ಬೆಂಗಳೂರು: ಪೂರ್ತಿ ಹಣ ಪಾವತಿಸಿದ್ದರೂ ಫ್ಲ್ಯಾಟ್ ನೋಂದಣಿ ಮಾಡಿಕೊಡದೇ ಸತಾಯಿಸುತ್ತಿದ್ದ ಬಿಲ್ಡರ್‌ಗಳ ವರ್ತನೆಯಿಂದ ಬೇಸತ್ತಿದ್ದ ಮಧ್ಯಪ್ರದೇಶ ಮೂಲದ ಮಹಿಳೆ ಕಡೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜನತಾ ದರ್ಶನದಲ್ಲಿ ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದ್ದರು. ಅದಾಗಿ ಎರಡೇ ದಿನದಲ್ಲಿ ಮಾರತ್‌ಹಳ್ಳಿ ಠಾಣೆ ಪೊಲೀಸರ ಸಹಕಾರದಿಂದ ವಂದನಾ ಅವರ ಫ್ಲ್ಯಾಟ್ ನೋಂದಣಿಯಾಗಿದೆ. ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಂದನಾ ಅವರಿಗೆ ಫ್ಲ್ಯಾಟ್‌ನ ನೋಂದಣಿ ಪತ್ರ ನೀಡಿದರು.
ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಉಪಸ್ಥಿತರಿದ್ದರು. ಫ್ಲ್ಯಾಟ್ ನೋಂದಣಿ ಸಮಸ್ಯೆ ಬಗೆಹರಿಸಿದ ಸಿಎಂ ಹಾಗೂ ಪೊಲೀಸ್ ಅಧಿಕಾರಿಗಳಿಗೆ ವಂದನಾ ಧನ್ಯವಾದ ಅರ್ಪಿಸಿದರು.
ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಆಗಿರುವ ವಂದನಾ, ಜನವರಿಯಲ್ಲಿ ವಿಕೆಸಿ ಬಿಲ್ಡರ್ ಪಣತ್ತೂರು ಸಮೀಪ ನಿರ್ಮಾಣ ಮಾಡಿರುವ ಚೌರಾಸಿಯಾ ಅಪಾರ್ಟ್‌ಮೆಂಟ್‌ನಲ್ಲಿ 65 ಲಕ್ಷ ರೂ. ನೀಡಿ ಫ್ಲ್ಯಾಟ್ ಖರೀದಿಸಿದ್ದರು. ಪೂರ್ತಿ ಹಣ ನೀಡಿದ್ದರೂ ಫ್ಲ್ಯಾಟ್ ನೋಂದಣಿ ಮಾಡಿಸಿಕೊಡದೇ ಬಿಲ್ಡರ್ ವಿಜಯ್‌ಕುಮಾರ್ ವಿಳಂಬ ಮಾಡುವುದಲ್ಲದೆ ಬೆದರಿಕೆ ಒಡ್ಡಿದ್ದರು.
ಇದರಿಂದ ಬೇಸತ್ತಿದ್ದ ವಂದನಾ ಸಿಎಂ ಎಚ್.ಡಿ ಕುಮಾರಸ್ವಾಮಿ ಶನಿವಾರ ನಡೆಸಿದ ಜನತಾದರ್ಶನದಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಕೂಡಲೇ ವೈಟ್‌ಫೀಲ್ಡ್ ವಿಭಾಗದ ಪೊಲೀಸರಿಗೆ ಸೂಚನೆ ನೀಡಿ 24 ಗಂಟೆಗಳಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕು.
ಇಲ್ಲದಿದ್ದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಮಾರತ್‌ಹಳ್ಳಿ ಠಾಣೆ ಪೊಲೀಸರು ಎಚ್ಚೆತ್ತು ವಂದನಾ ಅವರ ದೂರು ಸ್ವೀಕರಿಸಿ ಬಿಲ್ಡರ್ ವಿಜಯ್ ಕುಮಾರ್ ಚೌರಾಸಿಯಾ ಅವರಿಂದ ವಂದನಾ ಅವರಿಗೆ ಫ್ಲ್ಯಾಟ್ ನೋಂದಣಿ ಮಾಡಿಸಿಕೊಡುವಲ್ಲಿ ಸಹಕರಿಸಿದ್ದಾರೆ.