Advertisement

ಆ ಪುಟ್ಟ ಮಮ್ಮುಟ್ಟಿ 

12:30 AM Jan 11, 2019 | |

ನಾಲ್ಕು ತಿಂಗಳ ಶಿಕ್ಷಕ ತರಬೇತಿಯನ್ನು ಪೂರ್ತಿಗೊಳಿಸಲು ಶಾಲೆಯಿಂದ ಈಗಷ್ಟೇ ಹೊರಗಿಳಿದಿದ್ದೇವೆ. ಮನಸ್ಸು ಏನೋ ಕಳೆದುಕೊಂಡ ಥರ ಭಾರವಾಗಿದೆ. ಜುಲೈ ತಿಂಗಳಿನಿಂದ ಹಿಡಿದು ಅಕ್ಟೋಬರ್‌ ತನಕ ದಿನ ಗಳು ಉರುಳಿ ಹೋದದ್ದೇ ತಿಳಿಯಲಿಲ್ಲ. ಆದರೆ, ಶಾಲೆಯಲ್ಲಿ ಕಳೆದ ಪ್ರತಿಯೊಂದು ಗಳಿಗೆಯೂ ಮಧುರ ಕ್ಷಣಗಳಾಗಿದ್ದವು. ನಾನೂ ಸೇರಿದಂತೆ ಐವರು ಹುಡುಗಿಯರ ತಂಡದೊಂದಿಗೆ ಕಾಸರಗೋಡಿನ ಹೃದಯ ಭಾಗದಲ್ಲಿರುವ ಬಿಇಎಂ ಪ್ರೌಢಶಾಲೆಗೆ ತರಬೇತಿಗಾಗಿ ಹೋಗಿ ದ್ದೆವು. “ಅಧ್ಯಾಪಿಕೆಯರು ಸ್ವಲ್ಪ ಚೆಂದ ಇದ್ದರೆ ವಿದ್ಯಾರ್ಥಿಗಳು ತುಂಬಾ ಮೆಚ್ಚಿಕೊಳ್ಳುತ್ತಾರೆ’ ಎಂಬ ವಿಚಾರವನ್ನು ಈ ಹಿಂದೆ ಇದೇ ಶಾಲೆಗೆ ವಿಮರ್ಶೆ ಹಾಗೂ ಪ್ರಾತ್ಯಕ್ಷಿಕೆ ಪಾಠಕ್ಕೆಂದು ಭೇಟಿ ನೀಡಿದ್ದಾಗ ಗಮನಿಸಿದ್ದೆ. ಹಾಗಾಗಿ, ಯಾವುದೇ ಶುಭ ನಿರೀಕ್ಷೆ ನನಗಿರಲಿಲ್ಲ. ಇನ್ನು ನನ್ನ ಕಥೆ ಹೇಳುವುದಾದರೆ, ಆ ದೇವರು ಒಂದು ಚೂರು ಸೌಂದರ್ಯವಾಗಲಿ, ಬಿಳಿಯ ವರ್ಣವನ್ನಾಗಲೀ ನನಗಂತು ದಯಪಾಲಿಸಲಿಲ್ಲ. ಆದರೆ ನನ್ನ ಜೊತೆಗಿದ್ದ ನಾಲ್ವರಿಗೂ ಇವೆಲ್ಲವನ್ನೂ ಭಗವಂತ ಕರುಣಿಸಿದ್ದರು. ಆಗ ನನ್ನ ಮುಖವನ್ನೇ ವಿದ್ಯಾರ್ಥಿಗಳು ನೋಡಲ್ಲ ಎಂದೇ ನಾನು ಭಾವಿಸಿಕೊಂಡಿದ್ದೆ.

