ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಲಕ್ಕೋಜನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ತಹಶೀಲ್ದಾರ್ ನರಸಿಂಹ ಮೂರ್ತಿ , ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲೂಕು ತಹಸೀಲ್ದಾರ್ ನರಸಿಂಹಮೂರ್ತಿ ಮತ್ತು ಅಧಿಕಾರಗಳ ತಂಡ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಾಸ್ತವ್ಯ ಹೂಡಿದ್ದರು. ಜನತೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಮನೆ ಬಾಗಿಲಿಗೆ ಬಂದ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ನಾಗರೀಕರು, ತಮ್ಮ ಸಮಸ್ಯೆಗಳನ್ನು ಹೇಳಿ ಕೊಂಡರು. ಕೆಲವರು ತಮ್ಮ ಪಹಣಿಯಲ್ಲಿ ಲೋಪಗಳ ಬಗ್ಗೆ ದೂರು ನೀಡಿದರೇ, ಕೆಲವರು ಪೋಡಿ ಸಮಸ್ಯೆ ಮುಂದಿಟ್ಟರು. ಪೌತಿ ಖಾತೆ ಮಾಡಿ ಕೊಟ್ಟಿಲ್ಲ. ಮೋಜಿಣಿ ಸರ್ವೆ, ಹದ್ದು ಬಸ್ತಿ ಗುರುತಿಸಲು ವಿಳಂಬದ ಬಗ್ಗೆಯೂ ದೂರುಗಳು ವ್ಯಕ್ತವಾದವು. ಸಾಗುವಳಿ ಚೀಟಿಗಾಗಿ ಕೆಲವು ಅರ್ಜಿ ಸಲ್ಲಿಸಿದರೆ, ಕೆಲವರು ಇ-ಖಾತೆ ಮಾಡಿ ಕೊಡುವಲ್ಲಿ ವಿಳಂಬವಾಗುತ್ತಿದೆ ಎಂದು ನೇರ ತಹಶೀಲ್ದಾರರ ಬಳಿ ನಿವೇದಿಸಿಕೊಂಡರು. ಅರ್ಚಕರು ತಸ್ತಿಕ್ ಬಿಡುಗಡೆ, ಪಿಂಚಣಿ ಸಮಸ್ಯೆ ಬಗೆಹರಿಸಿಕೊಡಿ, ಪಿಂಚಣಿ ಸಕಾಲಕ್ಕೆ ಕೊಡಿಸಿ, ಹೊಸ ಪಿಂಚಣಿ ಮಂಜೂರು ಮಾಡಿಕೊಡಿ ಎಂಬ ಅರ್ಜಿ ಗಳು ಸಲ್ಲಿಕೆಯಾದವು. ಎಲ್ಲ ಅಹವಾಲು, ದೂರುಗಳನ್ನು ಸಮಾಧಾನ ಚಿತ್ತದಿಂದಲೇ ಆಲಿಸಿದ ತಹಶೀಲ್ದಾರರು, ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ವಿಲೇ ಮಾಡಿದರು. ಇದೇ ವೇಳೆ ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆಯೂ ಗ್ರಾಮ ಸ್ಥರ ಗಮನ ಸೆಳೆದರು. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಪಂ ಇಒ ಶಿವಕುಮಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಕೆ. ರಮೇಶ್, ಉಪ ತಹಶೀಲ್ದಾರ್ ವಿಲಿಯಂ, ಹಕ್ಕುದಾಖಲೆ ಶಿರಸ್ತೇದಾರ್ ಕೃಷಿ, ಪಿಡಿಒ ಜಯಶಂಕರ್, ಮುಖ್ಯಶಿಕ್ಷಕಿ ರೇಖಾ, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ಚಂದ್ರಗಿರಿ, ಸದಸ್ಯರಾದ ಚಲುವರಾಜ್, ನವೀನ ನಾಗರಾಜು, ಆರ್.ಮೂರ್ತಿನಾಯಕ್, ಶೋಭಾ, ಶಿವಮ್ಮ ಆಹಾರ ಇಲಾಖೆ ಶಿರಸ್ತೇದಾರ್ ಜಯಪ್ಪ, ರಾಜಸ್ವನಿರೀಕ್ಷಕ ಪುಟ್ಟರಾಜು, ಸರ್ವೆ ಮೇಲ್ವಿಚಾರಕ ಮಹದೇವಯ್ಯ, ಸರ್ವೇಯರ್ ಪ್ರಭಾಕರ್, ಗ್ರಾಮಲೆಕ್ಕಿಗರಾದ ಉಷಾ, ಸುಷ್ಮಾ, ಕುಮುದ, ಸುಖನ್ಯ, ಮಂಜುನಾಥ್, ಗಿರೀಶ್, ಚನ್ನಮ್ಮ, ಸುಷ್ಮಾ, ಶಿಕ್ಷಕರಾದ ಪಾಪಣ್ಣ, ಗ್ರಾಪಂ ಮಾಜಿ ಸದಸ್ಯ ನಾಗರಾಜು, ನಾಗೇಶ್, ಎಲ್.ಎಂ.ಸಂತೋಷ್, ಪುಟ್ಟಸಿದ್ದಯ್ಯ ಮತ್ತಿತರಿದ್ದರು.