ಬ್ಯಾಂಕಾಕ್: ಭಾರತದ ಕಿರಣ್ ಜಾರ್ಜ್ “ಥಾಯ್ಲೆಂಡ್ ಓಪನ್ ಸೂಪರ್-500 ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಜಬರ್ದಸ್ತ್ ಗೆಲುವೊಂದನ್ನು ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಬುಧವಾರದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ವಿಶ್ವದ 9ನೇ ರ್‍ಯಾಂಕಿಂಗ್ ಆಟಗಾರ, ಚೀನದ ನಂ.1 ಶಟ್ಲರ್ ಶಿ ಯುಕಿಗೆ 21-18, 22-20ರಿಂದ ಆಘಾತವಿಕ್ಕಿದರು.
ಪ್ರಕಾಶ್ ಪಡುಕೋಣೆ ಅಕಾಡೆಮಿಯ ಸದಸ್ಯರೂ, ಒಡಿಶಾ ಓಪನ್ ಚಾಂಪಿಯನ್ ಕೂಡ ಆಗಿರುವ ಕಿರಣ್ ಜಾರ್ಜ್ ಅವರ ಬ್ಯಾಡ್ಮಿಂಟನ್ ಬಾಳ್ವೆಯ ದೊಡ್ಡ ಗೆಲುವು ಇದಾಗಿದೆ. ಕೂಟದಲ್ಲಿ 3ನೇ ಶ್ರೇಯಾಂಕ ಹೊಂದಿರುವ ಶಿ ಯುಕಿ 2018ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಟಗಾರನಾಗಿದ್ದಾರೆ. ಕಿರಣ್ ಅವರಿನ್ನು ಚೀನದ ಮತ್ತೋರ್ವ ಆಟಗಾರ ವೆಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಬೇಕಿದೆ.
ಅಶ್ಮಿತಾ, ಸೈನಾ ಗೆಲುವು
ವನಿತಾ ಸಿಂಗಲ್ಸ್ ಮೊದಲ ಸುತ್ತಿನ ಆರಂಭಿಕ ಪಂದ್ಯಗಳಲ್ಲಿ ಅಶ್ಮಿತಾ ಚಾಲಿಹ, ಸೈನಾ ನೆಹ್ವಾಲ್ ಗೆಲುವು ಸಾಧಿಸಿದ್ದಾರೆ. ಅಶ್ಮಿತಾಗೆ ಶರಣಾದವರು ಭಾರತದವರೇ ಆದ ಮಾಳವಿಕಾ ಬನ್ಸೋಡ್. ಗೆಲುವಿನ ಅಂತರ 21-17, 21-14. ಸೈನಾ ನೆಹ್ವಾಲ್ ಕೆನಡಾದ ವೆನ್ ಯು ಜಾಂಗ್ ಅವರನ್ನು 21-13, 21-7 ಅಂತರದಿಂದ ಕೆಡವಿದರು.
ಅಶ್ಮಿತಾ ಚಾಲಿಹ ಅವರ ಮುಂದಿನ ಸವಾಲು ಕಠಿನವಾಗಿದ್ದು, ಇಲ್ಲಿ ಅವರು ರಿಯೋ ಒಲಿಂಪಿಕ್ಸ್ ಬಂಗಾರ ಪದಕ ವಿಜೇತೆ, ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರನ್ನು ಎದುರಿಸಬೇಕಿದೆ. ಸೈನಾ ನೆಹ್ವಾಲ್ ಚೀನದ ಹಿ ಬಿಂಗ್ ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಕಿರಣ್ ಜಾರ್ಜ್ ಹೊರತುಪಡಿಸಿ ಪುರುಷರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಸೋಲಿನ ಸುದ್ದಿಗಳೇ ಎದುರಾಗಿವೆ. ಕೆ. ಶ್ರೀಕಾಂತ್, ಬಿ. ಸಾಯಿ ಪ್ರಣೀತ್, ಪ್ರಿಯಾಂಶು ರಾಜಾವತ್, ಸಮೀರ್ ವರ್ಮ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು.
Related Articles
ಕೆ. ಶ್ರೀಕಾಂತ್ ಅವರನ್ನು ಚೀನದ ವೆಂಗ್ ಹಾಂಗ್ ಯಾಂಗ್ 21-8, 16-21, 21-14ರಿಂದ ಮಣಿಸಿದರು. ವೆಂಗ್ ಕಳೆದ ವಾರವಷ್ಟೇ ಮಲೇಷ್ಯಾ ಮಾಸ್ಟರ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಬಿ. ಸಾಯಿ ಪ್ರಣೀತ್ ಅವರನ್ನು ಫ್ರಾನ್ಸ್‌ನ ಕ್ರಿಸ್ಟೊ ಪೊಪೋವ್ 21-14, 21-16 ನೇರ ಗೇಮ್‌ಗಳಲ್ಲಿ ಕೆಡವಿದರು.
ಇತ್ತೀಚೆಗಷ್ಟೇ “ಸ್ಲೊವೇನಿಯನ್ ಓಪನ್’ ಪ್ರಶಸ್ತಿ ಜಯಿ ಸಿದ ಸಮೀರ್ ವರ್ಮ ಅವರನ್ನು ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ಸೆನ್ 21-15, 21-15ರಿಂದ ಸೋಲಿಸಿದರು. “ಓಲೀìನ್ಸ್ ಮಾಸ್ಟರ್’ ಚಾಂಪಿಯನ್ ಪ್ರಿಯಾಂಶು ರಾಜಾವತ್ ಅವರಿಗೆ ಮಲೇಷ್ಯಾದ ಎನ್‌ಜಿ ಟೆ ಯಾಂಗ್ 21-19, 21-10 ಅಂತರದಿಂದ ಆಘಾತವಿಕ್ಕಿದರು.