ಒಂದು ಸಲ ಮಿಡತೆ ಇರುವೆಯನ್ನು ನೋಡಿತು. “”ಏನೇ ಹುಡುಗಿ, ಯಾವಾಗ ನೋಡಿದರೂ ದುಡಿಯುತ್ತಲೇ ಇರುವೆಯಲ್ಲ? ಇದರ ಹೊರತು ಹೊರಗಿರುವ ಸುಂದರ ಪ್ರಪಂಚದ ಬಗೆಗೆ ಒಂದಿಷ್ಟಾದರೂ ಯೋಚಿಸಿದ್ದೀಯಾ? ಊರಿಡೀ ಹುಡುಕುವುದು, ಒಂದು ಧಾನ್ಯವನ್ನು ಹೊತ್ತುಕೊಂಡು ಬಂದು ಬಿಲದಲ್ಲಿ ಜೋಪಾನ ಮಾಡುವುದು. ಇದು ಬಿಟ್ಟರೆ ನೀನು ಹೊಟ್ಟೆ ತುಂಬ ಊಟ ಮಾಡುವುದು ಯಾವಾಗ, ಸಂಸಾರದೊಂದಿಗೆ ಖುಷಿಯಾಗಿ ಕಳೆಯುವುದು ಯಾವಾಗ?” ಎಂದು ತಮಾಷೆ ಮಾಡಿತು. ಇರುವೆ ನಿಂತು ಮಾತನಾಡಲಿಲ್ಲ. ಹೋಗುತ್ತಲೇ, “”ಹೌದು, ನನ್ನ ಹಿರಿಯರು ಹೇಳಿದ್ದಾರೆ ಇರುವೆಯಷ್ಟು ತಿಂದರೆ ಆನೆಯಷ್ಟು ಬುದ್ಧಿ, ಆನೆಯಷ್ಟು ತಿಂದರೆ ಆನೆಯಷ್ಟು ಲದ್ದಿ ಅಂತ. ಹೀಗಾಗಿ ನಾನು ಭವಿಷ್ಯಕ್ಕಾಗಿ ಸಂಗ್ರಹಿಸುತ್ತೇನೆ. ಕಡಮೆ ಊಟ ಮಾಡುತ್ತೇನೆ. ಇರಲಿ, ನೀನೀಗ ಬಂದ ಕೆಲಸವಾದರೂ ಏನು, ಬೇಗ ಹೇಳು. ನನಗೆ ಬೆಟ್ಟದಷ್ಟು ಕೆಲಸ ಮಾಡಲಿಕ್ಕಿದೆ” ಎಂದು ಹೇಳಿತು.
” “ನೋಡು ನಾನು ಮದುವೆಯಾಗಲು ಯೋಗ್ಯ ಹುಡುಗಿಯನ್ನು ಹುಡುಕಿಕೊಂಡು ಹೊರಟಿದ್ದೇನೆ. ನೀನು ಮನೆಗೆಲಸ ಚೆನ್ನಾಗಿ ಮಾಡಬಲ್ಲೆ ಅನಿಸುತ್ತದೆ. ನೋಡಲು ಸಣ್ಣವಳಾಗಿ ಸುಂದರವಾಗಿ ಕಾಣಿಸುತ್ತಿರುವ ನೀನೇ ನನ್ನನ್ನು ಯಾಕೆ ಮದುವೆಯಾಗಬಾರದು?” ಎಂದು ಕೇಳಿತು ಮಿಡತೆ. “”ಮದುವೆಯೆ?” ಇರುವೆ ಜೋರಾಗಿ ನಕ್ಕಿತು. “”ನಿನ್ನನ್ನು ನಾನು ಮದುವೆಯಾಗಬೇಕೆ? ನೀನೊಬ್ಬ ಸೋಮಾರಿ. ಒಂದಿಷ್ಟೂ ಶ್ರಮ ಪಡುವವನಲ್ಲ. ನಿನ್ನ ಕೈ ಹಿಡಿದು ಉಪವಾಸ ಬೀಳಲು ನನಗಿಷ್ಟವಿಲ್ಲ. ನೀನು ಸಿಕ್ಕಿದರೆ ತಿನ್ನುತ್ತೀ. ಬೆಳೆಗಳನ್ನು ಹಾಳು ಮಾಡುತ್ತೀ. ನಾಳೆಗಾಗಿ ಉಳಿಸಬೇಕೆಂಬ ಯೋಚನೆಯೂ ಇಲ್ಲದೆ ಬದುಕುವ ಅವಿವೇಕಿ. ಎಂದಿಗೂ ನಾನು ನಿನ್ನ ಕೈಹಿಡಿಯಲು ಸಾಧ್ಯವಿಲ್ಲ” ಎಂದು ಇರುವೆ ನಿಷ್ಠುರವಾಗಿ ಉತ್ತರಿಸಿತು.
