ಬಳ್ಳಾರಿ: ರಾಜ್ಯದ ಬೇರೆಲ್ಲೂ ಕಾಣಸಿಗದ ವಿಶಿಷ್ಟ ಆಚರಣೆಯಾದ ಶ್ರೀಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ ಪ್ರಸಿದ್ಧ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು. ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ರಾಜ ದೇಶೀಕೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ತೈಲಾಭಿಷೇಕಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಪ್ರತಿವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶಿಖರ ತೈಲಾಭಿಷೇಕ ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ. ಜರಿಮಲೆಯ ಪಾಳೆಗಾರರ ವಂಶಸ್ಥರು ಪ್ರತಿವರ್ಷವೂ ಶಿಖರ ತೈಲಾಭಿಷೇಕಕ್ಕೆ ತೈಲ ಕಳಿಸುವುದು ಸಂಪ್ರದಾಯ. ಅದೇ ರೀತಿ ಈ ಬಾರಿಯೂ ಸಹ ಜರಿಮಲೆ ವಂಶಸ್ಥರು ಕಳುಹಿಸಿದ್ದ ತೈಲ ತುಂಬಿದ ಕುಂಭವನ್ನು ಹೊತ್ತು ತಂದಿದ್ದ ಭಕ್ತರನ್ನು ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಂಡು ದೇವಸ್ಥಾನದ ಪ್ರಾಂಗಣಕ್ಕೆ ಕರೆ ತರಲಾಯಿತು. ಕುಂಭವನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆಯಲಾಯಿತು.
ನಂತರ ಕುಂಭವನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಸಿ ತೈಲವನ್ನು ಗೋಪುರಕ್ಕೆ ಸುರಿಯಲಾಯಿತು. ಈ ಸಂದರ್ಭದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ನಂತರ ಭಕ್ತರು ತಂದ ತೈಲವನ್ನು ಶಿಖರಕ್ಕೆ ಎರೆಯಲಾಯಿತು. ತಮ್ಮ ಬೇಡಿಕೆಗಳು ಈಡೇರಿದಲ್ಲಿ ಸ್ವಾಮಿಯ ಶಿಖರಕ್ಕೆ ತೈಲ ಎರೆಯುವುದಾಗಿ ಭಕ್ತರು ಹರಕೆ ಹೊತ್ತಿರುತ್ತಾರೆ. ಬೇಡಿಕೆ ಈಡೇರಿದ ಸಾವಿರಾರು ಭಕ್ತ ಸಮೂಹ ಕಾಣಿಕೆಯಾಗಿ ಅರ್ಪಿಸಿದ ತೈಲದಿಂದ ಗೋಪುರಕ್ಕೆ ಮಜ್ಜನ ಮಾಡಲಾಯಿತು.
ನೆರೆದ ಭಕ್ತ ಸಮೂಹ ಬಾಳೆಹಣ್ಣನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ನಾಡಿನ ಅನೇಕ ಮಠಾಧೀಶರು, ಶಿವಾಚಾರ್ಯರು ಉಪಸ್ಥಿತರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಎಣ್ಣೆಯ ಜಿಡ್ಡಿನಂಶದಿಂದ ದೇವಸ್ಥಾನದ ಶಿಲಾಗೋಪುರ ಶಿಥಿಲಗೊಳ್ಳದೆ ಸುರಕ್ಷಿತವಾಗಿರುತ್ತದೆ ಎಂಬ ವೈಜ್ಞಾನಿಕ ಕಾರಣವೂ ಈ ಆಚರಣೆಯ ಹಿಂದಿದೆ. ಬೆಳಗ್ಗೆಯಿಂದಲೇ ರಾಜ್ಯ ಹೊರರಾಜ್ಯಗಳ ಭಕ್ತರು ದೇವಾಲಯಕ್ಕೆ ಆಗಮಿಸಿ ಮರುಳಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರಲ್ಲದೆ ಜಗದ್ಗುರು ಶ್ರೀಸಿದ್ದಲಿಂಗ ರಾಜ ದೇಶೀಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.