ತೇರದಾಳ: 12ನೇ ಶತಮಾನದ ಐತಿಹಾಸಿಕ ತೇರದಾಳ ದೇಸಾರಬಾವಿ ಅಭಿವೃದ್ಧಿ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪಗಳಿವೆ.
ದೇಸಾರಬಾವಿಯು ಅಭಿವೃದ್ಧಿ ಭಾಗ್ಯ ಪಡೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಮಕ್ಕಳ ಜೀವಹಾನಿ ಸಂಭವಿಸಿವೆ. ಬಾವಿಗೆ ತಂತಿ ಬೇಲಿ ಹಾಗೂ ಗೇಟ್ ಅಳವಡಿಸಿ, ಕಾವಲುಗಾರರ ನೇಮಕ ಮಾಡಿಕೊಳ್ಳಬೇಕಾಗಿದೆ.
ಮಾಜಿ ಸಚಿವೆ ಉಮಾಶ್ರೀ ಅಧಿಕಾರವಧಿಯಲ್ಲಿ ದೇಸಾರಬಾವಿ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ 13ನೇ ಹಣಕಾಸು ಯೋಜನೆಯಡಿ 60 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಿರ್ಲಕ್ಷ್ಯಕ್ಕೊಳಗಾದ ಬಾವಿಯಲ್ಲಿ ಮೊದಲು ಕಲ್ಮಶ ತುಂಬಿತ್ತು. ಬಾವಿಯಲ್ಲಿನ ಗಲೀಜು, ಮಣ್ಣು ಹೊರ ತೆಗೆದು, ತಳದಿಂದ ಬೃಹತ್ ಕಲ್ಲಿನ ಕಟ್ಟಡ ಮಾಡಲಾಗಿದೆ. ರೇಣುಕಾ ಸವದತ್ತಿ ಜೋಗುಳಬಾವಿ ಮಾದರಿಯಲ್ಲಿ ಬಾವಿಯನ್ನು ಅಭಿವೃದ್ಧಿಪಡಿಸಿ ಪುಷ್ಕರಣಿ ಮಾಡಿ ಸುತ್ತಲೂ ಸ್ಟೀಲ್ ಗ್ಯಾಲರಿ, ತಂತಿ ಬೇಲಿ ಹಾಕಿಸಿ, ಮುಂದುಗಡೆ ಸುಂದರ ಉದ್ಯಾನ ಮಾಡುವ ಕನಸನ್ನು ಉಮಾಶ್ರೀ ಕಂಡಿದ್ದರು. ಆದರೆ ಅನುದಾನ ಸಾಲದ ಹಿನ್ನೆಲೆಯಲ್ಲಿ ಮತ್ತೆ 80 ಲಕ್ಷ ರೂ.ಅನುದಾನ ಮಂಜೂರಿ ತಂದರು. ಹೀಗೆ ಒಟ್ಟು 1.4 ಕೋಟಿ ಅನುದಾನದಲ್ಲಿ ಅಲ್ಲಮಪ್ರಭು ಪುಷ್ಕರಣಿ ಕಾರ್ಯ ನಡೆದಿತ್ತು. ಆದರೆ ಇಲಾಖೆ ಉದಾಸೀನತೆಯಿಂದ ಪುಷ್ಕರಣಿ ಸುತ್ತಲಿನ ಬೇಲಿ, ಉದ್ಯಾನದ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ ಈವರೆಗೂ ಸಾಧ್ಯವಾಗಿಲ್ಲ.
8 ತಿಂಗಳ ಹಿಂದೆ ಬಾಲಕನೊಬ್ಬ ಬಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡರೆ, ಜ.18ರಂದು ಮತ್ತೂಬ್ಬ ಬಾಲಕ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ಎರಡು ಮಕ್ಕಳ ಜೀವ ಹಾನಿಯಿಂದ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಸುಂದರಗೊಂಡ ಬಾವಿ ಸುತ್ತ ಜನದಟ್ಟಣೆ ಹೆಚ್ಚುತ್ತಿದ್ದು, ಮತ್ತೂಂದು ಅನಾಹುತ ಸಂಭವಿಸುವ ಮುನ್ನ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ.
ಕಾಮಗಾರಿಯು ಯೋಜನೆಯಲ್ಲಿ ಸೂಚಿಸಿದ ಹಣದಲ್ಲಿ ಈಗ ಸಿದ್ಧವಾಗಿದೆ. ತಡೆಗೋಡೆ, ಗಾರ್ಡನ್ ನಿರ್ಮಾಣಕ್ಕೆ ಹಣಕಾಸಿನ ಅವಶ್ಯಕತೆಯಿದೆ. ಬಾವಿಯ ಸುತ್ತ ತಡೆಗೋಡೆ ನಿರ್ಮಿಸಲು ಕೆಲವರು ಜಾಗೆಯ ತಕರಾರು ಮಾಡಿದ್ದರಿಂದ ಸಾಧ್ಯವಾಗಲಿಲ್ಲ. ಈಗ ಮತ್ತೆ ಕ್ರಿಯಾಯೋಜನೆ ಮಾಡಿ, ಸ್ಥಳದ ಲಭ್ಯತೆಯಿದ್ದರೆ ಅನುದಾನ ಬಂದ ನಂತರ ಬಾವಿಯ ಸುತ್ತ ತಡೆಗೋಡೆ ನಿರ್ಮಿಸಲಾಗುವುದು.
•ಡಾ| ವಾಸುದೇವ,
ಉಪ ನಿರ್ದೇಶಕರು ಪ್ರಾಚ್ಯವಸ್ತು ಇಲಾಖೆ ಧಾರವಾಡ.