ಮಿಡತೆಗೆ ಬಂದ ಕೋಪ ಸಣ್ಣದಲ್ಲ. ಒಂದು ಅಲ್ಪ$ ಇರುವೆ ತನ್ನ ಸಂಬಂಧವನ್ನು ನಿರಾಕರಿಸಿರುವುದು ಅದಕ್ಕೆ ಸಹಿಸಲಾಗದ ಅವಮಾನವೆಂದೇ ಅನಿಸಿತು. ಅದು ರೋಷದಿಂದ, “”ವಿಷಯ ಇಲ್ಲಿಗೇ ಇತ್ಯರ್ಥವಾಗುತ್ತದೆ ಎಂದು ಭಾವಿಸಬೇಡ. ನಾನು ಎಷ್ಟು ದೊಡ್ಡವನೆಂಬುದನ್ನು ಒಂದು ಸಲ ನೋಡು. ನೀನು ಗಾತ್ರದಲ್ಲಿ ಏನೂ ಅಲ್ಲ. ನಾನು ಇದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಿ ನಿನ್ನ ಬಳಿಗೆ ಬರುತ್ತೇನೆ. ನನ್ನ ಶೌರ್ಯ, ಪರಾಕ್ರಮಗಳನ್ನು ನೋಡಿ ನೀನಾಗಿಯೇ ನನ್ನ ಕೈಹಿಡಿಯಲು ಹಾತೊರೆಯುವಂತೆ ಮಾಡುತ್ತೇನೆ. ದೊಡ್ಡ ಬೆಟ್ಟಕ್ಕೆ ಹೋಗುತ್ತೇನೆ. ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡು ಒಳ್ಳೆಯ ವರವನ್ನೇ ಕೇಳುತ್ತೇನೆ. ಹೇಳು, ನಿನಗೂ ದೇವರ ಬಳಿ ಏನಾದರೂ ವರ ಕೇಳಬೇಕೆಂಬ ಇಚ್ಛೆಯಿದ್ದರೆ ಅದನ್ನೂ ಕೇಳಿಕೊಂಡು ಬಂದುಬಿಡುತ್ತೇನೆ” ಎಂದು ದೊಡ್ಡ ಸವಾಲು ಹಾಕಿಬಿಟ್ಟಿತು.
