ಕಾಶಿಯನ್ನು ನೋಡಬೇಕೆಂದು ನಮ್ಮೆಲ್ಲ ಕುಟುಂಬದೊಂದಿಗೆ ತೆರಳಿದ್ದೆವು. ಅಲ್ಲಿ ಗಂಗಾ ನದಿಯನ್ನು ಕಂಡು ಖುಷಿಯಾಯಿತು. ಸಂಜೆ ಗಂಗಾವಿಹಾರ ಮುಗಿಸಿ ಮತ್ತೂಮ್ಮೆ ಕಾಶಿ ವಿಶ್ವನಾಥನನ್ನು ನೋಡಬೇಕೆನಿಸಿತು. ಅದಕ್ಕೆಂದು ಸಾಲಿನಲ್ಲಿ ನಿಂತುಕೊಂಡೆವು. ಸುಮಾರು ಅರ್ಧ ಕಿ.ಮೀ. ನಷ್ಟು ಸಾಲಿತ್ತು.
ಪರಪಟ್ಟಣ, ಪರ ಭಾಷೆ. ನಾವು ಸುಮ್ಮನೆ ನಮ್ಮಷ್ಟಕ್ಕೇ ಮಾತನಾಡಿಕೊಳ್ಳುತ್ತಿದ್ದೆವು. ಬಹಳ ನಿಧಾನವಾಗಿ ಸಾಲು ಕರಗುತ್ತಿತ್ತು. ಒಂದು ಮಗುವನ್ನು ಹಿಡಿದುಕೊಂಡ ತಾಯಿ ನಮ್ಮಲ್ಲಿಗೆ ಬಂದು ಅವಳ ಹಿಂದಿ ಭಾಷೆಯಲ್ಲಿ ಏನನ್ನೋ ಕೇಳಿದಳು. ನನಗೆ ಅರ್ಥವಾಗಲಿಲ್ಲ, ನಮ್ಮ ಯಜಮಾನರು ಏನನ್ನೋ ಹೇಳಿ ಕಳುಹಿಸಿದರು.
ಸ್ವಲ್ಪ ಸಮಯವಾದ ಬಳಿಕ ನಾನು ಕುತೂಹಲದಿಂದ ಆ ಹೆಂಗಸಿಗೆ ಏನಾಗಬೇಕಿತ್ತು ? ಎಂದು ಕೇಳಿದೆ. ಅದಕ್ಕೆ ಅವರು, ಏನಿಲ್ಲ, ಊಟ ಮಾಡಲಿಲ್ಲವಂತೆ. ಅದಕ್ಕೇ ದುಡ್ಡು ಬೇಕಂತೆ ಎಂದರು. ನನಗೆ ಬಾಯಿ ತಪ್ಪಿ, ಹತ್ತು ರೂ. ಕೊಟ್ಟು ಬಿಡಬೇಕಿತ್ತು ಎಂದೆ. ಅಂಥವರು ನೂರು ಮಂದಿ ಇರ್ತಾರೆ, ಹಾಗೆಲ್ಲಾ ಕೊಡೋಕೆ ಆಗುತ್ತಾ ? ಅದರಲ್ಲೂ ಅವರದ್ದು ನಾಟಕ. ಹಣವನ್ನೆಲ್ಲಾ ಕುಡಿಯೋಕೆ ಹಾಕ್ತಾರೆ ಎಂದರು. ಮರು ಮಾತನಾಡಲಿಲ್ಲ, ದೇವರ ದರ್ಶನ ಮುಗಿಸಿ ಬಂದೆವು. ಆ ಸಮಯದಲ್ಲಿ ಹತ್ತಿರದ ಹೊಟೇಲೊಂದರ ಬಾಗಿಲಲ್ಲಿ ಈ ಅಮ್ಮ-ಮಗು ಕುಳಿತಿದ್ದರು. ಮಗುವಿಗೆ ಅಮ್ಮ ತಿಂಡಿ ತಿನ್ನಿಸುತ್ತಿದ್ದಳು. ಕೂಡಲೇ, ನಮ್ಮವರಲ್ಲಿ “ನೋಡಿ, ಆ ಮಗು-ಅಮ್ಮ’ಎಂದು ತೋರಿಸಿದೆ. ಅವರು ನೋಡಿಯೂ ನೋಡದವರಂತೆ, ಬಾ ಬೇಗ, ಬಸ್ಸು ಹೊರಡುತ್ತೆ ಎಂದು ಕರೆದೊಯ್ದರು. ನಾವು ಉಳಿದುಕೊಂಡು ಬಂದ ಕೋಣೆಗೆ ಬಂದರೂ ಆ ಮಗುವಿನ ಮುಖ ಮಾಯವಾಗಲಿಲ್ಲ.
ಅಂದಿನಿಂದ ನಾನು ಯಾವುದೇ ಊರಿಗೆ ಹೋದರೂ, ಯಾರಾದರೂ ತಿಂಡಿ, ಊಟದ ಬಗ್ಗೆ ಕೇಳಿದರೆ ಇಲ್ಲ ಎನ್ನುವುದಿಲ್ಲ. ಹಣ ಕೊಡುವುದಿಲ್ಲ, ಅವರಿಗೆ ಬೇಕಾದ ತಿಂಡಿ ಕೊಡಿಸುತ್ತೇನೆ. ನಿಜಕ್ಕೂ, ಒಂದು ತೀರ್ಥಕ್ಷೇತ್ರದಲ್ಲಿ ಕಲಿತ ಜೀವನದ ಪಾಠವೆಂದೇ ಸ್ವೀಕರಿಸಿದ್ದೇನೆ.
- ಜಾನಕಿ, ಸಾಲಿಗ್ರಾಮ