Advertisement

ಶಾಲೆಗೆ ಹೋಗಿ ಮೂರು ದಿವಸದ ಬಳಿಕ ಪಾಠ ಬೋಧನೆಗಾಗಿ ತರಗತಿಗೆ ಹತ್ತಿಕೊಂಡದ್ದಾಯಿತು. ಮೊದಲನೆಯ ಪಿರಿಯಡ್ಡು ಕಳೆದು ಮೂರನೇ ಪಿರಿಯಡ್ಡು 8ನೇ “ಸಿ’ ತರಗತಿಗೆ ಮಾರ್ಗದರ್ಶಕರೊಂದಿಗೆ ಹೋದೆ. ಜೊತೆಯಲ್ಲಿ ಶಿಕ್ಷಕ ತರಬೇತಿ ಕೇಂದ್ರದ ಅಧ್ಯಾಪಿಕೆಯೂ ಇದ್ದರು. ಅಬ್ಟಾ ! ತರಗತಿ ಪೂರ್ತಿ ವಿದ್ಯಾರ್ಥಿಗಳು. ಪಾಠ ಬೋಧಿಸು ತ್ತಿರುವ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳ “ತಾಳಮದ್ದಳೆ’ಯೇ ನಡೆಯುತ್ತಿತ್ತು. ಆ ದಿವಸ ನಾನೇನೂ ಮಾತಾಡಲಿಲ್ಲ. ಯಾಕೆಂದರೆ, ನನ್ನ ಮಾರ್ಗದರ್ಶಕರಿಗೆ ಇಷ್ಟವಾಗದೇ ಹೋದರೆ? ಎಂದು ಸುಮ್ಮಗಾಗಿದ್ದೆ. ಆದರೆ, ಮಾರನೆಯ ದಿನ ಇದೇ ತರಗತಿಗೆ ಮತ್ತೆ ಹೋಗಿದ್ದೆ. ಆವಾಗಲೂ ನಿನ್ನೆಯ ಹಾಗೆ ವಿದ್ಯಾರ್ಥಿಗಳು ಮಾತನಾಡುತ್ತಿದ್ದರು. ಬೊಬ್ಬೆ ಹೊಡೆದು ಪಾಠ ಮಾಡುತ್ತಿರಬೇಕಾದ್ರೆ ವಿದ್ಯಾರ್ಥಿಗಳು ಗಮನಿಸದೇ ಹೋದರೆ ಯಾವ ಅಧ್ಯಾಪಿಕೆಗಾದರೂ ಸಿಟ್ಟು ಬರುವುದು ಸಹಜ ತಾನೆ? ನಾನಂತೂ ಇದ್ದ ಪ್ರಶ್ಶರಲ್ಲಿ ಗದರಿಸಿದ್ದೇ ಗದರಿಸಿದ್ದು. ಅಧ್ಯಾಪಕರಿದ್ದರೂ ನಾನು ಗಮನಿಸಲೇ ಇಲ್ಲ. ವಿದ್ಯಾರ್ಥಿಗಳು ಸುಮ್ಮನಾದರು. ಆದರೆ, ನನ್ನ ಮೇಲೆ ಅವರಿಗೆ ಕೋಪ ಮೂಡಿತ್ತು. ಮಧ್ಯಾಹ್ನ ವಿದ್ಯಾರ್ಥಿಗಳ ಮುಖದಲ್ಲಿ ಒಂಚೂರೂ ನಗುವಿರಲಿಲ್ಲ. ಎಲ್ಲರ ಮುಖ ಊದಿಕೊಂಡಿತ್ತು. ಇತ್ತ ನನ್ನ ಸಹಪಾಠಿಗಳಾದ ಸ್ವಾತಿ ಹಾಗೂ ನಿಶಾ ಇವರಿಬ್ಬರ ಹಿಂದೆ ಮಕ್ಕಳೆಲ್ಲರೂ “ಟೀಚರ್‌’ ಎನ್ನುತ್ತ ಸೆರಗಿನ ಹಿಂದೆ ಬಿದ್ದಿದ್ದರು. ಆದರೆ, ನನ್ನ ಬಳಿಗೆ ಯಾರೂ ಬರಲಿಲ್ಲ. ನನಗೆ ತುಂಬಾನೆ ಬೇಸರವಾಯಿತು.