ಇರುವೆ ನಸುನಕ್ಕಿತು. “”ಹೌದೆ? ದೇವರನ್ನು ಒಲಿಸಿಕೊಂಡು ನೀನು ಇನ್ನೂ ದೊಡ್ಡವನಾಗುವುದಾದರೆ ನನಗೇನೂ ಮತ್ಸರವಿಲ್ಲ. ಹಾಗೆಯೇ ನನ್ನ ಪರವಾಗಿ ವರ ಕೇಳುವೆಯಾದರೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬರಲಿ. ರೈತರ ಧಾನ್ಯದ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ. ತೆನೆಗಳಿಂದ ಒಂದಿಷ್ಟು ಕಾಳುಗಳು ನೆಲಕ್ಕೆ ಉದುರಲಿ ಎಂಬ ವರವನ್ನು ಯಾಚಿಸಿಕೋ” ಎಂದಿತು ಇರುವೆ. ಮಿಡತೆಗೆ ಅಚ್ಚರಿಯಾಯಿತು. “”ಇದರಿಂದ ರೈತನಿಗೆ ಲಾಭವಾಗುತ್ತದೆ ನಿಜ. ಅವನ ಧಾನ್ಯದ ಬೆಳೆ ಸಮೃದ್ಧವಾದರೆ ನಿನಗೆ ಏನು ಸಿಗುತ್ತದೆ?” ಎಂದು ಕೇಳಿತು. “”ರೈತ ಧಾನ್ಯ ಬೆಳೆಯದಿದ್ದರೆ ನನಗಾದರೂ ಏನು ಸಿಗುತ್ತದೆ? ಅವನಿಗೆ ತೆನೆ ತುಂಬ ಧಾನ್ಯ ಸಿಕ್ಕಿದರೆ ಅದರಿಂದ ಹೊಲದಲ್ಲಿ ಉದುರುವ ಕಾಳುಗಳನ್ನು ಆಯ್ದು ತಂದು ನಾನು ಜೀವನ ನಡೆಸುತ್ತೇನೆ” ಎಂದಿತು ಇರುವೆ.
ಮಿಡತೆ ಹೇಳಿದಂತೆಯೇ ಮಾಡಿತು. ಪ್ರಯಾಸದಿಂದ ಬೆಟ್ಟದ ತುದಿಗೆ ಹೋಯಿತು. ಅಲ್ಲಿ ನಿಂತುಕೊಂಡು ದೇವರ ಧ್ಯಾನ ಮಾಡಿತು. ಕಠಿನ ತಪಸ್ಸಿಗೆ ಮೆಚ್ಚಿ ದೇವರು ಅದರ ಮುಂದೆ ಕಾಣಿಸಿಕೊಂಡ. “”ಮುದ್ದು ಮಿಡತೆಯೇ, ಪುಟ್ಟವನಾದರೂ ನಿನಗೆ ಅದೆಂಥ ದೈವಭಕ್ತಿ! ಮೆಚ್ಚಿ ಬಂದಿದ್ದೇನೆ. ನೀನು ಏನು ಬೇಕಿದ್ದರೂ ಕೇಳಿಕೋ, ಕೊಡುತ್ತೇನೆ” ಎಂದು ಪ್ರೀತಿಯಿಂದ ಅದನ್ನು ಮೈದಡವಿದ. ಮಿಡತೆ ದೇವರಿಗೆ ಕೈಜೋಡಿಸಿತು. “”ದೇವರೇ, ಕಂಡವರನ್ನು ಆಕರ್ಷಿಸುವಂತಹ ಮೈಬಣ್ಣ ನನಗೆ ಬೇಕು. ಹಾಗೆಯೇ ಬೇರೆ ಬೇರೆ ಊರುಗಳಿಗೆ ವಿಹಾರಕ್ಕೆ ಹೋಗಲು ಅನುಕೂಲವಾದ ರೆಕ್ಕೆಗಳು ಬೇಕು” ಎಂದು ಕೇಳಿಕೊಂಡಿತು. “”ಹಾಗೆಯೇ ಆಗಲಿ. ನಿನ್ನ ಕೋರಿಕೆಗಳು ಈಗಲೇ ನೆರವೇರುತ್ತವೆ. ಇಷ್ಟೇ ಅಲ್ಲ, ಇನ್ನೂ ಏನಾದರೂ ಬೇಕಿದ್ದರೆ ಕೋರಿಕೋ” ಎಂದು ದೇವರು ಕೇಳಿದ. “”ನನಗೆ ಇಷ್ಟೇ ಸಾಕು ದೇವರೇ. ಆದರೆ ನಾನು ಕೈಹಿಡಿಯಲಿರುವ ಇರುವೆಯದೂ ಒಂದು ಬೇಡಿಕೆಯಿದೆ. ಅದನ್ನೂ ಈಡೇರಿಸಿ ಕೊಡುವೆಯಾ?” ಎಂದು ಮಿಡತೆ ಇರುವೆಯ ಬೇಡಿಕೆಯನ್ನೂ ದೇವರ ಮುಂದಿಟ್ಟಿತು. ದೇವರು, “”ಇರುವೆಯ ಬಯಕೆಯೂ ಕೈಗೂಡಲಿ” ಎಂದು ಹೇಳಿ ಮಾಯವಾದ.
