ಮಂಗಳೂರು: ವಿವಿಧ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ನಡೆಯುತ್ತಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಈ ವರ್ಷವೂ ಪದವಿ ತರಗತಿಗಳು ವಿಳಂಬವಾಗಿ ಆರಂಭವಾಗಲಿವೆ.
ಆ. 14ರಿಂದ ಪದವಿ ತರಗತಿಗಳನ್ನು ಆರಂಭಿಸಲು ಈಗಾಗಲೇ ನಿಗದಿಪಡಿಸಲಾಗಿದೆ. ಆದರೆ ವಿ.ವಿ.ಯ 2, 4 ಹಾಗೂ 6ನೇ ಸೆಮಿಸ್ಟರ್ ಪರೀಕ್ಷೆಗಳು ಜು. 18ರ ಬಳಿಕ ಆರಂಭವಾಗಿದ್ದು, ಮಳೆಯ ಕಾರಣ ರದ್ದಾದ ಪರೀಕ್ಷೆಗಳ ಸಹಿತ ಆ. 16ರ ವರೆಗೆ ನಡೆಯಲಿವೆ. ಬಳಿಕ ಮೌಲ್ಯಮಾಪನ ನಡೆಯಬೇಕಿದೆ. ಉಪನ್ಯಾಸಕರೆಲ್ಲ ಮೌಲ್ಯಮಾಪನಕ್ಕೆ ಹೋದರೆ ಹೊಸ ಪದವಿ ತರಗತಿ ಆರಂಭಿಸುವುದು ಹೇಗೆ ಎಂಬುದು ಪ್ರಶ್ನೆ.
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಎ. 21ರಂದು ಪ್ರಕಟವಾಗಿದೆ. ಅದಾಗಿ ಕೆಲವು ದಿನಗಳ ಬಳಿಕ ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಥಮ ಪದವಿಗೆ ದಾಖಲಾತಿ ಆರಂಭವಾಗಿತ್ತು. ಆದರೆ ಮಕ್ಕಳಿಗೆ ಇನ್ನೂ ತರಗತಿಗೆ ಬರುವ ಅವಕಾಶ ಲಭಿಸಿಲ್ಲ. ಆನ್‌ಲೈನ್ ತರಗತಿ ಬಗ್ಗೆ ಚರ್ಚೆ ನಡೆಯಿತಾದರೂ ಅದು ಜಾರಿಗೆ ಬರಲಿಲ್ಲ. ಸ್ವಾಯತ್ತ ಕಾಲೇಜುಗಳಲ್ಲಿ ಮಾತ್ರ ಈಗಾಗಲೇ ಪದವಿ ತರಗತಿ ನಡೆಯುತ್ತಿದೆ.
ಆ. 14ರಂದು 2023-24ರ ಪದವಿ ತರಗತಿ ಆರಂಭಕ್ಕೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಪರೀಕ್ಷೆ- ಮೌಲ್ಯಮಾಪನದಿಂದ ಕಷ್ಟವಾಗಬಹುದು ಎಂದು ಪ್ರಾಧ್ಯಾಪಕರು ವಿ.ವಿ. ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಆ. 8ರಂದು ನಡೆಯುವ ವಿ.ವಿ. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸಲಾಗುವುದು.
– ಪ್ರೊ| ಜಯರಾಜ್ ಅಮೀನ್, ಕುಲಪತಿ (ಪ್ರಭಾರ) ಮಂಗಳೂರು ವಿ.ವಿ.
ದಿನೇಶ್ ಇರಾ