ಹೀಗೆ ಎರಡು ದಿವಸದ ಬಳಿಕ ಓರ್ವ ಬಾಲಕ, “ಟೀಚರ್‌’ ಎಂದು ಕರೆದುಕೊಂಡು ನನ್ನ ತಾವೇ ಬಂದು ನಗುಬೀರಿ ನಿಂತನು. ಆತನ ಕರೆಗೆ ಓಗೊಟ್ಟು ನಾನೂ ನಕ್ಕೆ. ಮರುದಿನ ಭೋಜನದ ವೇಳೆಗೆ ಅದೇ ಬಾಲಕ ಮತ್ತೆ ಕಾಣಿಸಿಕೊಂಡನು. ಜೊತೆಯಲ್ಲಿದ್ದ ಆತನ ಗೆಳೆಯನಲ್ಲಿ “ಎರ್ರಾ ಟೀಚರ್‌’ (ಮಲೆಯಾಳದಲ್ಲಿ) ಎಂದು ನನ್ನತ್ತ ಬೆರಳು ತೋರಿ ನಗು ಬೀರಿದನು. ನನಗಂತೂ ಖುಷಿಯೋ ಖುಷಿ. ನಾನು ಎಲ್ಲೇ ಇದ್ದರೂ ಆ ಬಾಲಕ ಓಡಿಬಂದು, “ಟೀಚರ್‌’ ಎಂದು ಕರೆದು ನಗುತ್ತಿದ್ದನು. ಆದರೆ, ಆತನನ್ನು ನನ್ನ ತರಗತಿಯಲ್ಲಿ ನೋಡಿಯೂ ಇರಲಿಲ್ಲ. ನಾನು ಆತನ ತರಗತಿಗೆ ಹೋಗಿಯೂ ಇರಲಿಲ್ಲ. ಆದ್ದರಿಂದ ಆತನ ಹೆಸರು ಕೇಳಿ ತಿಳಿದುಕೊಂಡೆನು. ಮರುದಿನ ಮಧ್ಯಾಹ್ನದ ವೇಳೆಗೆ ಬಾಲಕನ ಜೊತೆಗಿದ್ದ ಗೆಳೆಯನನ್ನು ಮಾತ್ರ ಗಮನಿಸಿದೆ. ಆದರೆ, ನನ್ನಲ್ಲಿ ನಗುತ್ತಿದ್ದ ಬಾಲಕನಿರಲಿಲ್ಲ. ಹಾಗಾಗಿ, ಆತನ ಗೆಳೆಯನಲ್ಲಿ ವಿಚಾರಿಸಿಕೊಂಡಾಗ, “ಅವನು ಫಿಲ್ಮ್ನಲ್ಲಿ ಅಭಿನಯಿಸುವುದಕ್ಕಾಗಿ ಹೋಗಿದ್ದಾನೆ’ ಎಂದು ಉತ್ತರಿಸಿದನು. ನಾನು ಶಾರ್ಟ್‌ ಫಿಲ್ಮೋ, ನಾಟಕವೋ ಆಗಿರಬೇಕು ಎಂದು ಆಶ್ಚರ್ಯಚಕಿತಳಾಗಿ ಚಿಂತಿಸುತ್ತ ಹಿಂತಿರುಗಿದೆ. ಇದಾದ ಬಳಿಕ ಆತನನ್ನು ನಾನು ನೋಡಲೇ ಇಲ್ಲ. ಎಲ್ಲಿ ಹೋದನೋ ತಿಳಿಯದು. 

ಇಷ್ಟಾಗುವ ಹೊತ್ತಿಗೆ ನನ್ನ ತರಗತಿಯ ವಿದ್ಯಾರ್ಥಿಗಳೆಲ್ಲರ ಮುಖದಲ್ಲಿಯೂ ನಗುವಿನ ಹೂ ಅರಳಿತ್ತು. ವಿದ್ಯಾರ್ಥಿಗಳೊಂದಿಗೆ ಚೆನ್ನಾಗಿಯೇ ಬೆರೆತು ಹೋಗಿದ್ದೆವು. ದಿನಗಳುರುಳಿ ಓಣಂ ಹಬ್ಬದ ಸಲುವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಲಾಯಿತು. ತರಗತಿ, ಪಾಠ- ಇವು ಯಾವುದೂ ಇಲ್ಲದ ಕಾರಣ ಮನೆಯಲ್ಲಿ ಹಾಯಾಗಿದ್ದೆ. ಅದೊಂದು ದಿವಸ ನನ್ನ ಗೆಳತಿಯರಿಬ್ಬರು ಬಂದು, “ಕಾಸರಗೋಡಿನ ಕುರಿತು ಫಿಲ್ಮ್ ನಾಡಿದ್ದು 24ರಂದು ಬಿಡುಗಡೆಯಾಗುತ್ತಿದೆ, ಹೋಗೋಣವಾ?’ ಎಂದು ನನ್ನಲ್ಲಿ ಕೇಳಿದರು. ನನ್ನ ಕೈಯಲ್ಲಿ ನಯಾಪೈಸೆ ಇಲ್ಲದಿದ್ದುದರಿಂದ “ನಾನಿಲ್ಲಪ್ಪಾ’ ಎಂದು ಕೈಮುಗಿದೆ. ಅವರಿಬ್ಬರೂ ಫಿಲ್ಮ್ನ ಟ್ರೇಲರ್‌ ನೋಡಿದ್ದ ಕಾರಣ ಅದನ್ನೇ ಚರ್ಚಿಸುತ್ತ “ಟ್ರೇಲರ್‌ ತುಂಬಾ ಚೆನ್ನಾಗಿದೆ, ಕಾಸರಗೋಡಿನ ಕುರಿತು ಹೇಳುವ ಆ ವಾಯಿಸ್‌ ಎಷ್ಟು ಕ್ಯೂಟ್‌! ಮಜಾ ಆಗಿದೆ’ ಎಂದೊಡನೆಯೇ ಟ್ರೇಲರ್‌ ವೀಕ್ಷಿಸಿದೆನು.