ದೇವರು ನೀಡಿದ ವರದಿಂದ ಮಿಡತೆಯ ಮೈಬಣ್ಣ ಹಚ್ಚ ಹಸಿರಾಗಿ ಕಂಡವರು ಸಂತೋಷದಿಂದ ಮುಟ್ಟಿ ನೋಡುವಷ್ಟು ಸುಂದರವಾಯಿತು. ತಲೆಯ ಮೇಲೊಂದು ಕೆಂಪಗಿನ ಕಿರೀಟವೂ ಬಂದಿತು. ಎರಡು ಪಕ್ಕಗಳಿಂದ ತೆಳ್ಳಗಿನ ಎರಡು ರೆಕ್ಕೆಗಳೂ ಮೂಡಿದವು. ಅದು ಹಾರಿಕೊಂಡು ಇರುವೆಯ ಬಳಿಗೆ ಬಂದು ಇಳಿಯಿತು. ಕೆಲಸದಲ್ಲಿ ನಿರತವಾಗಿದ್ದ ಇರುವೆ ತಲೆಯೆತ್ತಿ ಅದನ್ನು ನೋಡದಿದ್ದರೂ ಇರುವೆಯನ್ನು ಕರೆಯಿತು. “”ನನ್ನ ಸಾಮರ್ಥ್ಯ ಎಷ್ಟೆಂಬುದು ಈಗ ನೋಡು. ಮನ ಸೆಳೆಯುವ ಹಸಿರಿನ ಚೆಲುವು ನನ್ನದಾಗಿದೆ. ಅದರೊಂದಿಗೆ ಬೇಕಾದ ಊರಿಗೆ ಹೋಗಿ ಅಲ್ಲಿರುವ ಸೊಬಗನ್ನು ಕಂಡುಬರಲು ನನ್ನನ್ನು ಅಲ್ಲಿಗೆ ಕರೆದೊಯ್ಯುವ ರೆಕ್ಕೆಗಳನ್ನೂ ದೇವರ ವರದ ಮೂಲಕ ಗಳಿಸಿದ್ದೇನೆ. ನನ್ನ ಯೋಗ್ಯತೆಯ ಬಗೆಗೆ ಇನ್ನು ಮಾತನಾಡಬೇಡ. ನನ್ನನ್ನು ಮದುವೆಯಾಗಲು ಈಗಲೇ ಸಿದ್ಧಳಾಗು” ಎಂದು ಹೇಳಿತು.
