Advertisement

ಸಿಹಿ ಕೊಡುಗೆಗೆ ಸವಿ ಸ್ಪಂದನೆ

12:00 PM Mar 02, 2018 | Team Udayavani |

ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುರುವಾರ ಅದೇನೋ ಹೊಸ ಕಳೆ. ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವ ಈ ಕ್ಯಾಂಟೀನ್‌ಗೆ ಬಂದವರೆಲ್ಲ ಮುಗುಳ್ನಗುತ್ತಿದ್ದರು. “ಸಿಹಿ’ ಸುದ್ದಿ ಕೇಳಿದವರಂತೆ ಮಂದಹಾಸ ಬೀರುತ್ತಿದ್ದರು. ಜತೆಗೆ ಇಂದಿರಾ ಕ್ಯಾಂಟೀನ್‌ಗಳಿಂದ ಪಾಯಸದ ಸುವಾಸನೆ ಹೊರಹೊಮ್ಮುತ್ತಿತ್ತು!

Advertisement

ಈ ಮೊದಲೇ ಹೇಳಿದಂತೆ ಮಾ.1ರಿಂದ ಇಂದಿರಾ ಕ್ಯಾಂಟೀನ್‌ಗಳ ಮೆನು ಬದಲಾಗಿದೆ. ಅದರಂತೆ ಮೆನು ಬದಲಾದ ಮೊದಲ ದಿನ ಸಾರ್ವಜನಿಕರು ಪಾಯಸ ಸವಿದದ್ದು ಒಂದೆಡೆಯಾದರೆ, ಮತ್ತೂಂದೆಡೆ ಇಡ್ಲಿ, ಥಡ್ಕ ಇಡ್ಲಿ, ನಾನಾ ಬಗೆ ಬಗೆ ಚಟ್ನಿ, ರಾಗಿಮುದ್ದೆ, ಜತೆಗೆ ನೆಂಚಿಗೆಗೆ ಕೊಂಚ ಉಪ್ಪಿನಾಯಿ ಕೂಡ ಇತ್ತು. ಈ ಮೂಲಕ ಕಡಿಮೆ ದರದಲ್ಲಿ ಗುಣಮಟ್ಟದ ಊಟ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ನುಮುಂದೆ ತರಾವರಿ ಹಾಗೂ ರುಚಿಕರ ಆಹಾರವೂ ಸಿಗಲಿದೆ. 

ಮೊಸರನ್ನದ ಬದಲು ಪಾಯಸ: ಈ ಮೊದಲು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ-ಸಾಂಬಾರು ಹಾಗೂ ಮೊಸರನ್ನ ನೀಡಲಾಗುತ್ತಿತ್ತು. ಈಗ ಮೊಸರನ್ನದ ಬದಲಿಗೆ ಪಾಯಸ ಪರಿಚಯಿಸಲಾಗಿದೆ. ಅಲ್ಲದೆ, ಕೆಲವು ಕ್ಯಾಂಟೀನ್‌ಗಳಲ್ಲಿ ಪ್ರಾಯೋಗಿಕವಾಗಿ ರಾಗಿಮುದ್ದೆ ಕೂಡ ವಿತರಿಸಲಾಗುತ್ತಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು, ಮೊದಲ ದಿನವೇ ಎಂದಿಗಿಂತ ಹೆಚ್ಚು ಜನ ಇದರ ರುಚಿ ಸವಿದಿದ್ದಾರೆ. 

ಇಂದಿರಾ ಕ್ಯಾಂಟೀನ್‌ ಮೆನು ಬದಲಾಗಿರುವ ಕುರಿತು “ಉದಯವಾಣಿ’ ಜತೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೊಂಧು ಉತ್ತಮ ಬೆಳವಣಿಗೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಬೇಸಿಗೆಗೆ ಮೊಸರನ್ನ ಸೂಕ್ತವಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದಷ್ಟು ಬೇಗ ಎಲ್ಲ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ದೊರೆಯಲಿ ಎಂದು ಹಲವರು ಆಶಿಸಿದ್ದಾರೆ.

