ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಖ್ಯ ಮಂತ್ರಿ ಯಾರು ಎಂಬ ಗೊಂದಲಕ್ಕೆ ರವಿವಾರ ತೆರೆ ಬಿದ್ದಿದೆ. ಕರ್ನಾಟಕದ ಅಳಿಯ, ಮಾಜಿ ಸಚಿವ ಜೈರಾಮ್ ಠಾಕೂರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಶಿಮ್ಲಾದಲ್ಲಿ ನಡೆದ ಬಿಜೆಪಿ ಶಾಸಕ ಪಕ್ಷದ ಸಭೆಯಲ್ಲಿ ಐದು ಬಾರಿ ಶಾಸಕರಾಗಿರುವ ಠಾಕೂರ್ ಅವರನ್ನು ಪ್ರಮುಖ ಹುದ್ದೆಗೆ ಆಯ್ಕೆ ಮಾಡಲಾಯಿತು. ಡಿ. 27ರಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷಿ
ಯಾಗಿದ್ದರು. ಶನಿವಾರ ರಾತ್ರಿಯ ವರೆಗೆ ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್ ಅವರೇ ಪ್ರಬಲ ಸ್ಥಾನಾಕಾಂಕ್ಷಿ ಯಾಗಿದ್ದರು. ಕೊನೆಯ ಹಂತದವರೆಗೆ ನಡೆದ ಮಾತುಕತೆಯಲ್ಲಿ ಧುಮಾಲ್ ಅವ ರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದರು.
ಹಿಮಾಚಲ ಪ್ರದೇಶದ ಮಂಡಿ ಪ್ರದೇಶದಿಂದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ಮೊದಲ ನಾಯಕ ಠಾಕೂರ್ ಆಗಿದ್ದಾರೆ. ಈ ಪ್ರದೇಶದಿಂದಲೇ ಬಿಜೆಪಿ ಹಾಲಿ ಸಾಲಿನಲ್ಲಿ ಹತ್ತು ಸ್ಥಾನಗಳ ಪೈಕಿ ಒಂಬತ್ತನ್ನು ಗೆದ್ದಿತ್ತು. ಇದುವರೆಗಿನ ಇತಿಹಾಸ ನೋಡಿದರೆ ಶಿಮ್ಲಾ, ಕಾಂಗ್ರಾ ಮತ್ತು ಸಿರ್ಮೋರ್ ಪ್ರದೇಶಗಳ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗುತ್ತಿದ್ದರು.
ಇಬ್ಬರು ವೀಕ್ಷಕರು: ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್ ಪರವಾಗಿಯೇ ಹೆಚ್ಚಿನ ಶಾಸಕರು ಬೆಂಬಲ ವ್ಯಕ್ತಪಡಿಸುತ್ತಿದ್ದುದರಿಂದ ಬಿಜೆಪಿ ವರಿಷ್ಠ ಮಂಡಳಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿತ್ತು. ಅವರ ಸಮ್ಮುಖದಲ್ಲಿಯೇ ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೆಸರು ಸೂಚಿಸಿದ್ದಕ್ಕೆ ಜಟಾಪಟಿಯೇ ನಡೆದಿತ್ತು.
ಕಾಂಗ್ರೆಸ್ ಮುಕ್ತ ಹಿಮಾಚಲ: ಹಿಮಾಚಲ ಪ್ರದೇಶ ಬಿಜೆಪಿ ಶಾಸಕ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಜೈರಾಮ್ ಠಾಕೂರ್ ಅವರು, “ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಮುಕ್ತ ಗೊಳಿಸಬೇಕು ಎಂಬ ಕನಸು ನನಸಾಗಿದೆ. ಬಿಜೆಪಿ ಶಾಸಕ ಪಕ್ಷದ ನಾಯಕನಾಗಿ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಮತ್ತು ಶಾಸಕರಿಗೆ ಕೃತಜ್ಞತೆಗಳು. ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್ ನನ್ನ ಹೆಸರನ್ನು ಪ್ರಸ್ತಾವ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.
ಯಾರಿವರು ಹೊಸ ಸಿಎಂ?
ರಜಪೂತ್ ಕುಟುಂಬದಲ್ಲಿ ಹುಟ್ಟಿದ ಜೈರಾಮ್ ಠಾಕೂರ್ ಆರಂಭದಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನಲ್ಲಿ ಸಕ್ರಿಯರಾಗಿದ್ದವರು. ಪಂಜಾಬ್ ವಿವಿಯಿಂದ ಎಂ.ಎ. ಪದವಿ ಪಡೆದ ಬಳಿಕ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1993ರಲ್ಲಿ ಮಂಡಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಿದರೂ ಸೋತರು. ಆದರೂ ಪಟ್ಟುಬಿಡದ ಅವರು 1998ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆ ಯಾದರು. 2007-2012ರ ಅವಧಿಯಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾಗಿ ದ್ದರು. 2007-09ರ ವರೆಗೆ ಹಿಮಾಚಲ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದರು. ಅವರ ಪತ್ನಿ ಡಾ| ಸಾಧನಾ ಕರ್ನಾಟಕದ ಶಿವಮೊಗ್ಗ ಮೂಲದವರು. ಎಬಿವಿಪಿ ಕಾರ್ಯಕರ್ತರಾಗಿರುವ ಡಾ| ಸಾಧನಾ ಅವರ ಕುಟುಂಬ ಬಹು ಹಿಂದೆಯೇ ಶಿವಮೊಗ್ಗದಿಂದ ಜೈಪುರಕ್ಕೆ ವಲಸೆ ಹೋಗಿತ್ತು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. 2003ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.