ಅರೆ! ನಿಜವಾಗಿಯೂ ನಮ್ಮ ಕಾಸರಗೋಡು ಕನ್ನಡ ಭಾಷೆ ಕೇಳಲು ಎಷ್ಟು ಮಜಾವಾಗಿತ್ತು. ಕಣ್ಣುಗಳು ಮುಂದಿನ ದೃಶ್ಯಗಳನ್ನು ಸವಿಯುತ್ತಿರಲು ಫ‌ಕ್ಕನೆ ಟೊಪ್ಪಿ ಹಾಕಿಕೊಂಡ ಹುಡುಗನನ್ನು ಗಮನಿಸಿತು. ಅವನೇ, ನನ್ನಲ್ಲಿ ನಗುತ್ತಿದ್ದ ಆ ಪುಟ್ಟ ಬಾಲಕ. ಆ ಕ್ಷಣಗಳಲ್ಲಿ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅದೆಷ್ಟು ಖುಷಿಯಾಗಿತ್ತು ಗೊತ್ತಾ? ಜತೆಯಲ್ಲಿದ್ದ ಗೆಳತಿಯರಲ್ಲಿ ಆತನ ಕುರಿತು ಹೇಳಿ ಹೇಳಿ ಸಂಭ್ರಮಿಸಿದೆನು. ಅವತ್ತೇ ನಿರ್ಧರಿಸಿದೆ- ಸಾಲ ಮಾಡಿಯಾದರೂ ಫಿಲ್ಮ್ ನೋಡಲೇಬೇಕೆಂದು. ಆ ದಿನ ರಾತ್ರಿ ನಿದ್ದೆ ಹಚ್ಚೋದಕ್ಕೆ ಗಂಟೆಗಳೇ ಬೇಕಾಯಿತು. ಹೀಗೆ ಶಾಲಾ ಬಾಗಿಲು ತೆರೆಯುವುದಕ್ಕೆ ಮುನ್ನ ಗೆಳತಿಯರೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡಿನ ಮೆಟ್ಟಿಲು ಹತ್ತಿ ಇಳಿದಿದ್ದೆನು.

