ಚೆನ್ನೈ : ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಬಯೋಪಿಕ್ ತಲೈವಿ ಚಿತ್ರಕ್ಕೆ ಸಿನಿ ಪ್ರೇಮಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರದ ಬಾಕ್ಸಾಫೀಸ್ ನಲ್ಲಿ ನಿರಾಸೆ ಮೂಡಿಸಿದೆ.
ಸಾಕಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ‘ತಲೈವಿ’ ಸಿನಿಮಾ ಮೊದಲ ದಿನವೇ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಡಲ್ ಹೊಡೆದಿದೆ.
ಗಣೇಶ ಚತುರ್ಥಿಯ ನಿಮಿತ್ತ ಶುಕ್ರವಾರದಂದು ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಎ.ಎಲ್ ವಿಜಯ್ ನಿರ್ದೇಶನದ ಈ ಸಿನಿಮಾವು ಮೊದಲ ದಿನ ಕೇವಲ 1.25 ಕೋಟಿ ರೂಪಾಯಿ ಗಳಿಸಿದೆ.
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಈ ಸಿನಿಮಾ ಇಡೀ ದೇಶದಲ್ಲಿ ಕೇವಲ 1.25 ಕೋಟಿ ರೂಪಾಯಿ ಗಳಿಸಲು ಮಾತ್ರ ಶಕ್ತವಾಗಿದೆ. ಹಿಂದಿ ಭಾಷೆಗೆ ಹೋಲಿಸಿದ್ರೆ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಸಿನಿಮಾ ಕೊಂಚ ಹೆಚ್ಚಿನ ಗಳಿಕೆ ಸಂಪಾದಿಸಿದೆ.
ಹಿಂದಿ ಭಾಷೆಯಲ್ಲಿ ತಲೈವಿ ಮೊದಲ ದಿನ ಕೇವಲ 20-25 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಇದರಲ್ಲಿ ಉತ್ತರ ಪ್ರದೇಶ, ದೆಹಲಿ ಹಾಗೂ ಗುಜರಾತ್ನಲ್ಲಿ ಸಿನಿಮಾಗೆ ಕೊಂಚ ರೆಸ್ಪಾನ್ಸ್ ಸಿಕ್ಕಿದೆ. ತಮಿಳುನಾಡಿನಲ್ಲಿ ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ್ದು 80 ಲಕ್ಷ ರೂಪಾಯಿ ಗಳಿಸಿದೆ.
ತಲೈವಿ ಸೇರಿದಂತೆ ಇತ್ತೀಚಿಗೆ ತೆರೆ ಕಂಡ ಶಾಂಗ್-ಚಿ, ಟೆನ್ ರಿಂಗ್ಸ್, ಫಾಸ್ಟ್ & ಫ್ಯೂರಿಯಸ್, ಚೆಹ್ರೆ ಹಾಗೂ ಬೆಲ್ ಬಾಟಂ ಮಹಾರಾಷ್ಟ್ರದಲ್ಲಿ ತೆರೆ ಕಂಡಿಲ್ಲ. ಕೊರೊನಾ 2ನೆ ಅಲೆಯ ಬಳಿಕ ಮಹಾರಾಷ್ಟ್ರದಲ್ಲಿ ಯಾವುದೇ ಸಿನಿಮಂದಿರಗಳು ಬಾಗಿಲು ತೆರೆದಿಲ್ಲ.