ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ರೈತರ ಸಮಸ್ಯೆ ಆಲಿಸಲು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟನಲ್ಲಿ ಗ್ರಾಮ ವಾಸ್ತವ್ಯ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 15ರಿಂದ ಆರಂಭಿಸುತ್ತಿದ್ದು, 50 ದಿನಗಳವರೆಗೆ ಇದನ್ನು ಕೈಗೊಳ್ಳುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್‌ನ ನಗರ ಘಟಕ ಆಯೋಜಿಸಿದ್ದ “ಕುಮಾರಪಥ’ ಕಾರ್ಯಕ್ರಮಕ್ಕೆ ತೆರಳಲೆಂದು ಇಲ್ಲಿನ ಕೋರ್ಟ್ ವೃತ್ತದ ಸಾಯಿಬಾಬಾ ಮಂದಿರದಿಂದ ಅಂಗವಿಕಲರೊಂದಿಗೆ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರಕಾರ ರೈತರ 50 ಸಾವಿರ ರೂ. ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಮಾಡಿದೆಯಾದರೂ, ಹಲವಾರು ಷರತ್ತುಗಳನ್ನು ವಿಧಿಸಿದೆ.
ಸರಕಾರ ಸಾಲ ಮನ್ನಾ ಘೋಷಿಸಿದ ಅನಂತರವೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದ್ದರಿಂದ ಈ ಭಾಗದಲ್ಲಿ ರೈತರ ಭೇಟಿ ಹಾಗೂ ಸಂವಾದ ಹಮ್ಮಿಕೊಂಡಿದ್ದೇನೆ. ಅದೇ ರೀತಿ ವಿಜಯಪುರದಲ್ಲಿ ಬೃಹತ್ ರೈತರ ಸಮಾವೇಶ ಆಯೋಜಿಸಲಾಗುವುದು ಎಂದರು.
ಉಕ ದಲ್ಲಿ 45 ಸ್ಥಾನ ಗೆಲ್ಲುವ ವಿಶ್ವಾಸ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸುಮಾರು 45 ಸ್ಥಾನಗಳಲ್ಲಿ ಗೆಲುವು ಸಾಧಿಸಿ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದು, ಸೂಕ್ತ ಸಮಯದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದಲೂ ಸ್ಪರ್ಧಿಸಬೇಕೆಂಬ ಒತ್ತಡ ಇದೆ. ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಒತ್ತಾಯಿಸಿದ್ದು, ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಜೆಡಿಎಸ್ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಲಿದ್ದು, ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದರು.
ತಪ್ಪು ಮುಚ್ಚಲು ಪ್ರತ್ಯೇಕ ಧ್ವಜ ಪ್ರಸ್ತಾಪ: ರಾಜ್ಯದಲ್ಲಿ ಪ್ರತ್ಯೇಕ ಕನ್ನಡ ಧ್ವಜಕ್ಕೆ ವಿರೋಧವಿಲ್ಲ, ಆದರೆ ಪ್ರಸ್ತುತ ಇರುವ ಧ್ವಜ ಚೆನ್ನಾಗಿಯೇ ಇದೆ. ಆದರೆ ರಾಜ್ಯ ಸರಕಾರ ಇಲ್ಲದ ಸಮಸ್ಯೆ ಸೃಷ್ಟಿಗೆ ಮುಂದಾಗಿದೆ. ರಾಜ್ಯ ಸರಕಾರ ಭ್ರಷ್ಟಾಚಾರ, ಸಮಸ್ಯೆಗಳ ಕುರಿತು ಜನರ ಗಮನ ಬೇರೆ ಕಡೆ ಸೆಳೆಯಲು ಇಂಥ ವಿಷಯ ಪ್ರಸ್ತಾಪಿಸಿದೆ. ಇದರ ಬದಲು ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿ ಎಂದರು. ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್. ಕೋನರಡ್ಡಿ ಸೇರಿದಂತೆ ಅನೇಕರಿದ್ದರು.