Advertisement

ರಜೆ ಕಳೆದು ತರಗತಿಗಳು ಆರಂಭಗೊಂಡವು. ಮತ್ತೆ ನನ್ನ ಪುಟ್ಟ ನಾಯಕನಿಗಾಗಿ ಕಾದು ಕುಳಿತ ದಿನಗಳಾಗಿದ್ದವು. ಅದೊಂದು ದಿವಸ ಊಟ ಮುಗಿಸಿಕೊಂಡು ಕೈ ತೊಳೆಯುತ್ತಿರುವಾಗ ಒಬ್ಟಾಕೆ ಬಂದು, “ಟೀಚರ್‌, ಶಾಲೆಗೆ ಮಮ್ಮುಟ್ಟಿ ಬಂದಿದ್ದಾನೆ’ ಎಂದೊಡನೆಯೇ ನನ್ನ ಜೊತೆಯಲ್ಲಿದ್ದ ನಿಶಾಳನ್ನು ಕರೆದುಕೊಂಡು 8ನೇ “ಸಿ’ ತರಗತಿಯತ್ತ ಓಡಿದೆ. ಸಂಪತ್‌ ತರಗತಿಯ ವಿದ್ಯಾರ್ಥಿಗಳ ಜತೆ ಮಾತನಾಡುತ್ತಿದ್ದನು. ನಾನು ಹೋಗಿ ಬಾಗಿಲ ಬಳಿ ನಿಂತಿರುವುದನ್ನು ಗಮನಿಸಿದ ಆತನ ಗೆಳೆಯ ವೈಶಾಖ್‌ ಸಂಪತ್‌ನಲ್ಲಿ ವಿಷಯ ಸೂಚಿಸಿದ. ತತ್‌ಕ್ಷಣ ಬಂದು “ಟೀಚರ್‌ ಹೇಳಿ’ ಎನ್ನುತ್ತ ಮಾತಾಡಿಸಿದ. ಶಾಲಾವಿದ್ಯಾರ್ಥಿ ಸಮೂಹವೇ ಮೈದಾನದಲ್ಲಿ ಸೇರಿತ್ತು. ಹೆಚ್ಚೇನೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಉಳಿದವರೆಲ್ಲ ಮಮ್ಮುಟ್ಟಿ… ಮಮ್ಮುಟ್ಟಿ ಎನ್ನುತ್ತ ಮಾತನಾಡೋಕೆ ಪ್ರಯತ್ನಿಸುತ್ತಿದ್ದರು. ಇದನ್ನೆಲ್ಲ ಆತನ ಹೆತ್ತವರು ಮೂಕವಿಸ್ಮಿತರಾಗಿ ವೀಕ್ಷಿಸುತ್ತಿದ್ದರು. ಆಗ ಸಂಪತ್‌ನ ಅಮ್ಮ ಮಾತನಾಡುತ್ತ, “ಅವನಿನ್ನು ಸೋಮವಾರದಿಂದ ಶಾಲೆಗೆ ಬರುತ್ತಾನೆ’ ಎಂದು ನುಡಿದರು. “ಇನ್ನು ಬರ್ತಾನಲ್ಲ’ ಎಂಬ ಖುಷಿಯಲ್ಲಿ “ಸರಿ’ ಎನ್ನುತ್ತ ಹೆತ್ತವರಿಗೂ ಸಂಪತ್‌ಗೂ ವಿದಾಯ ಹೇಳಿದೆವು. ಮತ್ತೆ ನಾನು ಹಾಗೂ ನಿಶಾ ಈ ಎಲ್ಲ ಕ್ಷಣಗಳನ್ನು ಮೆಲುಕು ಹಾಕುತ್ತ ಗ್ರಂಥಾಲಯದಲ್ಲಿ ಕುಳಿತು ನಮ್ಮ ಕೆಲಸಗಳನ್ನು ಮುಂದುವರಿಸಿದೆವು.

ಮುಂದೆ ಸಂಪತ್‌ ನಮ್ಮೊಂದಿಗಿದ್ದ ದಿನಗಳಾಗಿದ್ದವು. ನಾನು ಎಲ್ಲೇ ಇದ್ದರೂ ಕೂಡ ಓಡಿಬಂದು ಕೈಹಿಡಿದು “ಮಾತನಾಡಿ ಟೀಚರ್‌’ ಎನ್ನುತ್ತಿದ್ದನು. ಆವಾಗ ನಮ್ಮ ಮಾತುಕತೆ ಶುರುವಾಗುತ್ತಿತ್ತು. ಕೆಲವೊಂದು ಬಾರಿ ಏನು ಮಾತನಾಡಬೇಕೆಂದೂ ತೋಚುತ್ತಿರಲಿಲ್ಲ. ಇದರಿಂದ ನನ್ನ ಸಹಪಾಠಿಗಳಿಗೆ ಕೊಂಚ ಅಸೂಯೆ ತೋರಿದ್ದೂ ಉಂಟು. ನಾನು ಅವನಿಗೆ ಹೇಗೆ, ಯಾಕೆ ಇಷ್ಟವಾದೆನೋ ಗೊತ್ತಿಲ್ಲ. ಆದರೆ, ನನ್ನ ಪಾಲಿಗೆ “ಟೀಚರ್‌’ ಎಂದು ಕರೆದು ಪ್ರೀತಿ ತೋರಿದ ಮೊದಲ ವಿದ್ಯಾರ್ಥಿ. “ಮೈ ಪೆಟ್‌ ಸ್ಟೂಡೆಂಟ್‌’.

