Advertisement
ಇತ್ತೀಚೆಗೆ, ಮಲಯಾಳಂನ “ಗೃಹಲಕ್ಷ್ಮಿ’ ಮ್ಯಾಗಜಿನ್‌ನ ಮುಖಪುಟ ಬಹಳ ಸುದ್ದಿ ಮಾಡಿತ್ತು. ತಾಯಿಯೊಬ್ಬಳು ಮಗುವಿಗೆ ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುವ ಚಿತ್ರಕ್ಕೆ ನಟಿಯೊಬ್ಬರು ರೂಪದರ್ಶಿಯಾಗಿದ್ದರು. ಆ ಫೋಟೋ ಎಲ್ಲರ ಬಾಯಲ್ಲೂ, ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ಆ ಕುರಿತು ಪರ, ವಿರೋಧ ಚರ್ಚೆ ನಡೆಯಿತು. ಗೌಪ್ಯವಾಗಿರಬೇಕಾದ ಒಂದು ಶ್ರೇಷ್ಠ ಕ್ರಿಯೆಯನ್ನು ಪ್ರದರ್ಶನ ಮಾಡಿ ಸ್ತ್ರೀಯರ ಮರ್ಯಾದೆಯನ್ನು ಆ ಚಿತ್ರನಟಿ ಹರಾಜಿಗಿಟ್ಟಿದ್ದಾರೆ ಎಂದು ಮಹನೀಯರೊಬ್ಬರು ಕೋರ್ಟಿನ ಮೆಟ್ಟಿಲನ್ನೂ ಹತ್ತಿದ್ದರು.
Related Articles
Advertisement
ಹೆಣ್ಣು ತನ್ನ ಮಗುವಿಗೆ ಹಾಲೂಡಿಸುವಾಗ ಸ್ವತಃ ಅವಳ ಗಂಡನಿಗೂ ಅಲ್ಲಿ ಪ್ರವೇಶ ನಿಷಿದ್ಧ. ಹೀಗಿರುವಾಗ ಸಾರ್ವಜನಿಕ ಪ್ರದರ್ಶನ ಎಲ್ಲಿ ಬಂತು? ಬಾಣಂತಿ ಇರುವ ಮನೆಯಲ್ಲಿ ಹಿರಿಯ ಅಜ್ಜಿ ಇದ್ದರೆ, ಹೇಗೆ ಹಾಲು ಕುಡಿಸಬೇಕು, ಎಲ್ಲರಿಗೂ ಕಾಣದಂತೆ ಹೇಗೆ ಮರೆಮಾಡಿಕೊಳ್ಳಬೇಕು ಎಂಬ ಪ್ರಥಮ ಪಾಠ ಮಗುವಿನ ತಾಯಿಗೆ ಆಗಿರುತ್ತದೆ. ಗಂಡ ಹೆಂಡಿರ ಸಂಬಂಧ ಎಷ್ಟು ಖಾಸಗಿಯೋ, ಅಷ್ಟೇ ಖಾಸಗಿ ಕ್ರಿಯೆ ಈ ಸ್ತನ್ಯಪಾನ.
ಅಕಸ್ಮಾತ್ ಸಾರ್ವಜನಿಕ ಸ್ಥಳಗಳಲ್ಲಿ ತಾಯಿ ತನ್ನ ಮಗುವಿಗೆ ಹಾಲುಣಿಸಬೇಕಾಗಿ ಬಂದರೂ ಮರೆಗೆ ಹೋಗಿ ಜನರಿಗೆ ಬೆನ್ನು ಮಾಡಿ ಕುಳಿತು ಕುಡಿಸುತ್ತಾಳೆ. ಸೆರಗನ್ನು ಮರೆ ಮಾಡಿಕೊಳ್ಳುತ್ತಾಳೆಯೇ ವಿನಾ ಜನರಿಗೆ ಕಾಣುವ ಹಾಗೆ ಹಾಲು ಕುಡಿಸುವುದಿಲ್ಲ. ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ಪ್ರಕಟಿಸಿದ್ದರ ಉದ್ದೇಶ, ವಿಶ್ವದಲ್ಲಿರುವ ಎಲ್ಲಾ ಸ್ತ್ರೀಯರೂ ಅಥವಾ ಎಲ್ಲಾ ಅಮ್ಮಂದಿರೂ ಒಂದೇ. ಇಲ್ಲಿ ಭೇದಭಾವವಿಲ್ಲ ಎಂಬುದೇ ಆಗಿರಬಹುದು.
