ರಾಯಚೂರು: ಕಲಿ ಯುಗದ ಕಾಮಧೇನು ಮಂತ್ರಾಲ ಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವವು ಆ.29ರಿಂದ ಸೆ.4ರ ವರೆಗೆ ಜರಗಲಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿ ಪತಿ ಶ್ರೀ ಸುಬು ಧೇಂದ್ರ ತೀರ್ಥರು ತಿಳಿಸಿದರು.
ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಪ್ತ ರಾತ್ರೋತ್ಸವ ನಿಮಿತ್ತ ನಿತ್ಯ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಲಿವೆ. 29ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನೆಗೆ ಚಾಲನೆ ನೀಡಲಾಗುವುದು. 30ರಂದು ಶಾಖೋತ್ಸವ ಸಹಿತ ಇನ್ನಿತರ ಕಾರ್ಯಕ್ರಮಗಳು ಜರಗಲಿದೆ. ಆ.31ರಂದು ಪೂರ್ವಾರಾಧನೆ ಜರಗಲಿದ್ದು, ಅಂದು ಸಂಜೆ ನಾಲ್ವರು ಗಣ್ಯರಿಗೆ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಮುಖ್ಯ ಅತಿಥಿಗಳಾಗಿರುವರು ಎಂದರು.
ಸೆ.1ರಂದು ರಾಯರು ಬೃಂದಾ ವನಸ್ಥರಾದ ದಿನವಾಗಿದ್ದು, ಮಧ್ಯಾ ರಾಧನೆ ಜರಗಲಿದೆ. ಬೃಂದಾ ವನಕ್ಕೆ ಮಹಾಪಂಚಾಮೃತ ಅಭಿಷೇಕ, ಸುವರ್ಣ ರಥೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮ ಜರಗಲಿವೆ. ಇದೇ ದಿನ ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರಗಳು ಬರಲಿದ್ದು, ರಾಯರಿಗೆ ಸಮ ರ್ಪಿಸಲಾಗುವುದು. ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ ರಾಮ ವಿಠಲಾಚಾರ್ಯ, ತೆಲುಗಿನ ಖ್ಯಾತ ಪ್ರವಚನಕಾರ ಗರಿಕೆಪಾಟಿ ನರಸಿಂಹ ರಾವ್, ಉದ್ಯಮ ಕ್ಷೇತ್ರದಲ್ಲಿ ಟಾಟಾ ಕಂಪೆನಿಯ ಎನ್.ಚಂದ್ರಶೇಖರನ್, ಶಾಂತಿ ವಿಶ್ವವಿದ್ಯಾನಿಲಯ ಸ್ಥಾಪಿಸಿದ ವಿಶ್ವನಾಥಡಿಕರಾಡ ಅವರಿಗೆ ಈ ಸಾಲಿನ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡಲಾಗುವುದು.
ಈ ಬಾರಿ 100 ಕೋಣೆಗಳ ಮೂಲರಾಮನ ಹೆಸರಿನ ವಸತಿ ಸಮುಚ್ಚಯ, ನರಹರಿ ತೀರ್ಥ ವಿಶ್ರಾಂತಿಗೃಹ, ಮೂರು ಪಾರ್ಕಿಂಗ್ ವ್ಯವಸ್ಥೆ, ಹರಿಕಥಾಮೃತ ಸಾರವುಳ್ಳ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.
ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ವೇಳೆ ಮಂತ್ರಾಲಯ ದಲ್ಲೂ ಶ್ರೀ ರಾಮನ ಬೃಹತ್ ಏಕಶಿಲಾ ಪ್ರತಿಮೆ ನಿಲ್ಲಿಸಲಾಗುವುದು. ಶ್ರೀಮಠದ ಸಮೀಪದಲ್ಲಿ ಸುಮಾರು 6 ಎಕ್ರೆ ಸ್ಥಳದಲ್ಲಿ ರಾಮನ ಮಂದಿರ ನಿರ್ಮಿಸಲಾಗುತ್ತಿದೆ. 108 ಅಡಿಯ ಲೋಹದ ಮೂರ್ತಿ ಸ್ಥಾಪನೆಗೂ ಕೇಂದ್ರ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ ಎಂದರು.