ಇನ್ಸ್‌ಪಿರೇಷನ್ ಕಿರುಚಿತ್ರದಲ್ಲಿ ಬಾಲಿವುಡ್‌ನ ಲೈಂಗಿಕ ಕಿರುಕುಳದ ಕಥೆ ಬಿಚ್ಚಿಡಲಿದ್ದಾರಂತೆ ತನುಶ್ರೀ ದತ್ತಾ!
ಕಳೆದ ವರ್ಷ ಬಾಲಿವುಡ್‌ನಲ್ಲಿ “ಮೀ ಟೂ’ ಆರೋಪ ಮಾಡಿ ಸುದ್ದಿಯಾಗಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ, ಈ ವರ್ಷ ಕೂಡ ಮತ್ತೆ ಅದೇ ವಿಷಯದ ಮೂಲಕ ಸುದ್ದಿಯಾಗುವ ಸುಳಿವನ್ನು ನೀಡಿದ್ದಾರೆ. ಹೌದು, ಸದ್ಯಕ್ಕೆ ಬಾಲಿವುಡ್‌ನಲ್ಲಿ “ಮೀ ಟೂ’ ವಿವಾದ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಆದರೆ ತನುಶ್ರೀ ದತ್ತಾ ಮಾತ್ರ ತಾವು ಮಾಡಿರುವ “ಮೀ ಟೂ’ ಆರೋಪವನ್ನು ಅಷ್ಟು ಸುಲಭವಾಗಿಬಿಡುವಂತೆ ಕಾಣುತ್ತಿಲ್ಲ. ಸದ್ಯ ತನುಶ್ರೀ ಮಾಡಿರುವ “ಮೀ ಟೂ’ ಆರೋಪ ನ್ಯಾಯಾಲಯದ ಅಂಗಳದಲ್ಲಿದೆ. ಇದರ ನಡುವೆಯೇ ತನುಶ್ರೀ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ, ಮಹಿಳಾ ದೌರ್ಜನ್ಯವನ್ನು ಇನ್ಸ್‌ಪಿರೇಷನ್ ಎನ್ನುವ ಹೆಸರಿನ ಕಿರುಚಿತ್ರದ ಮೂಲಕ ತೆರೆದಿಡಲು ಸಜ್ಜಾಗಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತನುಶ್ರೀ ಇನ್ಸ್‌ಪಿರೇಷನ್ ಕಿರುಚಿತ್ರದ ತಯಾರಿಯನ್ನು ನಡೆಸುತ್ತಿದ್ದು, ಸದ್ಯ ಈ ಕಿರುಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ. ಇನ್ನು ಈ ಕಿರುಚಿತ್ರಕ್ಕೆ ಸ್ವತಃ ತನುಶ್ರೀ ದತ್ತಾ ಅವರೇ ಸಂಭಾಷಣೆಯನ್ನು ಬರೆದಿದ್ದು, ಚಿತ್ರರಂಗದಲ್ಲಿ ಅವರು ಲೈಂಗಿಕ ಕಿರುಕುಳದ ಸಂದರ್ಭದಲ್ಲಿ ಎದುರಿಸಿದ್ದ ಮಾತುಗಳು, ಪ್ರಶ್ನೆಗಳನ್ನೇ ಈ ಚಿತ್ರದ ಸಂಭಾಷಣೆಯಲ್ಲೂ ಬಳಸಿಕೊಂಡಿದ್ದಾರಂತೆ.
ಅಂದ ಹಾಗೆ, ಇದೇ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸೋಷಿಯಲ್ ಮೀಡಿಯಾಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಇನ್ಸ್ ಪಿರೇಷನ್ ಕಿರುಚಿತ್ರ ಬಿಡುಗಡೆಯಾಗಲಿದೆ.
ತಮ್ಮ ಇನ್ಸ್‌ಪಿರೇಷನ್ ಕಿರುಚಿತ್ರದ ಬಗ್ಗೆ ಮಾತನಾಡುವ ತನುಶ್ರೀ ದತ್ತಾ, “ಬಹಳ ಸಮಯದಿಂದಲೂ ಲೈಂಗಿಕ ಕಿರುಕುಳದಂಥ ಸೂಕ್ಷ್ಮ ವಿಚಾರವನ್ನು ಸಮಾಜದ ಮುಂದೆ ಹೇಳಬೇಕು ಎಂದುಕೊಂಡಿದ್ದೆ. ಆದರೆ ನಾನು ಅದನ್ನು ಹೇಳಲು ಮುಂದಾದಾಗ ನನ್ನ ಹೇಳಿಕೆಗೆ ಬೇರೆ ಅರ್ಥಗಳನ್ನು ಕಲ್ಪಿಸಲಾಯಿತು. ನನ್ನ ಭಾವನೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಕಿರುಚಿತ್ರದ ಮೂಲಕ ನಾನು ಹೇಳಬೇಕು ಎಂದುಕೊಂಡಿರುವ ವಿಷಯವನ್ನು ಹೇಳಲಿದ್ದೇನೆ. ಬಾಲಿವುಡ್‌ನಲ್ಲಿ ನಡೆದ ಮತ್ತು ನಡೆಯುತ್ತಿರುವ ಲೈಂಗಿಕ ಕಿರುಕುಳ ವಿಷಯವೇ ಈ ಕಿರುಚಿತ್ರದ ಕಥಾವಸ್ತು. ಹೊಸದಾಗಿ ಚಿತ್ರೋದ್ಯಮಕ್ಕೆ ಕಾಲಿಡುವ ಯುವತಿಯರ ಮೇಲಾಗುವ ದೌರ್ಜನ್ಯವನ್ನು ಈ ಕಿರುಚಿತ್ರ ಬಿಚ್ಚಿಡಲಿದೆ. ಕೇವಲ ಚಿತ್ರರಂಗ ಮಾತ್ರವಲ್ಲದೆ, ಸರಿಯಾದ ಮಾರ್ಗದರ್ಶಕರು, ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಇತರ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಹೇಗೆ ಶೋಷಣೆಗೆ ಒಳಗಾಗುತ್ತಾರೆ ಅನ್ನೋದನ್ನೂ ಈ ಕಿರುಚಿತ್ರ ಹೇಳಲಿದೆ’ ಎನ್ನುತ್ತಾರೆ.
ಒಟ್ಟಾರೆ ತನುಶ್ರೀ ದತ್ತಾ, ಇನ್ಸ್‌ಪಿರೇಷನ್ ಕಿರುಚಿತ್ರದಲ್ಲಿ ಏನೇನು ಇರಲಿದೆ, ಇದರ ಮೂಲಕ ಮತ್ತೆ ಇನ್ಯಾವ ವಿವಾದಗಳು ಶುರುವಾಗುತ್ತವೆಯೋ, ಬಾಲಿವುಡ್ ಮತಾöವ ಪ್ರಖ್ಯಾತರ ಹೆಸರುಗಳು ಮಾರ್ಚ್ 8, ಅಂದರೆ ಇಂದು ಹೊರಬೀಳಬಹುದು.