Advertisement

ಮರೆಯಲಾಗದ ಆ ಭಾನುವಾರ

05:27 PM Apr 03, 2022 | Team Udayavani |

ಅದೊಂದು ಜೀವನದ ಅದ್ಭುತವಾದ ದಿನ ಎಂದೇ ಹೇಳಿದರೂ ತಪ್ಪಾಗಲಾರದು. ಆಗಷ್ಟೇ ಮುಂದಿನ ಓದಿನ ಸಲುವಾಗಿ ಮನೆಯಿಂದ ಹೊರಟು, ಕಾಲೇಜು ಎಂಬ, ಮಹಾಸಾಗರಕ್ಕೆ ಕಾಲಿಟ್ಟ ಘಳಿಗೆ ಅದು. ಎಲ್ಲವೂ ಹೊಸತು, ಎಲ್ಲಿನೋಡಿದರೂ ಪಾಲಕರು ಮಕ್ಕಳ ದಂಡು. ” ನೀವು ಫಾರ್ಮ್ ತುಂಬಿದಿರಾ? ತಂದೆಯವರ ಸಹಿ ಮಾಡಿಸಿ” ಎಂದು ಹೇಳುವ ವಾರ್ಡನ್ ಒಂದೆಡೆಯಾದರೆ, ” ಎಕ್ಸ್ ಕ್ಯೂಸಮಿ, ಈ ಕೊಲಮ್ಮಿನಲ್ಲಿ ಏನು ಬರೀಬೇಕು”? ಎಂದು ಕೇಳುವ ಹುಡುಗಿಯರ ಪ್ರಶ್ನೆ ಇನ್ನೊಂದೆಡೆ. ಹೇಗೋ ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡು ಮೊದಲ ದಿನ ಕಾಲೇಜಿಗೆ ಹೋಗುವ ಕಾತರ. ಮೊದಲ ದಿನ ಅಂದ್ರೆ ಹಾಗೆ ಅಲ್ವ ಏನೋ ಒಂದು ರೀತಿ ತಳಮಳ, ಖುಷಿ, ದುಗುಡ. ಹೀಗೆ ಸಂತಸಮಯ ವಾತಾವರಣದೊಂದಿಗೆ ಒಂದು ವಾರ ಹೇಗೆ ಮುಕ್ತಾಯವಾಯಿತು ಎಂದೇ ತಿಳಿಯಲಿಲ್ಲ.

Advertisement

ಎಂದಿನ ದಿನಚರಿಯಂತೆ ಶನಿವಾರದ ಅರ್ಧದಿನದ ತರಗತಿಯನ್ನು ಮುಗಿಸಿ ಬರುತ್ತಿರುವಾಗಲೇ, ನಮ್ಮ ಸಿನಿಯರ್ಸ್ ಗಳ ಒಂದು ಗುಂಪು ಆಳವಾದ ಚರ್ಚೆಯಲ್ಲಿ ಮುಳುಗಿಹೋಗಿತ್ತು. ನನಗೆ ಅರೆಬರೆ ಕೇಳುವ, “ನಾಳೆ”, “ಬಂದೇಬರ‍್ತಾರೆ” ಎನ್ನುವ ಶಬ್ಧಗಳು. ಯಾವಾಗಲೂ ಹಾಗೆ ಈ ಅರ್ಧಂಬರ್ಧ ಶಬ್ಧಗಳು ಪೂರ್ತಿ ತಲೆಯನ್ನೇ ಕೆಡಿಸುತ್ತವೆ. ಹಾಗೆ ಇನ್ನು ತಲೆಕೆಡಿಸಿಕೊಳ್ಳಲಾಗದೇ ಅದೇ ಗುಂಪಿನಲ್ಲಿದ್ದ ಒಬ್ಬರನ್ನು ಅಕ್ಕಾ, ಎಂದು ಕರೆದೆ. ಅವರಲ್ಲಿ “ನಾಳೆ ಯಾರು ಬರುತ್ತಾರೆ?, ಏನು ವಿಷಯ” ಎಂದು ಕೇಳಿದೆ. ಅಷ್ಟು ಕೇಳಿದ್ದೆ ತಡ ಅವರ ಮುಖದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ. “ಯಾರು ಅಂತ ಕೇಳ್ತಿದಿರಲ್ಲಾ? ಫಸ್ಟ್ ಇಯರ್‌ರಾ? ವಿಷಯ ಗೊತ್ತಿಲ್ವ” ಎಂದರು. ನಾನು ಅರೆ ಮಂದಹಾಸದಲ್ಲಿ “ಇಲ್ಲ ಏನು ವಿಷಯ”  ಎಂದೆ. ಅದಕ್ಕವರು, “ಇಡೀ ಹೊಸ್ಟೆಲ್ ನ ಜೀವ ಅವರು, ವಾರಕ್ಕೊಮ್ಮೆ ಬರುತ್ತಾರೆ, ಒಮ್ಮೊಮ್ಮೆ ಆತುರ ಇದ್ದರೆ ಬರುವುದಕ್ಕು ಸಹ ಆಗುವುದಿಲ್ಲ ಅವರಿಗೆ. ಕೇವಲ ಹುಡುಗಿಯರಿಗಷ್ಟೇ ಅಲ್ಲ. ಹುಡುಗರಿಗೂ ಅವರು ಅಂದ್ರೆ ಅಷ್ಟು ಅಚ್ಚು-ಮೆಚ್ಚು. ಅವರ ಹುಣ್ಣಿಮೆ ಚಂದ್ರನಂತಹ ಮುಖವನ್ನು ನೋಡಲು ಬೆಳಗ್ಗೆ 7.30 ರಿಂದ ಕಾಯ್ತಾ ಇರುತ್ತಾರೆ.” ಎಂದರು.

