ದೇಹದೊಳಗಿನ ಕಲ್ಮಶವನ್ನು ಹೊರ ಹಾಕುವ ಪೇಯಗಳಿಗೆ, ಡಿಟಾಕ್ಸ್ ಡ್ರಿಂಕ್ಸ್ ಅನ್ನುತ್ತಾರೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಪೇಯಗಳನ್ನು ಸೇವಿಸುವುದರಿಂದ, ದೇಹದ ಕಲ್ಮಶಗಳು ಹೊರ ಹೋಗಿ, ಚರ್ಮದ ಸೌಂದರ್ಯ ಹೆಚ್ಚುತ್ತದೆ. ಅಧಿಕ ಕೊಬ್ಬಿನಂಶ ಮತ್ತು ಮಲಬದ್ಧತೆಯ ಸಮಸ್ಯೆ ಇರುವವರು ಕೂಡಾ ಈ ಪೇಯಗಳಿಂದ ಪ್ರಯೋಜನ ಪಡೆಯಬಹುದು. ಅಂಥ ಕೆಲವು ಡಿಟಾಕ್ಸ್ ಡ್ರಿಂಕ್ಸ್ ಬಗ್ಗೆ ಇಲ್ಲಿದೆ.
– ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಶುದ್ಧ ಜೇನುತುಪ್ಪ, ಒಂದು ಚಮಚ ಲಿಂಬೆರಸ ಬೆರೆಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ. ತೂಕ ಇಳಿಸಲೂ ಸಹಕಾರಿ.
– ಒಂದು ಲೋಟ ಬಿಸಿ ನೀರಿಗೆ ಚಿಟಿಕೆ ಅರಿಶಿಣ ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯಿರಿ. ಇದು ಶೀತ, ಕೆಮ್ಮು, ಅಸ್ತಮಾ, ಚರ್ಮದ ಸಮಸ್ಯೆಗಳಿಗೆ ರಾಮಬಾಣ.
– ಕುದಿಯುವ ನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಅದ್ದಿ, ಅದಕ್ಕೆ ಕಾಲು ಚಮಚ ಅರಿಶಿಣ, ಚಿಟಿಕೆ ಕಾಳುಮೆಣಸಿನ ಪುಡಿ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ, ರಕ್ತ ಶುದ್ಧಿಯಾಗುತ್ತದೆ.
– ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಕೊತ್ತಂಬರಿ ಬೀಜದ ಪುಡಿ, ಕಾಲು ಚಮಚ ಸೋಂಪು ಕಾಳಿನ ಪುಡಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ರಕ್ತ ಶುದ್ಧಿಗೆ, ಜೀರ್ಣಕ್ರಿಯೆಗೆ ಸಹಕಾರಿ.
– ಕುದಿಯುವ ನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಹಾಗೂ ಒಂದಿಂಚು ಉದ್ದದ ಚಕ್ಕೆ (ಚಿಟಿಕೆ ಚಕ್ಕೆ ಪುಡಿ) ಅದ್ದಿ, ಒಂದು ಚಮಚ ಲಿಂಬೆ ರಸ ಮತ್ತು ಶುದ್ಧ ಜೇನುತುಪ್ಪವನ್ನು ಬೆರೆಸಿ ದಿನನಿತ್ಯ ಕುಡಿದರೆ ತೂಕ ಕಡಿಮೆಯಾಗುತ್ತದೆ.
– ಒಂದು ಲೋಟ ಕುದಿಯುವ ನೀರಿಗೆ ಗ್ರೀನ್ ಟೀ ಬ್ಯಾಗ್ ಅದ್ದಿ, ಶುಂಠಿ ರಸ (ಜಜ್ಜಿದ ಶುಂಠಿ), ಅರ್ಧ ಚಮಚ ಲಿಂಬೆರಸ, ಸಿಹಿಗೆ ತಕ್ಕಷ್ಟು ಜೇನುತುಪ್ಪ ಬೆರೆಸಿ ಕುಡಿದರೆ, ಚರ್ಮದ ಕಾಂತಿ ಹೆಚ್ಚುತ್ತದೆ.