Advertisement

ಎಲ್ಲರಿಗೂ ವಂದನೆ, 2019ಕ್ಕೆ ಮತ್ತೆ ಸಿಗೋಣ

11:48 AM Oct 22, 2018 | Team Udayavani |

ಮೈಸೂರು: ಕಳೆದ ಕೆಲವು ದಿನಗಳ ಹಿಂದೆ ವಿಶ್ವವಿಖ್ಯಾತ ದಸರೆಯ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದ್ದ ಅಂಬಾವಿಲಾಸ ಅರಮನೆ ಆವರಣ ಭಾನುವಾರ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ನಾಡಹಬ್ಬಕ್ಕಾಗಿ ನಗರಕ್ಕಾಗಮಿಸಿ ಎಲ್ಲರ ಆಕರ್ಷಣೆಯಾಗಿದ್ದ ಗಜಪಡೆ ಒಲ್ಲದ ಮನಸ್ಸಿನಿಂದ ಕಾಡಿನತ್ತ ಪಯಣ ಆರಂಭಿಸುವ ಮೂಲಕ ಹಲವರ ಕಣ್ಣಂಚಲಿ ನೀರು ತರಿಸಿದವು. 

Advertisement

ಆತ್ಮೀಯ ಬೀಳ್ಕೊಡುಗೆ: ದಸರೆಯ ಹಿನ್ನೆಲೆಯಲ್ಲಿ ಕಾಡಿನಿಂದ ನಾಡಿಗೆ ಆಮಿಸಿದ್ದ ಅರ್ಜುನ ನೇತೃತ್ವದ 12 ಆನೆಗಳು ಕಳೆದ ಹಲವು ದಿನಗಳಿಂದ ಅರಮನೆಯಲ್ಲಿ ಬೀಡುಬಿಟ್ಟಿದ್ದವು. ಅಲ್ಲದೆ ಅ.19ರಂದು ನಡೆದ ಜಂಬೂಸವಾರಿ ಮೆರವಣಿಗೆ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆನೆಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿತ್ತು. ಅದರಂತೆ ಭಾನುವಾರ ಬೆಳಗ್ಗೆ ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಲಾರಿ ಏರಲು ಹಿಂದೇಟು: ಆದರೆ ದಸರೆಗೆಂದು ಕಾಡಿನಿಂದ ನಾಡಿಗೆ ಆಗಮಿಸಿ 47 ದಿನಗಳ ಕಾಲ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ಆನೆಗಳು ಇಲ್ಲಿನ ವಾತಾವರಣ, ಆರೈಕೆಗೆ ಹೊಂದುಕೊಂಡಿದ್ದವು. ಹೀಗಾಗಿ ಕಾಡಿನತ್ತ ಪಯಣ ಆರಂಭಿಸುವ ವೇಳೆ ಗಜಪಡೆ ಹಲವು ಆನೆಗಳು ಲಾರಿ ಹತ್ತಲು ಮಕ್ಕಳಂತೆ ಹಠ ಮಾಡಿದವು. ಅದರಲ್ಲೂ ಅರಮನೆ ಆವರಣ ಬಿಟ್ಟು ಹೋಗುವಾಗ ಗಜಪಡೆ ಕ್ಯಾಪ್ಟನ್‌ ಅರ್ಜುನನ ಕಣ್ಣುಗಳ ಒದ್ದೆಯಾಗಿದ್ದು, ಎಲ್ಲರನ್ನು ಚಕಿತಗೊಳಿಸಿತು. ಮತ್ತೂಂದೆಡೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಧನಂಜಯ ಲಾರಿ ಏರಲು ಹಿಂದೇಟು ಹಾಕುತ್ತಿದ್ದ ದೃಶ್ಯಗಳು ಹಲವರನ್ನು ಭಾವುಕರನ್ನಾಗಿಸಿತು. 

ಸಾಂಪ್ರದಾಯಿಕ ಪೂಜೆ: ಅರಮನೆಯಲ್ಲಿ ಸೂತಕ ಇರುವ ಹಿನ್ನೆಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಜಪಡೆಯ ಒಂಭತ್ತು ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಸಂದರ್ಭದಲ್ಲಿ ಎಲ್ಲಾ ಆನೆಗಳಿಗೆ ಚೆಂಡು ಹೂವಿನ ಹಾರ ತೋಡಿಸಿ ಪೂಜೆ ಸಲ್ಲಿಸಲಾಯಿತು.

ಗೌರವಧನ ವಿತರಣೆ: ಆನೆಗಳಿಗೆ ಕಬ್ಬು, ಬೆಲ್ಲ, ಹಣ್ಣುಗಳನ್ನು ನೀಡಲಾಯಿತು.ಬಳಿಕ ಆನೆಗಳ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಇಡ್ಲಿ, ವಡೆ, ಚಟ್ನಿ, ಅವರೆಕಾಳು ಮತ್ತು ಸೊಪ್ಪಿನ ಸಾಗು, ಪೊಂಗಲ್‌, ಕೇಸರಿಬಾತ್‌, ಟೀ, ಕಾಫಿ ನೀಡಲಾಯಿತು. ಇದೇ ವೇಳೆ ಅರಮನೆ ಆಡಳಿತ ಮಂಡಳಿಯಿಂದ ಆನೆ ಮಾವುತರು,

Advertisement

ಕಾವಾಡಿಗಳು ಮತ್ತು ಸಹಾಯಕರಿಗೆ ನೀಡಲಾದ ತಲಾ 8500 ರೂ. ಗೌರವಧನವನ್ನು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್‌ ವಿತರಿಸಿದರು. ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಡಿಸಿಎಫ್ ಸಿದ್ರಾಮಪ್ಪ ಚಳಕಾಪುರೆ, ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಮಣ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. 

ಮೂರು ಆನೆಗಳ ವಾಸ್ತವ್ಯ: ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿವಿಧ ಶಿಬಿರಗಳಿಂದ 12 ಆನೆಗಳು ಪಾಲ್ಗೊಂಡಿದ್ದವು. ಈ ಪೈಕಿ ಗಜಪಡೆಯ ಸಾರಥಿ ಅರ್ಜುನ ಸೇರಿದಂತೆ ಒಂಭತ್ತು ಆನೆಗಳು ದಸರೆಯ ಯಶಸ್ಸಿನೊಂದಿಗೆ ಕಾಡಿನತ್ತ ಪಯಣ ಆರಂಭಿಸಿದವು. ಆದರೆ ಸೂತಕದ ಕಾರಣಕ್ಕೆ ಮುಂದೂಡಿದ್ದ ವಿಜಯದಶಮಿಯ ಧಾರ್ಮಿಕ ಕಾರ್ಯಕ್ರಮಗಳು ಅ.22ರಂದು ನಡೆಯುವ ಹಿನ್ನೆಲೆಯಲ್ಲಿ ರಾಜವಂಶಸ್ಥರ ಕೋರಿಕೆ ಮೇರೆಗೆ, ಗೋಪಿ, ವಿಕ್ರಮ ಹಾಗೂ ವಿಜಯ ಆನೆಗಳು ಅರಮನೆಯಲ್ಲೇ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next