ಅವರು ಹೇಳುತ್ತಾ ಇರುವಾಗ ನನಗೆ ಎಲ್ಲಿಲ್ಲದ ಉತ್ಸಾಹ, ಒಂದು ರೀತಿಯ ಪುಳಕ ಮನಸ್ಸಿನಲ್ಲಿ. ಯಾರಿವರು? ಕೇಳಿದರೇ ಇಷ್ಟು ಪುಳಕಿತ ಭಾವ, ಇನ್ನು ಅವರನ್ನು ನೋಡಿದರೆ ಹೇಗೆ ಎಂದು ಭಾವಿಸಿ ರೂಮಿನ ಒಳಗೆ ಹೋದೆ. ಆ ಶನಿವಾರದ ರಾತ್ರಿ ಕಳೆದರೆ ಸಾಕು ಎನ್ನುವಷ್ಟು ತವಕ ಅವರನ್ನು ಕಾಣಲು. ಅದೇ ಗುಂಗಿನಲ್ಲಿ ನಿದ್ರಾಲೋಕಕ್ಕೆ ಯಾವಾಗ ಜಾರಿದೆ ಎಂದು ತಿಳಿಯದು. ಒಮ್ಮೆಲೆ ಅಲಾರಂ ಶಬ್ಧ ಕಿವಿಗೆ ಬಡಿದಾಗಲೇ ಗೊತ್ತಾಗಿದ್ದು ಘಂಟೆ 7.30 ಆಗಿದೆ ಎಂದು. ದಡ್ಡನೆ ಎದ್ದು ಕುಳಿತು ಬೇಗನೆ ತಯಾರಿ ಮಾಡಿ ಕೆಳಗಡೆ ಅದ್ಭುತವನ್ನು ನೋಡಲು ಹೊರಟೆ.  ಅಲ್ಲಿ ನೋಡಿದರೆ ಹಾಸ್ಟಲ್‌ನ ಬುಡದಿಂದ ಶುರುವಾದ ಸರತಿ ಸಾಲು ಹಾಸ್ಟೆಲ್ ತುದಿಯವರೆಗೂ ಇತ್ತು. ಆಗಲೇ ಅಂದುಕೊಂಡೆ ಇವರನ್ನು ನೋಡುವುದು ಅಷ್ಟು ಸುಲಭವಾದ ಕೆಲಸವಲ್ಲ ಎಂದು.

ಒಬ್ಬಬ್ಬರಾಗಿ ಮುಂದೆ ಮುಂದೆ ಹೋಗುತ್ತಿದ್ದಂತೆಯೇ ತಳಮಳ ಜಾಸ್ತಿಯಾಗತೊಡಗಿತು. ಅವರ ಧ್ವನಿಯೂ ಸ್ವಲ್ಪ ಸ್ವಲ್ಪವೇ ಕೇಳತೊಡಗಿತು. ಹಾಗೆಯೆ ಸ್ವಲ್ಪ ಮುಂದೆ ಹೋದಂತೆ ಅವರ ಘಮಘಮಿಸುವ ಸುವಾಸಿತ ಚಿತ್ರಣವೂ ಕಾಣಿಸಿತು. ಹೇಳಿದ್ದಕ್ಕೆ ಸರಿಸಾಟಿ ಎನ್ನುವಂತೆ ಹುಣ್ಣಿಮೆಯ ಚಂದ್ರನಂತೆ ಗುಂಡಗೆ ಇರುವ ಅವರ ಮುಖ, ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿದ್ದರೂ ಅದಕ್ಕಾಗಿಯೇ ಮುಗಿ ಬೀಳುವ ಹುಡುಗ ಹುಡುಗಿಯರ ದಂಡು. ಅವರ ಪಕ್ಕದಲ್ಲಿಯೇ ನಿಂತಿದ್ದ ಇನ್ನಿಬ್ಬರು ಗಣ್ಯರಂತು ಅವರ ವ್ಯಕ್ತಿತ್ವವನ್ನು ಇಮ್ಮಡಿಸುವಂತೆ ಮಾಡುತ್ತಿದ್ದರು.

ನಿನ್ನೆ ರಾತ್ರಿಯಿಡಿ ಎದುರು ನೋಡುತ್ತಿದ್ದ ಘಳಿಗೆ ಬಂದೇಬಿಟ್ಟಿತು. ಅವರನ್ನು ನೋಡಿದಾಗ ಆದ ಖುಷಿಗೆ ಪಾರವೇ ಇರಲಿಲ್ಲ. ಕೊನೆಗೂ 7.30 ರಿಂದ ಕಾದ ನನಗೆ 7.30ಕ್ಕೆ ಅವರನ್ನು ಮುಟ್ಟುವ ಭಾಗ್ಯ ದೊರೆಯಿತು.  ಆ ಮೃದು ಹಸ್ತವನ್ನು ನನ್ನ ಹಸ್ತದಲ್ಲಿ ಹಿಡಿದಾಗಲೇ ನನಗೆ ಸಾರ್ಥಕತೆಯ ಭಾವ ದೊರೆತಿದ್ದು. ಎಂದಿಗೂ ಮರೆಯದ ಆ ಭಾನುವಾರದ ಚಂದ್ರನಂತಹ ಗುಂಡನೆಯ, ಮೃದು ಮನಸ್ಸಿನ “ದೋಸೆ” ಯನ್ನು ನೋಡಲು ಪ್ರತಿವಾರವೂ ಸರತಿಯಲ್ಲಿಯೇ ನಿಲ್ಲುವ ಭಾಗ್ಯ ನಮ್ಮದಾಗಿದೆ.

Advertisement

-ಭಾರತಿ ಹೆಗಡೆ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next