Advertisement

ಅಂತೂ ಜಿಪಂ ಅಧ್ಯಕ ಸ್ಥಾನಕ್ಕೆ ಸೌಭಾಗ್ಯರಾಜೀನಾಮೆ

12:28 PM Apr 08, 2018 | Team Udayavani |

ಚಿತ್ರದುರ್ಗ: ಒಪ್ಪಂದದಂತೆ ಅವಧಿ ಮುಗಿದರೂ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದೆ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಸೌಭಾಗ್ಯ ಬಸವರಾಜನ್‌, ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಕೊನೆಗೂ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಮಾಜಿ ಶಾಸಕ ಹಾಗೂ ಪತಿ ಎಸ್‌.ಕೆ. ಬಸವರಾಜನ್‌, ಜಿಪಂ ಸದಸ್ಯರಾದ ನರಸಿಂಹರಾಜು, ಓಬಳೇಶ್‌, ಚಂದ್ರಿಕಾ ಶ್ರೀನಿವಾಸ್‌, ಮುತ್ತುರಾಜ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಯಶವಂತ್‌ ಮತ್ತಿತರರೊಂದಿಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಧೀನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಚಿತ್ರದುರ್ಗ ಕ್ಷೇತ್ರದ ಟಿಕೆಟ್‌ ಭರವಸೆ?:
ಸೌಭಾಗ್ಯ ಬಸವರಾಜನ್‌ ಅವರಿಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡುವುದಾಗಿ ಹೈಕಮಾಂಡ್‌ ಮತ್ತು ವರಿಷ್ಠರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಳೆದು ತೂಗಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. 

ಜಿಪಂ ಅಧ್ಯಕ್ಷ ಹುದ್ದೆಯನ್ನು ಮೂವರು ಕಾಂಗ್ರೆಸ್‌ ಸದಸ್ಯೆಯರಿಗೆ ಹಂಚಿಕೆ ಮಾಡಲಾಗಿತ್ತು. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿರುವ ಸೌಭಾಗ್ಯ ಬಸವರಾಜನ್‌ ಒಡಂಬಡಿಕೆಯಂತೆ ರಾಜೀನಾಮೆ ನೀಡಿರಲಿಲ್ಲ. ಹಾಗಾಗಿ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಳೆದ ನವೆಂಬರ್‌ 28 ರಂದು ಉಚ್ಚಾಟಿಸಲಾಗಿತ್ತು. ಆದರೆ ಉಚ್ಚಾಟನೆ ಅವಧಿಯನ್ನು ನಿರ್ದಿಷ್ಟಪಡಿಸಿರಲಿಲ್ಲ. ಹಾಗಾಗಿ
ಉಚ್ಚಾಟನೆ ಆದೇಶ ವಾಪಸ್‌ ಪಡೆಯಲು ಅವಕಾಶವಿದೆ. ಒಂದೊಮ್ಮೆ ಟಿಕೆಟ್‌ ವಂಚಿತರಾದರೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್‌ ಪಡೆಯುವುದು ಸೌಭಾಗ್ಯ ಇರಾದೆ ಎಂದು ಹೇಳಲಾಗುತ್ತಿದೆ.

ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾಗಬೇಕಾದರೆ 15 ದಿನಗಳ ಕಾಲಾವಕಾಶ ಇರುತ್ತದೆ. ಈ 15 ದಿನಗಳ ಅವಧಿಯಲ್ಲಿ ರಾಜೀನಾಮೆಯನ್ನು ಯಾವುದೇ ಸಂದರ್ಭದಲ್ಲಿ ವಾಪಸ್‌ ಪಡೆಯುವ ಅಧಿಕಾರ ರಾಜೀನಾಮೆ ಸಲ್ಲಿಸಿದವರಿಗೆ ಇರುತ್ತದೆ. ಅಂದರೆ ಏ. 22 ರವರೆಗೆ ಸೌಭಾಗ್ಯ ಅವರಿಗೆ ರಾಜೀನಾಮೆ ಹಿಂಪಡೆಯಲು ಅವಕಾಶವಿದೆ. ಹಾಗಾಗಿ ಇದುವರೆಗೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಪಟ್ಟು ಹಿಡಿದಿದ್ದ ಸೌಭಾಗ್ಯ, ಟಿಕೆಟ್‌ ಘೋಷಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ ರಾಜಕೀಯ
ದಾಳ ಉರುಳಿಸಿದ್ದಾರೆ.

