ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼ ‘ತಲೈವರ್ 170’ ಕುರಿತ ಒಂದೊಂದೇ ಅಪ್ಡೇಟ್ ಗಳು ಹೊರಬೀಳುತ್ತಿದೆ. ಇದೀಗ ಸಿನಿಮಾದಲ್ಲಿ ನಟಿಸಲಿರುವ ಮತ್ತೊಂದು ಪ್ರಮುಖ ಪಾತ್ರದ ಬಗ್ಗೆ ಚಿತ್ರತಂಡ ರಿವೀಲ್ ಮಾಡಿದೆ.
‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ʼ ತಲೈವರ್ 170ʼ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿ ಬಹು ತಾರಾಂಗಣವಿರಲಿದೆ ಎನ್ನುವ ಸುದ್ದಿಯೊಂದು ಕಾಲಿವುಡ್ ನಲ್ಲಿ ಹಬ್ಬಿತ್ತು. ಇದಾದ ಬಳಿಕ ಒಂದೊಂದೇ ಕಲಾವಿದರನ್ನು ಪರಿಚಯಿಸಿದೆ.
ಈಗಾಗಲೇ ಸಿನಿಮಾದಲ್ಲಿ ಮಲಯಾಳಂ ಸಿನಿಮಾರಂಗದಿಂದ ಫಾಹದ್ ಫಾಸಿಲ್ ಅವರು ಕಾಣಿಸಿಕೊಳ್ಳಲಿದ್ದು, ಟಾಲಿವುಡ್ ರಂಗದಿಂದ ರಾಣಾ ದಗ್ಗುಬಾಟಿ ಹಾಗೂ ಮಾಲಿವುಡ್ ನಟಿ ಮಂಜು ವಾರಿಯರ್ ಕೂಡ ಸಿನಿಮಾದ ಭಾಗವಾಗಿದ್ದಾರೆ. ಇದರ ಜೊತೆಗೆ ನಟಿ ರಿತಿಕಾ ಸಿಂಗ್ ಹಾಗೂ ದುಶಾರ ವಿಜಯನ್ ಕೂಡ ಸಿನಿಮಾ ತಂಡದ ಪಾತ್ರವಾಗಲಿದ್ದಾರೆ ಎನ್ನುವ ಬಗ್ಗೆ ಪೋಸ್ಟರ್ ರಿಲೀಸ್ ಮಾಡಿ ಹೇಳಿದೆ.
ಇದೀಗ ರಜಿನಿಕಾಂತ್ ಅವರ ಸಿನಿಮಾ ಅಮಿತಾಭ್ ಬಚ್ಚನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಅಧಿಕೃತವಾಗಿದೆ. 1991 ರಲ್ಲಿ ರಜಿನಿಕಾಂತ್ ಹಾಗೂ ಅಮಿತಾಭ್ ʼಹಮ್ʼ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ 32 ವರ್ಷದ ಬಳಿಕ ಮೊದಲ ಬಾರಿಗೆ ರಜಿನಿ – ಬಿಗ್ ಬಿ ಜೊತೆಯಾಗಿ ನಟಿಸಲಿದ್ದಾರೆ.
ಇದಾದ ಬಳಿಕ ರಜಿನಿಕಾಂತ್ ಲೋಕೇಶ್ ಕನಕರಾಜ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಮುಂದಿನ ವರ್ಷ ಮಾರ್ಚ್ ನಲ್ಲಿ ಆರಂಭವಾಗಲಿದೆ. ಲೋಕೇಶ್ ಸಿನಿಮಾದ ಪ್ರೀ ಪ್ರೊಡಕ್ಷನ್ ವರ್ಕ್ ಶುರು ಮಾಡಿದ್ದಾರೆ ಎನ್ನಲಾಗಿದೆ.