ಚೆನ್ನೈ: ಕಾಲಿವುಡ್ ನಲ್ಲಿ ಈ ವರ್ಷ ಮೆಚ್ಚುಗೆ ಪಡೆದ ಸಾಲಿಗೆ ಸೇರಿದ ಚಿಯಾನ್ ವಿಕ್ರಮ್ (Actor Vikram) ʼತಂಗಲಾನ್ʼ(Thangalaan) ಚಿತ್ರ ಸದ್ದಿಲ್ಲದೆ ಓಟಿಟಿಗೆ ಬಂದಿದೆ.
ವಿಕ್ರಮ್ ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿʼತಂಗಲಾನ್ʼ ಕೂಡ ಒಂದು. ʼಕೆಜಿಎಫ್ʼ ಅಖಾಡದಲ್ಲಿದ್ದ ಪೂರ್ವಜರ ಕಥೆಯ ʼತಂಗಲಾನ್ʼ ಚಿನ್ನ ಹುಡುಕುವ ರೋಚಕ ಕಥೆಯನ್ನು ಹೇಳಿತ್ತು. ಆಗಸ್ಟ್ 15ರಂದು ಥಿಯೇಟರ್‌ನಲ್ಲಿ ತೆರೆಕಂಡ ʼತಂಗಲಾನ್ʼ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.
ರಿಲೀಸ್ ಆಗಿ ಒಂದಷ್ಟು ದಿನ ಥಿಯೇಟರ್‌ನಲ್ಲಿದ್ದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಸಮಾಧಾನ ತಂದುಕೊಟ್ಟ ಕಲೆಕ್ಷನ್ ಮಾಡಿತು. ಓಟಿಟಿ ರಿಲೀಸ್‌ಗೆ ಕೆಲವೊಂದು ಅಡೆತಡೆಗಳು ಉಂಟಾಗಿತ್ತು. ಮೊದಲಿಗೆ ಹಣಕಾಸಿನ ತೊಂದರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದನ್ನು ನಿರ್ಮಾಪಕರು ಅಲ್ಲಗೆಳೆದಿದ್ದರು.
ಇದಾದ ಬಳಿಕ ದೀಪಾವಳಿ ಹಬ್ಬಕ್ಕೆ ಓಟಿಟಿಗೆ ಬರಲಿದೆ ಎನ್ನುವ ಮಾತು ಕೇಳಿಬಂದಿತ್ತು. ಇದೇ ವೇಳೆ ಚಿತ್ರವು ವೈಷ್ಣವ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಉಲ್ಲೇಖಿಸಿ ತಿರುವಳ್ಳುವರ್‌ನ ವ್ಯಕ್ತಿಯೊಬ್ಬರು ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದ ಮದ್ರಾಸ್ ಹೈಕೋರ್ಟ್ ಚಿತ್ರದ ಒಟಿಟಿ ಬಿಡುಗಡೆಗೆ ತಡೆ ಹೇರಿತ್ತು. ಅರ್ಜಿಯ ವಿಚಾರಣೆಯ ಬಳಿಕ ಬ್ಯಾನ್ ತೆರೆಗೊಳಿಸಿತು.
ಇದೀಗ ಸದ್ದಿಲ್ಲದೆ ಸಿನಿಮಾ ಓಟಿಟಿಗೆ ಬಂದಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮಂಗಳವಾರ (ಡಿ.10 ರಂದು) ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಿದೆ.
ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ ವರ್ಲ್ಡ್ ವೈಡ್ ಸಿನಿಮಾ 72 ಕೋಟಿ ರೂ. ಗಳಿಸಿತು. ಚಿತ್ರತಂಡದ ನಿರೀಕ್ಷೆಗೆ ತಕ್ಕ ಕಮಾಯಿ ಮಾಡದಿದ್ರೂ ಚಿತ್ರ ಸ್ಕ್ರೀನ್ ಪ್ಲೇ, ನಟನೆಯಿಂದ ಅನೇಕರಿಂದ ಮೆಚ್ಚುಗ ಪಡೆದಿತ್ತು.
ಪಾ ರಂಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ಜತೆಗೆ ಪಾರ್ವತಿ ತಿರುವೋತ್ತು, ಪಶುಪತಿ, ಮಾಳವಿಕಾ ಮೋಹನನ್, ಡೇನಿಯಲ್ ಕ್ಯಾಲ್ಟಗಿರೋನ್, ಆನಂದಸಾಮಿ ಮುಂತಾದವರು ನಟಿಸಿದ್ದಾರೆ.