಹುದು. ಆಗ ನಾನೇನು ಉತ್ತರಿಸಲಿ!? 

“ನೀನು ಮತ್ತೆ ನನಗೆ ಬೇಕು ಅಂತ ಬರಲಿಲ್ಲ. ಅಥವಾ ನಾ ನಿನ್ನ ನೆನಪಲ್ಲೇ ದಿನಾ ಸಾಯುತ್ತಿದ್ದೇನೆ ಅಂತ ಕರುಣೆ ಬೇಡಲೂ ಬಂದಿಲ್ಲ. ನೋಡು ನೀ ಬಿಟ್ಟು ಹೋದ ಮೇಲೆ ಎಷ್ಟೊಂದು ಚೆನ್ನಾಗಿದ್ದೀನಿ ಅಂತ ಅಹಂನಲ್ಲೂ ಬರಲಿಲ್ಲ. ನನಗೆ ನಿನ್ನ ಮುಖವನ್ನೊಮ್ಮೆ ನೋಡಬೇಕಿತ್ತು. ಎಲ್ಲಿ ನಿನ್ನ ನೋಡದೇ ಹಾಗೇ ಸತ್ತು ಹೋಗುತ್ತೇನೋ ಅನ್ನುವ ಭಯವಿತ್ತು. ಇಲ್ಲಿಗೆ ಮುಗಿಯಿತು ಎಲ್ಲಾ ದುಗುಡ. ನಾನಿನ್ನು ಹೊರಡುತ್ತೇನೆ. ತುಂಬಾ ಹೊತ್ತು ಕೂತರೆ ಅದೊಂದು ಆಸೆಯಂತೆ ಖಾಯಿಲೆಯೂ ಆಗಿಬಿಡಬಹುದು! ಚೆನ್ನಾಗಿರು ಗೆಳತಿ, ಹೋಗುವೆ ಮತ್ತೆ ಬರದೇ! ನಿನ್ನ ಎದುರಿಗೆ ಮತ್ತು ನಿನ್ನ ನೆನಪುಗಳಿಗೆ ಎಂದೂ ಎದುರಾಗದೆ’ ಎಂದು ಹೇಳಿ ಎದ್ದು ಹೊರಟುಬಿಡಬೇಕು ಅಂದುಕೊಂಡಿದ್ದೇನೆ.

– ಸದಾ

Advertisement
Advertisement

Udayavani is now on Telegram. Click here to join our channel and stay updated with the latest news.

Next