“”ಕಣ್ಣಿಗೆ ಸೊಬಗು ಕಾಣಿಸುವ ಸೌಂದರ್ಯದಿಂದ ಹೊಟ್ಟೆ ತುಂಬುವುದಿಲ್ಲ. ಹಾರುವ ರೆಕ್ಕೆಗಳಿಂದ ಜೀವನ ನಡೆಯುವುದಿಲ್ಲ. ಮುಂದೆ ತೀವ್ರವಾದ ಬರಗಾಲ ಬರಲಿದೆ. ಆಗ ತಿನ್ನಲು ಈಗಲೇ ಕಾಳುಗಳನ್ನು ಸಂಗ್ರಹಿಸಿ ಜೋಪಾನ ಮಾಡದಿದ್ದರೆ ಉಪವಾಸ ಸಾಯಬೇಕಾಗುತ್ತದೆ. ಬಾ ನನ್ನೊಂದಿಗೆ. ರೈತರ ಹೊಲದಲ್ಲಿ ಸಾಕಷ್ಟು ಜೋಳದ ಕಾಳುಗಳು ಉದುರಿವೆ. ಎಲ್ಲವನ್ನೂ ಇಬ್ಬರೂ ಜೊತೆಗೂಡಿ ಆರಿಸಿ ತಂದು ಸಂಗ್ರಹಿಸಿಡೋಣ. ಆಮೇಲೆ ಮದುವೆಯಾಗಿ ಸುಖವಾಗಿರೋಣ” ಇರುವೆ ತನ್ನ ಕೆಲಸ ನಿಲ್ಲಿಸದೆ ಕರೆಯಿತು.
ಮಿಡತೆ ಬರಲಿಲ್ಲ. “”ದೇವರನ್ನು ಕಂಡು ವರ ಪಡೆದ ನಾನು ಕಾಳು ಹೆಕ್ಕಲು ಬರುತ್ತೇನಾ? ಖಂಡಿತ ಇಲ್ಲ” ಎಂದು ತಿರಸ್ಕಾರದಿಂದ ಹೇಳಿ ಹೊರಟುಹೋಯಿತು. ಕೆಲವು ತಿಂಗಳುಗಳು ಕಳೆದವು. ಊರಿಗೆ ಭೀಕರ ûಾಮ ಬಂದು ಬೆಳೆಗಳು ಸುಟ್ಟುಹೋದವು. ಎಲ್ಲಿಯೂ ಮಿಡತೆಗೆ ತಿನ್ನಲು ಆಹಾರ ಸಿಗಲಿಲ್ಲ. ಹಾರಲಾಗದೆ ನಿತ್ರಾಣದಿಂದ ಬಸವಳಿದು ಕುಸಿದುಬಿದ್ದಿತು. ಆಗ ಅಲ್ಲಿಗೆ ಬಂದ ಇರುವೆ, “”ನಾವಿಬ್ಬರೂ ಈಗ ಮದುವೆಯಾಗೋಣವೆ?” ಎಂದು ಕೇಳಿತು. ಮಿಡತೆ ಅಸಹಾಯವಾಗಿ, “”ಆಹಾರವಿಲ್ಲದೆ ಎದ್ದು ನಿಲ್ಲಲೂ ಚೈತನ್ಯವಿಲ್ಲ. ನನಗೀಗ ಜೀವಿಸಲು ಒಂದು ಹಿಡಿ ಆಹಾರ ಮುಖ್ಯವೇ ಹೊರತು ರೆಕ್ಕೆಗಳೂ ಅಲ್ಲ, ಸೌಂದರ್ಯವೂ ಅಲ್ಲ. ಭವಿಷ್ಯಕ್ಕಾಗಿ ದುಡಿದು ಸಂಗ್ರಹಿಸಬೇಕು ಎಂಬ ನಿನ್ನ ಮಾತನ್ನು ನಿರ್ಲಕ್ಷಿಸಿದ ನನಗೆ ಇಂದು ಶ್ರಮಪಟ್ಟು ದುಡಿಯುವುದು ಎಷ್ಟು ಮುಖ್ಯ ಎಂಬುದು ಅರಿವಾಯಿತು. ಈ ಪಾಠವನ್ನು ಸಣ್ಣವಳಾದರೂ ನೀನು ತಿಳಿದುಕೊಂಡಂತೆ ದೊಡ್ಡವನಾದ ನಾನು ಅರ್ಥ ಮಾಡಿಕೊಳ್ಳಲಿಲ್ಲ” ಎಂದು ಹೇಳಿ ಪ್ರಾಣಬಿಟ್ಟಿತು.
ಪ. ರಾಮಕೃಷ್ಣ ಶಾಸ್ತ್ರಿ