ಹುಬ್ಬಳ್ಳಿ: ಶ್ರೇಷ್ಠ ಹಿರಿಯ ರಂಗಕರ್ಮಿ, ವೃತ್ತಿ ರಂಗಭೂಮಿಯ ಭೀಷ್ಮ, ನಾಡೋಜ ಏಣಗಿ ಬಾಳಪ್ಪ ಅವರ ನಿಧನವು ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಶತಾಯುಷಿ ರಂಗಕೈಂಕರ್ಯ ಮೆಚ್ಚಿ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿಯೂ ಲಭಿಸಿತ್ತು. ಅವರ ಅಗಲಿಕೆಯು ಸಮಾಜ ಮತ್ತು ರಂಗಭೂಮಿಗೆ ತುಂಬಲಾರದ ಹಾನಿಯಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಕಂಬನಿ ಮಿಡಿದಿದ್ದಾರೆ.
ಜಗದೀಶ ಶೆಟ್ಟರ: ತಮ್ಮ ಪ್ರತಿಭೆಯ ಮೂಲಕ ಹೆಸರು ಮಾಡಿದ್ದ ಬಾಳಪ್ಪ ಬಸವೇಶ್ವರರ ಪಾತ್ರಕ್ಕೆ ಜೀವ ತುಂಬಿ ಮನೆ ಮಾತಾಗಿದ್ದರು. ತಮ್ಮದೇ ನಾಟಕ ಸಂಸ್ಥೆಯ ಮುಖಾಂತರ ಹಲವಾರು ಕಲಾವಿದರನ್ನು ನಾಡಿಗೆ ಕೊಡುಗೆ ನೀಡಿದ್ದರು. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಆಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಜಗದೀಶ ಶೆಟ್ಟರ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹಾಪೌರ ಚವ್ಹಾಣ: ಉತ್ತರ ಕರ್ನಾಟಕದ ಹಿರಿಯ ರಂಗಭೂಮಿ ಕಲಾವಿದ, ಸಂಗೀತಗಾರ ಏಣಗಿ ಬಾಳಪ್ಪ ಅವರ ನಿಧನದಿಂದ ನಾಡು ಒಬ್ಬ ಹಿರಿಯ ನಾಟಕಕಾರರನ್ನು ಕಳೆದುಕೊಂಡು ಬಡವಾಗಿದೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಪಾಲಿಕೆ ಮಹಾಪೌರ ಡಿ.ಕೆ. ಚವ್ಹಾಣ ಸಂತಾಪ ಸೂಚಿಸಿದ್ದಾರೆ.
ಬಸವರಾಜ ಹೊರಟ್ಟಿ: ವೃತ್ತಿ ರಂಗಭೂಮಿಯ ಭೀಷ್ಮ, ನಾಡೋಜ ಏಣಗಿ ಬಾಳಪ್ಪ ಅವರು ಪ್ರಭಾವಶಾಲಿ ರಂಗಕರ್ಮಿ ಆಗಿದ್ದರು. ಅವರ ನಾಟಕಗಳನ್ನು ನಾವು ನಮ್ಮ ಮದಿಂದ ಚಕ್ಕಡಿ ಕಟ್ಟಿಕೊಂಡು ಹೋಗಿ ನೋಡುತ್ತಿದ್ದೆವು. ಸಮಚಿತ್ತವಾದ ಚಿಂತನೆ ಅವರಲ್ಲಿತ್ತು. ಸಾರ್ಥಕ ಬದುಕು ಅವರದಾಗಿತ್ತು. ಬಾಳಪ್ಪನವರ ಅಗಲಿಕೆಯಿಂದ ರಂಗಭೂಮಿಗೆ ಅಪಾರ ಹಾನಿಯಾಗಿದೆ. ಸಮಾಜವು ಉತ್ತಮ ಸಂದೇಶಕಾರರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.