Advertisement

ಸಾಧನೆಯ ಹಾದಿಗೆ ನೂಕಿದ್ದಕ್ಕೆ ಧನ್ಯವಾದ!

12:30 AM Mar 19, 2019 | |

ಹರ ಸಾಹಸ ಪಟ್ಟ ಮೇಲೆ ನಿನ್ನ ನಂಬರ್‌ ಸಿಕ್ಕಿತ್ತು. ಮೆಸೇಜ್‌ ಮಾಡಲಿಕ್ಕೇ ಹೆದರಿಕೆ. ಇನ್ನು ಕಾಲ್‌ ಮಾಡೋದು ದೂರದ ಮಾತು. ಕಾಲೇಜನಲ್ಲಿದ್ದಾಗ ದೂರದಿಂದ ನೋಡೋದನ್ನು ಬಿಟ್ಟರೆ, ನಿನ್ನ ಎದುರಿಗೆ ಓಡಾಡುವುದೂ ನನ್ನಿಂದ ಸಾಧ್ಯವಾಗಿರಲಿಲ್ಲ. 

Advertisement

ಅದು ಡಿಗ್ರಿಯ ಕೊನೆಯ ದಿನ. ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕನಿಷ್ಠಪಕ್ಷ ಇವತ್ತಾದರೂ ನಿನ್ನನ್ನು ಮಾತಾಡಿಸಬೇಕು ಅಂತ ನಿರ್ಧರಿಸಿದೆ. ಪಿಯುಸಿಯಲ್ಲಿ ಎರಡು ವರ್ಷ, ಆಮೇಲೆ ಡಿಗ್ರಿಯಲ್ಲಿ ಮೂರು ವರ್ಷ; ಒಟ್ಟು ಐದು ವರ್ಷ ಮೌನವಾಗಿಯೇ ನಿನ್ನನ್ನು ಪ್ರೀತಿಸುತ್ತಿದ್ದೆ.  ನನ್ನ ಈ ಒನ್‌ ಸೈಡೆಡ್‌ ಲವ್‌ ವಿಷಯವನ್ನು ನಿನಗೆ ಹೇಳಬೇಕೆಂದುಕೊಂಡೆ. 

ಮೊದಲೇ ನೋಡೋಕೆ ಸುಂದರಿ. ಆ ದಿನ ಸೀರೆಯುಟ್ಟು, ಮಲ್ಲಿಗೆ ಬೇರೆ ಮುಡಿದಿದ್ದೆ. ಆ ಮುಂಗುರುಳು, ಮುಡಿದ ಮಲ್ಲಿಗೆಯ ಪರಿಮಳ, ಕೆನ್ನೆ ಮೇಲಿನ ಕೆಂಪು, ಮುಗುಳ್ನಗು ನನ್ನನ್ನು ಮತ್ತೆ ಮೂಕವಿಸ್ಮಿತನನ್ನಾಗಿಸಿತು. “ಏನೋ ಮಾತಾಡಬೇಕು ಬಾ ಅಂದು ಸುಮ್ಮನೇ ಯಾಕೆ ನಿಂತೆ? ಮಾತಾಡು’ ಅಂತ ನೀನು ಕೇಳಿದಾಗ ಕೈ-ಕಾಲಲ್ಲಿ ಸಣ್ಣ ನಡುಕ. ನನ್ನ ಪ್ರೀತಿಯನ್ನು ನೀನು ತಿರಸ್ಕರಿಸಿಬಿಟ್ಟರೆ ಎಂಬ ಆತಂಕ. ಆದರೂ, ಧೈರ್ಯ ಮಾಡಿ ಹೇಳೇಬಿಟ್ಟೆ- “ಭೂಮಿ, ನೀನೆಂದರೆ ನಂಗೆ ತುಂಬಾ ಇಷ್ಟ. ನಾನು ನಿನ್ನನ್ನು ಪಿಯುಸಿಯಿಂದಲೂ ಪ್ರೀತಿಸುತ್ತಿದ್ದೇನೆ. ಆದರೆ, ಹೇಳ್ಳೋಕೆ ಧೈರ್ಯ ಇರಲಿಲ್ಲ’. ಇಷ್ಟು ಮಾತು ಕೇಳಿದ್ದೇ ತಡ, ನಿನ್ನ ಮುಖದ ಮೇಲಿನ ನಗು ಮಾಯವಾಗಿತ್ತು. ಸಿಟ್ಟಿನಿಂದ- “ನೋಡೂ, ನಂಗಿದೆಲ್ಲ ಇಷ್ಟ ಆಗಲ್ಲ. ನೀನೆಲ್ಲಿ, ನಾನೆಲ್ಲಿ! ಆಸೆ ಪಡಲೂ ಒಂದು ಮಿತಿ ಇರಬೇಕಲ್ವಾ? ಬೇಕಾದರೆ ಫ್ರೆಂಡ್‌ ಆಗಿ ಇರ್ತೀನಿ, ಲವ್‌ ಮಾಡ್ತೀನಿ ಅಂತ ಕನಸೂ ಕಾಣಬೇಡ’ ಅಂದುಬಿಟ್ಟೆ.

ನಿನ್ನ ಮಾತುಗಳು ಬರಸಿಡಿಲಿನಂತೆ ಬಂದು ಅಪ್ಪಳಿಸಿದ ಕ್ಷಣವೇ, ಹೃದಯ ಚೂರಾಗಿ ಹೋಯ್ತು. ಅಂತಸ್ತು, ಸೌಂದರ್ಯ ಎಂಬ ಪ್ರವಾಹಕ್ಕೆ ಸಿಲುಕಿ ಪ್ರೀತಿಯ ದೋಣಿ ಮುಳುಗಿ ಹೋಯ್ತು. ಆಡಿದ ನಾಲ್ಕು ಮಾತುಗಳಲ್ಲೇ ನೀನು ನಮ್ಮಿಬ್ಬರ ನಡುವಿನ ಅಂತಸ್ತಿನ ಅಂತರವನ್ನು ಎತ್ತಿ ತೋರಿಸಿದ್ದೆ. ಎಲ್ಲವೂ ನನ್ನದೇ ತಪ್ಪು ಎಂದುಕೊಂಡು ಸಮಾಧಾನಪಟ್ಟೆ. 

ನಿನ್ನ ನೆನಪಿನಲ್ಲಿ ಅದಾಗಲೇ ಮಹತ್ತರವಾದ ಐದು ವರ್ಷಗಳನ್ನು ಹಾಳು ಮಾಡಿಕೊಂಡಿದ್ದೇನೆ. ಇನ್ನಾದರೂ ನನ್ನ ಗುರಿಯತ್ತ ಗಮನ ಹರಿಸಬೇಕು. ಸಮಾಜದಲ್ಲಿ ಆಸ್ತಿ – ಅಂತಸ್ತಿಗೇ ಬೆಲೆ ಅಂತಾದರೆ, ನಾನೂ ಅದನ್ನೆಲ್ಲ ಪಡೆದುಕೊಳ್ಳಬೇಕು. ವಾಸ್ತವ ಏನೆಂದು ಅರ್ಥ ಮಾಡಿಸಿದ, ನನ್ನಲ್ಲಿ ಸಾಧನೆಯ ಕಿಚ್ಚು ಹತ್ತಿಸಿದ ನಿನಗೆ ಧನ್ಯವಾದ. 

Advertisement

ಬಸನಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next