Advertisement

ಕುತೂಹಲ ಮೂಡಿಸಿದ ವರಿಷ್ಠರ ನಡೆ: ಚುನಾವಣಾ ಅಧಿಸೂಚನೆ ಏ. 17 ರಿಂದ ಅಧಿಕೃತವಾಗಿ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆಯೂ ಅಂದಿನಿಂದಲೇ ಆರಂಭವಾಗಲಿದೆ. ಏ. 24 ರವರೆಗೆ ನಾಮಪತ್ರ ಸಲ್ಲಿಸಬಹುದು. ಆದರೆ ರಾಜೀನಾಮೆ ವಾಪಸ್‌ ಪಡೆಯಲು ಏ. 22 ಕೊನೆಯ ದಿನವಾಗಿದೆ. ಟಿಕೆಟ್‌ಗಾಗಿ ತುರುಸಿನ ಪೈಪೋಟಿ ಇದ್ದಾಗ ಕೊನೆ ಕ್ಷಣದಲ್ಲಿ “ಬಿ’ ಫಾರಂ ನೀಡಿದ್ದೂ ಇದೆ. ಅಂತೂ ಇಂತೂ ಸೌಭಾಗ್ಯ ಬಸವರಾಜನ್‌ ಅವರಿಂದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿರುವ ಕಾಂಗ್ರೆಸ್‌ ವರಿಷ್ಠರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಚಿತ್ರನಟಿ ಭಾವನಾ ಸೇರಿದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ 23ಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ.

ಹೀಗಿರುವಾಗ ಸೌಭಾಗ್ಯ ಅವರಿಗೆ ಟಿಕೆಟ್‌ ಘೋಷಿಸಿದರೆ ಪಕ್ಷದಲ್ಲಿ ಭಿನ್ನಮತ ಭುಗಿಲೇಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಕಾಂಗ್ರೆಸ್‌ ವರಿಷ್ಠರು ನೀಡಿರುವ ಟಿಕೆಟ್‌ ಭರವಸೆ ಮೇರೆಗೆ  ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಚುನಾವಣೆ ತನಕ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿ ಅಧ್ಯಕ್ಷರು, ಶಾಸಕರಲ್ಲಿ ಮನವಿ ಮಾಡಿದ್ದೆ. ಅದರಂತೆ ರಾಜೀನಾಮೆ ನೀಡಿದ್ದೇನೆ.
 ಸೌಭಾಗ್ಯ ಬಸವರಾಜನ್‌, ಜಿಪಂ ಅಧ್ಯಕ್ಷರು.

ಸರ್ಕಾರಿ ರಜಾ ದಿನಗಳು ಸೇರಿದಂತೆ ರಾಜೀನಾಮೆ ಅಂಗೀಕಾರಕ್ಕೆ 15 ದಿನ ಕಾಲಾವಕಾಶ ಇರುತ್ತದೆ. ಸೌಭಾಗ್ಯ ಬಸವರಾಜನ್‌ ರಾಜೀನಾಮೆ ನೀಡಿರುವ ವಿಚಾರ ತಿಳಿದಿಲ್ಲ. ಯಾವುದೇ ಸಂದರ್ಭದಲ್ಲಿ ಅವರು ವಾಪಸ್‌ ಪಡೆಯುವ ಅಧಿ ಕಾರ ಹೊಂದಿದ್ದಾರೆ. 
 ಪಿ.ಎನ್‌. ರವೀಂದ್ರ, ಜಿಪಂ ಸಿಇಒ.

ಸೌಭಾಗ್ಯ ಬಸವರಾಜನ್‌ ಮತ್ತು ನಾನು ಹೊಸದುರ್ಗದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಮಡಿವಾಳ ಮಾಚಿದೇವ ಸ್ವಾಮೀಜಿ ಅವರನ್ನು ಹಾಗೂ ಬೆಂಗಳೂರಿನಲ್ಲಿ ಜಿಲ್ಲೆಯ ಮೂವರು ಕಾಂಗ್ರೆಸ್‌ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ್ದೆವು. ರಾಜೀನಾಮೆ ನೀಡುವಂತೆ ಅವರೆಲ್ಲರೂ ಸೂಚಿಸಿದ್ದರು. ಆದರೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್‌ ಭರವಸೆ ನೀಡಿದರೆ ರಾಜೀನಾಮೆ ನೀಡುವುದಾಗಿ ಸೌಭಾಗ್ಯ ಹೇಳಿದ್ದರು. ಈಗ ನೀಡಿರುವ ರಾಜೀನಾಮೆ ಅಂಗೀಕಾರವಾದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ.
 ವಿಶಾಲಾಕ್ಷಿ ನಟರಾಜ್‌, ಜಿಪಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next