Advertisement

ಜೀವಂತವಾಗಿ ಬಂದಿದ್ದೇನೆ…ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ-ಮೋದಿ;ಪಂಜಾಬ್ ನಲ್ಲಿ ನಡೆದಿದ್ದೇನು?

04:17 PM Jan 05, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ(ಜನವರಿ05) ಪಂಜಾಬ್ ನ ಫಿರೋಜ್ ಪುರದಲ್ಲಿ 42,750 ಕೋಟಿ ರೂ ಮೊತ್ತದ ಬಹುಕೋಟಿ ರೂಪಾಯಿಗಳ ಯೋಜನೆಗಳ ಶಂಕುಸ್ಥಾಪನೆಗೆ ತೆರಳುತ್ತಿದ್ದ ವೇಳೆ ಫ್ಲೈಓವರ್ ಬಳಿಯೇ ಪ್ರಧಾನಿ ಬೆಂಗಾವಲು ಪಡೆ ವಾಹನವನ್ನು ಪ್ರತಿಭಟನಾಕಾರರು ತಡೆದುಬಿಟ್ಟಿದ್ದರು. ಇದರ ಪರಿಣಾಮ ಪ್ರಧಾನಿ ಅವರ ಕಾರು ಸುಮಾರು 15-20 ನಿಮಿಷಗಳ ಕಾಲ ನಿಲ್ಲುವಂತಾಗಿತ್ತು. ಇದೊಂದು ಗಂಭೀರವಾದ ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುರುತರವಾದ ಭದ್ರತಾ ಲೋಪವಾಗಿದೆ. ಇದರಿಂದಾಗಿ ಅವರು ಭೇಟಿಯನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್ ಆಗುತ್ತಿದ್ದಾರೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪಂಜಾಬ್ ಸರ್ಕಾರ ಭದ್ರತೆಯನ್ನು ನಿಯೋಜಿಸಬೇಕಿತ್ತು. ಆದರೆ ಪಂಜಾಬ್ ಸರ್ಕಾರ ಇದಕ್ಕೆ ಹೊಣೆ ಹೊತ್ತು, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ನಲ್ಲಿ ತೆರಳಬೇಕಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ರಸ್ತೆ ಮಾರ್ಗದಲ್ಲಿ ತೆರಳಲು ನಿರ್ಧರಿಸಿದ್ದರು ಎಂದು ವರದಿ ವಿವರಿಸಿದೆ.

ಜೀವಂತವಾಗಿ ಬಂದಿದ್ದೇನೆ..ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ: ಮೋದಿ

Advertisement

ಫ್ಲೈಓವರ್ ನಲ್ಲಿ ಪ್ರತಿಭಟನಾಕಾರರು ಬೆಂಗಾವಲು ಪಡೆ ಕಾರನ್ನು ತಡೆದ ಘಟನೆಯಿಂದ ಅಸಮಾಧಾನಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಭಟಿಂಡಾ ಏರ್ ಪೋರ್ಟ್ ನಲ್ಲಿ, ನಾನು ಇಲ್ಲಿಯವರೆಗೆ ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದು ಏರ್ ಪೋರ್ಟ್ ಸಿಬಂದಿ ಬಳಿ ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next