ಆದರೆ ಸಾರ್ವಜನಿಕವಾಗಿ ಯಾವುದೇ ಮುಜುಗರವಿಲ್ಲದೆ ಹೆಣ್ಣು ಗಂಡು ಪರಸ್ಪರ ಚುಂಬಿಸಿಕೊಳ್ಳುವಂಥ ಪಾಶ್ಚಾತ್ಯ ದೇಶಗಳಲ್ಲಿ ಸಾರ್ವಜನಿಕವಾಗಿ ಹಾಲು ಕುಡಿಸುವುದು ಅಲ್ಲಿನ ಸಂಸ್ಕೃತಿಗೆ ತಪ್ಪು ಎನಿಸುವುದಿಲ್ಲ. ಅಂಥ ದೇಶಗಳಲ್ಲಿ ಮಾತ್ರ ಹಾಲುಡಿಸುವ ಸಂದರ್ಭದ ಸಾರ್ವಜನಿಕ ಪ್ರದರ್ಶನ ಸರಿಯೆನಿಸಬಹುದೇನೋ? ತಾಯಿ ತನ್ನ ಮಗುವಿಗೆ ಹಾಲೂಡಿಸುವುದು ಅತ್ಯಂತ ಪವಿತ್ರವಾದ ಕೆಲಸ. ಅದರಲ್ಲೂ ಕೊಂಕು ತೆಗೆಯುವ ಜನಕ್ಕೆ ಇನ್ನೆಂಥಾ ಹುಳುಕು ಮನಸ್ಸಿರಬಹುದು ಎನ್ನುವವರಿದ್ದಾರೆ.
ಅಕ್ಕಮಹಾದೇವಿ, ಲೌಕಿಕ ಬಂಧನಗಳ ಗೊಡವೆಯೇ ಬೇಕಿಲ್ಲವೆಂದು ಉಟ್ಟ ಬಟ್ಟೆಯನ್ನೂ ಎಸೆದು ಬೆತ್ತಲೆಯಾಗಿ, ತನ್ನ ದಟ್ಟ ತಲೆಗೂದಲಿನಿಂದ ಮಾನವನ್ನು ಮುಚ್ಚಿಕೊಂಡಿರುತ್ತಾಳೆ. ಅವಳು ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು, “ತಾಯಿ, ಲೌಕಿಕದ ಗೊಡವೆಯೇ ಬೇಡವೆಂದು ಉಟ್ಟ ಬಟ್ಟೆಯನ್ನೂ ಬಿಸುಟವಳು ನೀನು. ಕೇಶದಿಂದ ನಿನ್ನ ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಉದ್ದೇಶವೇನು? ನಿನ್ನಲ್ಲಿ ಇನ್ನೂ ಮನೋವಿಕಾರಗಳೇನಾದರೂ ಉಳಿದಿದೆಯೇ?’ ಎಂದು ಕೇಳುತ್ತಾರೆ.
ಅದಕ್ಕೆ ಅಕ್ಕ ಉತ್ತರಿಸುತ್ತಾಳೆ, “ಪ್ರಭುವೇ, ಕೇಶದಿಂದ ಮೈಮುಚ್ಚಿಕೊಂಡಿರುವುದು ನನ್ನ ಮನೋವಿಕಾರಕ್ಕಾಗಿ ಅಲ್ಲ. ನಿಮ್ಮಲ್ಲಿ (ಸಾರ್ವಜನಿಕರಲ್ಲಿ) ಮನೋವಿಕಾರಗಳೇನೂ ಮೂಡದಿರಲಿ ಎಂದು’. ಸಾರ್ವಜನಿಕವಾಗಿ ತಾಯಿ ತನ್ನ ಮಗುವಿಗೆ ಹಾಲೂಡಿಸಬೇಕಾದಾಗ ಸೆರಗಿನಿಂದ ಮರೆಮಾಡಿಕೊಳ್ಳುವುದು, ಕಂದನಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರವಾದ ಕಾರ್ಯವೇ ಆದರೂ ಅದನ್ನು ನೋಡುವವರಿಗೆ ಕೆಟ್ಟ ಯೋಚನೆ ಬಾರದಿರಲಿ ಎಂಬ ಉದ್ದೇಶದಿಂದ ಇರಬಹುದಲ್ಲವೇ?
ತಾಯಿಯ ಹಾಲು ಅತ್ಯಂತ ಪುಷ್ಟಿದಾಯಕವಾದದ್ದು , ಅದರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಎಲ್ಲ ತಾಯಂದಿರೂ ಕಡ್ಡಾಯವಾಗಿ ಮಗುವಿಗೆ ಹಾಲೂಡಿಸಬೇಕು ಎಂದು ಪ್ರಚಾರ ಮಾಡುವುದು ಒಳ್ಳೆಯದೇ. ಆದರೂ ಹೀಗೆ ಸಾರ್ವಜನಿಕ ವಸ್ತು ಪ್ರದರ್ಶನಕ್ಕಿಟ್ಟಂತೆ ತೋರುವುದು ಚೆಂದವಲ್ಲ. ತಾಯಿ ತನ್ನ ಮಗುವಿಗೆ ಹಾಲೂಡಿಸುವ ಕ್ರಿಯೆಯಲ್ಲೂ ಒಂದು ಘನತೆಯಿದೆ, ಗೌರವವಿದೆ. ಅದನ್ನು ನಾವೆಂದೂ ಪ್ರದರ್ಶನದ ವಸ್ತುವಾಗಿಸಬಾರದು.
* ವೀಣಾ ರಾವ್