ಅರ್ಧದಷ್ಟು ಮೊಸರನ್ನ ವಾಪಸ್‌ ಹೋಗ್ತಿತ್ತು: ಮೊಸರನ್ನ ನೀಡುತ್ತಿದ್ದ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಜತೆಗೆ ಪೂರೈಕೆಯಾಗುವುದರಲ್ಲಿ ಅರ್ಧದಷ್ಟು ವಾಪಸ್‌ ಹೋಗುತ್ತಿತ್ತು. ಹೀಗಾಗಿ, ಮೊಸರನ್ನದ ಬದಲು ಪಾಯಸ ಪರಿಚಯಿಸಲಾಗಿದೆ. ಚಳಿಗಾಲ ಇದ್ದುದರಿಂದ ಮೊಸರನ್ನಕ್ಕೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಅಲ್ಲದೆ, ಬೇಗ ಹುಳಿ ಆಗಿಬಿಡುತ್ತದೆ. ಆದ್ದರಿಂದ ತಟ್ಟೆಯಲ್ಲಿ ಬಿಡುವುದು,

Advertisement

ಹಾಕಿಸಿಕೊಳ್ಳದೆ ಇರುವುದು ಸಾಮಾನ್ಯವಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಯೊಬ್ಬರು ತಿಳಿಸಿದರು. ಒಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಮೂರು ಸಾವಿರ ಪ್ಲೇಟ್‌ ಆಹಾರ ಪೂರೈಕೆಯಾಗುತ್ತದೆ. ಒಂದು ಕ್ಯಾಂಟೀನ್‌ನಲ್ಲಿ ದಿನಕ್ಕೆ ಸುಮಾರು 800 ಜನ ಆಹಾರ ಸೇವಿಸುತ್ತಾರೆ. ಗುರುವಾರ ಎಂದಿಗಿಂತ 50-70 ಜನ ಹೆಚ್ಚಿಗೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರದಲ್ಲಿ ಎಲ್ಲಡೆ ಮುದ್ದೆ ಊಟ: ಮೆನು ಬದಲಾದ ಮೊದಲ ದಿನ ಕುವೆಂಪುನಗರದ ವ್ಯಾಪ್ತಿಯ ಎಂಟು ಕ್ಯಾಂಟೀನ್‌ಗಳಲ್ಲಿ ಮಾತ್ರ ರಾಗಿಮುದ್ದೆ ಸಿಗುತ್ತಿತ್ತು. ರಾಗಿ ಮುದ್ದೆ ತಯಾರಿಸುವ ಯಂತ್ರ ಉಳಿದ ಭಾಗಗಳ ಕ್ಯಾಂಟೀನ್‌ಗಳಲ್ಲಿ ಇನ್ನೊಂದು ವಾರದಲ್ಲಿ ರಾಗಿ ಮುದ್ದೆ ಊಟ ಸಿಗಲಿದೆ.

ನನ್ನೂರು ಬಳ್ಳಾರಿ. ನವರಂಗ್‌ ಬಳಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ. ನಿತ್ಯ ಇಂದಿರಾ ಕ್ಯಾಂಟೀನ್‌ನಲ್ಲೇ ಊಟ ಮಾಡುತ್ತೇನೆ. ಹೊರಗಡೆ ಊಟ ಮಾಡಿದರೆ ದಿನಕ್ಕೆ ನೂರಾರು ರೂ. ಖರ್ಚಾಗುತ್ತದೆ. ಇಲ್ಲಿ ಕೇವಲ 25 ರೂ. ಬರೀ ಅನ್ನ-ಸಾಂಬಾರು ತಿಂದು ಬೇಜಾರಾಗಿತ್ತು. ಈಗ ಪಾಯಸವನ್ನೂ ಕೊಡುತ್ತಿರುವುದರಿಂದ ರುಚಿ ಹೆಚ್ಚಾಗಿದೆ.
-ಆಂಜನಪ್ಪ, ಕಟ್ಟಡ ಕಾರ್ಮಿಕ

ಅನ್ನ ಸಾಂಬಾರ್‌ಗಿಂತ ಮುದ್ದೆ ಊಟ ಉತ್ತಮ. ಪಾಯಸ ತುಂಬಾ ರುಚಿಯಾಗಿದೆ. ಇದನ್ನು ಮುಂದುವರಿಸಬೇಕು. ಹಾಗೂ ನಿತ್ಯ ಒಂದೇ ರೀತಿಯ ಆಹಾರ ಕೊಡುವ ಬದಲಿಗೆ ಆಗಾಗ್ಗೆ ಮೆನು ಬದಲಾವಣೆ ಮಾಡುತ್ತಿರುಬೇಕು.
-ಶಿವರಾಮು, ಮೆಡಿಕಲ್‌ ಸಿಸ್ಟ್‌ಂ ಫ್ಯಾಕ್ಟರಿ ಉದ್ಯೋಗಿ

