ಥಾಣೆ, ಜು. 21: ಥಾಣೆಯಲ್ಲಿ ಸೋಮವಾರ 1,585 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69,190ಕ್ಕೆ ತಲುಪಿದ್ದು, 35 ಸಾವುಗಳೊಂದಿಗೆ ಮೃತರ ಸಂಖ್ಯೆ 1,927ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲ್ಯಾಣ್-ಡೊಂಬಿವಲಿ 427 ಪ್ರಕರಣ ವರದಿಯಾಗಿದ್ದು, ಒಟ್ಟು 16,334 ಪ್ರಕರಣಗಳೊಂದಿಗೆ ಇಡೀ ಜಿಲ್ಲೆಯಲ್ಲಿ ಹೆಚ್ಚು ಪೀಡಿತ ಪ್ರದೇಶವಾಗಿ ಹೊರಹೊಮ್ಮಿದೆ. 255 ಪ್ರಕರಣ ವರದಿಯಾಗಿರುವ ಥಾಣೆಯಲ್ಲಿ ಒಟ್ಟು 16,028 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನವಿಮುಂಬಯಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ಹತ್ತಿರವಾಗುತ್ತಿದ್ದು, 286 ಹೊಸ ಪ್ರಕರಣಗಳೊಂದಿಗೆ ಮಂಗಳವಾರ ಸೋಂಕಿತರ ಸಂಖ್ಯೆ 11,712ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ 35 ಸಾವುಗಳಲ್ಲಿ 61ರ ಹರೆಯದ ವೈದ್ಯ ಮತ್ತು 79ರ ಹರೆಯದ ಬ್ಯಾಂಕ್ ನೌಕರನ ಸಾವು ಸೇರಿದೆ ಎಂದು ಅ ಕಾರಿ ಹೇಳಿದ್ದಾರೆ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ 12,073 ಪ್ರಕರಣಗಳಿದ್ದು, ಈವರೆಗೆ 218 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸಹಾಯಕ್ಕೆ ಮನಪಾ ಕೋರಿಕೆ: ನಗರದಲ್ಲಿ ಕೋವಿಡ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆ ಥಾಣೆ ಮಹಾನಗರ ಪಾಲಿಕೆ ಖಾಸಗಿ ವೈದ್ಯರ ಸಹಾಯವನ್ನು ಕೋರಿದೆ. ನಗರದಲ್ಲಿ ಸೋಂಕು ತಡೆಗಟ್ಟುವ ಪ್ರಯತ್ನಗಳನ್ನು ಬಲಪಡಿಸಲು ಮುಂಬಯಿಯ ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ ಅಡಿಯಲ್ಲಿನ ಖಾಸಗಿ ವೈದ್ಯರ ಸೇವೆಗಳನ್ನು ಪಡೆದುಕೊಳ್ಳಲಾಗುವುದು ಎಂದು ಟಿಎಂಸಿ ಆಯುಕ್ತ ವಿಪಿನ್ ಶರ್ಮಾ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ವಾರ್ಡ್ ಸಮಿತಿಗಳ ಸಹಾಯಕ ಆಯುಕ್ತರು ಅಗತ್ಯಕ್ಕೆ ತಕ್ಕಂತೆ ಈ ವೈದ್ಯರ ಸೇವೆಗಳನ್ನು ಪಡೆದುಕೊಳ್ಳಬೇಕು ಮತ್ತು ಪಟ್ಟಿಯನ್ನು ಮನಪಾ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.