Advertisement
ತಲಪಾಡಿ ಯಕ್ಷೋತ್ಸವ ನವೆಂಬರ್ 10ರಂದು ಐದನೇ ವರುಷದ ಸಂಭ್ರಮವನ್ನು ಆಚರಿಸಿತು. ಸುದೀರ್ಘ ಕಾಲ ಪ್ರವಾಹದಲ್ಲಿ ಐದು ವರುಷಗಳ ಕಾಲಖಂಡದ ಅವಧಿ ತೀರಾ ಕಿರಿದೆನಿಸಿದರೂ ಸಂಘಟನೆಯ ಸಂಕಷ್ಟವನ್ನು ಅರಿತವರಿಗೆ ಇದರ ಹಿಂದೆ ಇರುವ ಪರಿಶ್ರಮವೆಷ್ಟೆಂದು ತಿಳಿದಿದೆ. ಇದರ ಸಂಪೂರ್ಣ ನೇತೃತ್ವ ವಹಿಸಿ ಯಕ್ಷೊàತ್ಸವವನ್ನು ಸಾಕಾರಗೊಳಿಸುವವರು ಯಕ್ಷಮಿತ್ರ ಸೇವಾಬಳಗದ ನೇತಾರ ಸಂತೋಷ ಅಲಂಕಾರಗುಡ್ಡೆ.
Related Articles
Advertisement
ತೆಂಕುತಿಟ್ಟಿಗೆ ಮೀಸಲಾದ ಪ್ರಸಂಗ “ಕುಮಾರ ವಿಜಯ’. ಈ ಪ್ರಸಂಗದಲ್ಲಿ ಕವಿಮುದ್ದಣನ ಕಾವ್ಯಶಿಲ್ಪಕ್ಕೆ ಜೀವತುಂಬಿದವರು ಬಲಿಪ ಪ್ರಸಾದ ಭಾಗವತರು. ಮುದ್ದಣನ ಹೊಸತನದ ಕಾವ್ಯಗಳಿಗೆ ಹಳೆಯ ದೇಸಿಗಾನದಲ್ಲಿ ಪದ್ಯವನ್ನು ಹೃದ್ಯವಾಗಿಸಿದ ಬಲಿಪರು “ಓಲ್ಡ್ ಈಸ್ ಗೋಲ್ಡ್’ ಎನ್ನುವ ಮಾತಿಗೆ ನಿದರ್ಶನವಾದರು. ಮಟ್ಟುಗಳ ಸೊಬಗನ್ನು ಉಳಿಸಿ ಹಾಡುವುದೇ ಯಕ್ಷಗಾನದ ಜೀವಬಿಂದು ಎಂಬುದನ್ನು ತೋರಿಸಿಕೊಟ್ಟ ಬಲಿಪರು ಅಭಿನಂದನೀಯರು.
ಯಾವುದೇ ಪಾತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸುವ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರ “ಋಷಿ ಶೃಂಗಾರ’ ಚೇತೋಹಾರಿ. ಅಜಮುಖೀಯೊಡನೆ ನಡೆಸಿದ ಶೃಂಗಾರ ಸಂವಾದದಲ್ಲಿ ಯಾವುದೇ ಅಶ್ಲೀಲ ನುಸುಳದಂತೆ ಪಾತ್ರಗೌರವವನ್ನು ಕಾಪಾಡಿಕೊಂಡು ಸಭಾರಂಜನೆ ಮಾಡಿದ ರೀತಿ ಪಂಡಿತ ಪಾಮರರನ್ನೂ ರಂಜಿಸಿತು. ಅವರದು ಮಾದರಿ ದೂರ್ವಾಸ. ಉಳಿದ ಪಾತ್ರಧಾರಿಗಳು ತಮ್ಮ ಪಾತ್ರಗಳನ್ನು ಹುರುಪಿನಿಂದ ನಿರ್ವಹಿಸಿದರು.
ತೆಂಕು-ಬಡಗಿನ ಪ್ರದರ್ಶನಗಳು ಒಂದೇ ವೇದಿಕೆಯಲ್ಲಿ ಮೊದಲು ನಡೆಸಿದ್ದು ವಿಠಲ ಶೆಟ್ಟಿ ಅವರ ರಾಜರಾಜೇಶ್ವರೀ ಮೇಳದಲ್ಲಿ ಎಂದು ಕೇಳಿಬಲ್ಲೆ. ಆ ಪ್ರದರ್ಶನಗಳಿದ್ದದ್ದು ಪ್ರತ್ಯೇಕ ಪ್ರತ್ಯೇಕವಾಗಿ. ಪ್ರಾಯಃ ಕರ್ನೂರು ಕೊರಗಪ್ಪ ರೈಗಳು ಒಂದೇ ಪ್ರಸಂಗದೊಳಗೆ ಎರಡೂ ತಿಟ್ಟಿನ ಪಾತ್ರಗಳನ್ನು ತಂದರು. ಇದು ಕೇವಲ ಪ್ರಯೋಗಾತ್ಮಕವಾಗಿ.
ಕರ್ಣಾವಸಾನದಂತಹ ಪ್ರಸಂಗಗಳಲ್ಲಿ ಎರಡೂ ತಿಟ್ಟಿನಲ್ಲಿ ಪ್ರದರ್ಶನದ ಒಳವಿನ್ಯಾಸವೇ ಬೇರೆ. ಎರಡೂ ತಿಟ್ಟುಗಳು ತಮ್ಮ ಅನನ್ಯತೆಗಳಿಂದ ಭಿನ್ನವಾಗಿರುವಾಗ ರಂಗಸ್ಥಳದಲ್ಲಿ ಅವುಗಳ ಸಾಂಕರ್ಯ ಸಮುಚಿತವೆ? ಸಹೃದಯಿಗಳಿಗೆ ರಸಾಸ್ವಾದನೀಯವೆ? ಹಿಮ್ಮೇಳದವರು ಏಕ ವಸ್ತ್ರಸಂಹಿತೆ ಪಾಲಿಸದಿದ್ದರೆ ರಂಗಸ್ಥಳದ ಶಿಲ್ಪಸೌಂದರ್ಯಕ್ಕೆ ಚ್ಯುತಿಯಲ್ಲವೆ? ಮುಂತಾದ ಪ್ರಶ್ನೆಗಳು ಕಾಡಿದರೂ ಮೂರು ಪ್ರಸಂಗಗಳೂ ರಂಜಿಸುವಲ್ಲಿ ಯಶಸ್ವಿಯಾದವು.
ತಾರಾನಾಥ ವರ್ಕಾಡಿ