ಹಸಿದವನಿಗೆ ಊಟ ಕೊಡುವುದಕ್ಕಿಂತ ಹೆಚ್ಚಿನದೇನಿದೆ? ಅನ್ನ-ಸಾಂಬಾರು, ಮೊಸರನ್ನ ಕೊಡುತ್ತಿದ್ದರು. ಈಗ ಪಾಯಸ ಕೊಡುತ್ತಿದ್ದಾರೆ. ಏನು ಕೊಟ್ಟರೂ ಬೇಕು ಬೇಕು ಎನ್ನುವುದು ಮನುಷ್ಯನ ಗುಣ. ಈಗ 10 ರೂ.ಗೆ ರುಚಿ-ಶುಚಿಯಾದ ಊಟ ಕೊಡುತ್ತಿರುವುದೇ ಸಾಕು.
-ಶ್ರೀನಿವಾಸ್‌, ಹಾವನೂರು ವೃತ್ತದ ನಿವಾಸಿ

ಚಳಿಗಾಲದಲ್ಲಿ ಮೊಸರನ್ನ ಕೊಟ್ಟು, ಬೇಸಿಗೆಯಲ್ಲಿ ನಿಲ್ಲಿಸಿದ್ದಾರೆ. ಇದು ಅಷ್ಟು ಸೂಕ್ತ ಅನಿಸುತ್ತಿಲ್ಲ. ಇನ್ಮುಂದೆ ಬೇಸಿಗೆ ಶುರುವಾಗುವುದರಿಂದ ಪಾಯಸದ ಬದಲಿಗೆ ಮೊಸರನ್ನ ಕೊಟ್ಟಿದ್ದರೆ ಒಳ್ಳೆಯದಿತ್ತು. ಹೊಟ್ಟೆಗೂ ತಂಪು ಅನಿಸುತ್ತಿತ್ತು.
-ಅನಸೂಯಮ್ಮ, ಅಂಜನಾನಗರ ನಿವಾಸಿ

ಮೈಸೂರಿನಲ್ಲೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದೇವೆ. ಅಲ್ಲಿಗೂ ಇಲ್ಲಿಗೂ ರುಚಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಒಂದೇ ರೀತಿಯ ಗುಣಮಟ್ಟ ಕಾಯ್ದುಕೊಂಡು ಬರಲಾಗಿದೆ. ಆದಷ್ಟು ಬೇಗ ಲ್ಲ ಕ್ಯಾಂಟೀನ್‌ಗಳಲ್ಲೂ ರಾಗಿಮುದ್ದೆ ಕೊಡಬೇಕು.
-ಗೌರಮ್ಮ, ಮೈಸೂರು ನಿವಾಸಿ

300 ಗ್ರಾಂ ಊಟದ ಜತೆಗೆ ಈಗ 100 ಗ್ರಾಂ ಪಾಯಸ ನೀಡಲಾಗುತ್ತಿದೆ. ಮಹಾಲಕ್ಷ್ಮೀ ಲೇಔಟ್‌ ವ್ಯಾಪ್ತಿಯಲ್ಲಿ ಮೊದಲ ದಿನ ಜನರ ಅಭಿಪ್ರಾಯ ಸಂಗ್ರಹಿಸಿದೆ. ಪಾಯಸ ಪೂರೈಕೆಗೆ ಉತ್ತಮ ಸ್ಪಂದನೆ ದೊರಕಿದೆ. ಯಾವೊಂದು ತಟ್ಟೆಯಲ್ಲೂ ಅನ್ನ ಅಥವಾ ಪಾಯಸ ಬಿಟ್ಟಿದ್ದು ಕಂಡುಬಂದಿಲ್ಲ.
-ನಾಗಪ್ಪ, ಮಾರ್ಷಲ್‌ಗ‌ಳ ಮೇಲ್ವಿಚಾರಕ

Advertisement

Udayavani is now on Telegram. Click here to join our channel and stay updated with the latest news.

Next