ನನ್ನ ಮೆಚ್ಚಿನ ತರಗತಿಯೆಂದರೆ ಅದು 8ನೇ “ಸಿ’. ಹಾಗಂತ ಉಳಿದ ತರಗತಿಯನ್ನು ಮೆಚ್ಚಿಕೊಂಡಿಲ್ಲ ಎಂದೇನೂ ಇಲ್ಲ. ಆದರೂ ಒಂದು ತೂಕ ಜಾಸ್ತಿ 8 “ಸಿ’ ತರಗತಿಗೆ. ನಾನು ಪ್ರತೀ ತರಗತಿ ಮಾಡುವಾಗಲೂ ನನ್ನಿಂದ ಬೈಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಾಗಿದ್ದರು. ಹಾಗಾಗಿ, ನಾನು ಅವರ ಪಾಲಿಗೆ ಜೋರಿನ ಅಧ್ಯಾಪಿಕೆಯಾಗಿದ್ದೆ. ಕೊನೆಯ ದಿನ ಅಂದರೆ, ಶಿಕ್ಷಕ ತರಬೇತಿಯ ಕೊನೆಯ ದಿವಸ ಪ್ರತಿಯೊಬ್ಬರಲ್ಲೂ ಅಭಿಪ್ರಾಯ ಬರೆಸಿಕೊಂಡಿದ್ದೆ. ಎಲ್ಲರೂ “ನೀವು ಇಷ್ಟ’ ಎಂದು ಬರೆದಿದ್ದರು. ನಾನಂತೂ ಈ ಉತ್ತರವನ್ನು ನಿರೀಕ್ಷಿಸಿಯೂ ಇರಲಿಲ್ಲ. ಶಾಲೆಗೆ ವಿದಾಯ ಹೇಳುವ ಕೊನೆಯ ದಿನ ಹಾಗೂ ಕೊನೆಯ ತರಗತಿಯಲ್ಲಿ “ಟೀಚರ್‌ ಹೋಗ್ಬೇಡಿ’ ಎಂದು ಅತ್ತಿದ್ದರು. ವಿದ್ಯಾರ್ಥಿಗಳ ಈ ಪ್ರೀತಿಗೆ ನನ್ನ ಕಣ್ಣಂಚು ಕೂಡ ನೆನೆದಿತ್ತು.

ನಿಜವಾಗಿಯೂ ಮಕ್ಕಳೊಂದಿಗೆ ಬೆರೆತ ಕ್ಷಣಗಳು, ಶಾಲಾ ಚಟುವಟಿಕೆಗಳಲ್ಲಿ , ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ದಿನಗಳು ಒಂದು ಅನುಭವವೇ ಸರಿ. ಶಾಲೆಗೆ ಹೋದ ಮೊದಲ ವಾರದಲ್ಲಿಯೇ “ಬಿಇಎಂ ಶಾಲೆಯಿಂದ ಒಮ್ಮೆ ಹೊರಗೆ ಹೋದ್ರೆ ಸಾಕು’ ಎಂದೆನಿಸಿತ್ತು. ಆದರೆ, ಕೊನೆಗೆ ಅಲ್ಲಿಂದ ಹೊರಡೋಕೆ ಮನಸ್ಸೇ ಬರಲಿಲ್ಲ. ಹೊರಡದೆ ಬೇರೆ ದಾರಿಯೂ ಇರಲಿಲ್ಲ. ಅಂತೂ ಬೀಳ್ಕೊಡಲೇ ಬೇಕಾಯಿತು. ಆ ನೆನಪುಗಳೆಲ್ಲ ಈಗ ಮತ್ತೂಮ್ಮೆ ಮರಳಿ ಬಾರದ ದಿನಗಳಾಗಿ ಸವಿನೆನಪುಗಳಾಗಿ ಉಳಿದಿವೆ. 

ಅರ್ಪಿತಾ 
ಬಿ.ಎಡ್‌ ವಿದ್ಯಾರ್ಥಿನಿ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next