Advertisement

ತರಹೇವಾರಿ ಸಜ್ಜಾ, ಮನೆಗೆ ರಕ್ಷಣೆ, ಜತೆಗೆ ಆಕರ್ಷಣೆ

02:50 PM Aug 18, 2018 | Team Udayavani |

ಮಳೆಗಾಲ ಶುರುವಾದಗಲೇ ಕಿಟಕಿ ಬಾಗಿಲಗಳ ರಕ್ಷಣೆಗಾಗಿ ಇರುವ ಸಜ್ಜಾಗಳು ನಮಗೆ ನೆನಪಾಗುತ್ತವೆ. ಒಂದು ವೇಳೆ ಮೊದಲೇ ಅಳವಡಿಸಿಕೊಂಡಿದ್ದರೆ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ? ಅಂತ ನೋಡುವುದಕ್ಕೆ ಹೋಗುವುದೂ ಆವಾಗಲೇ. ಮಳೆ ಜೋರಾಗಿ ಬೀಳುತ್ತಿದ್ದರೂ ಒಂದು ಹನಿ ನೀರೂ ಮನೆಯೊಳಗೆ ಪ್ರವೇಶಿಸದಿದ್ದರೆ ನಮ್ಮ ಮನೆಯ ಸಜ್ಜಾಗಳನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿದೆ ಎಂದು ಅಂದುಕೊಳ್ಳಬಹುದು. ಮಳೆ ಬೀಳಲು ಶುರುಮಾಡಿದೊಡನೆ ಮನೆಯ ಕಿಟಕಿಬಾಗಿಲುಗಳನ್ನು ಮುಚ್ಚಿ ಭದ್ರ ಪಡಿಸುವ ಅಗತ್ಯ ಇದ್ದರೆ ಇವುಗಳ ಮೇಲಿರುವ ಸಜ್ಜಾಗಳ ವಿನ್ಯಾಸವನ್ನು ಒಮ್ಮೆ ಪರಿಶೀಲಿಸಬೇಕಾಗುತ್ತದೆ.

Advertisement

ಸಾಮಾನ್ಯವಾಗಿ ಮಳೆ ನೇರವಾಗಿ ಕೆಳಗೆ ಬೀಳುತ್ತಿದ್ದರೆ, ಅದು ಕಿಟಕಿಯ ಮೂಲಕ ಒಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ, ಬಿರುಗಾಳಿ ಜತೆಗೆ ಬಿರುಸಿನಿಂದ ಬೀಳುವ ಮಳೆಗೆ ನಾವು ನೀಡುವ ಒಂದೆರಡು ಅಡಿ ಅಗಲದ ಸಜ್ಜಾಗಳು ಹೆಚ್ಚಿನ ರಕ್ಷಣೆ ನೀಡಲಾರವು. ಆದುದರಿಂದ, ನಾವು ನಮ್ಮ ಮನೆಯ ಸಜ್ಜಾಗಳನ್ನು ವಿನ್ಯಾಸ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು.

ಕಿಟಕಿಗಳ ಅಗಲ ಮತ್ತು ಎತ್ತರ ಹೆಚ್ಚಾದಷ್ಟೂ ಮಳೆ ಒಳನುಸುಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ವಿನ್ಯಾಸ ಇರುವ ಮನೆಗೆ ಮಳೆ ಬೀಳುವ ದಿಕ್ಕು ಹಾಗೂ ಅವುಗಳ ಕೋನ ನೋಡಿಕೊಂಡು ಸಜ್ಜಾ ಹಾಗೂ ಕಿಟಕಿಗಳ ಅಕ್ಕ ಪಕ್ಕ ನೀಡುವ ಫೀನ್‌- ಹಲಗೆಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ. ಸಜ್ಜಾಗಳನ್ನು ಅಳವಡಿಸುವ ಮುಂಚೆ ಅನುಭವಿಗಳಿಂದ ಈ ಕುರಿತು ಮಾರ್ಗದರ್ಶನ ಪಡೆಯುವುದು ಉತ್ತಮ.

ವೈವಿಧ್ಯಮಯ ಸಜ್ಜಾಗಳು
ಮನೆಯನ್ನು ಅಲಂಕರಿಸಲು ಬಳಸಬಹುದಾದ ಬಹು ಉಪಯೋಗಿ ಸ್ಥಳ ಎಂದರೆ ಅದು ಕಿಟಕಿ ಹಾಗೂ ಬಾಗಿಲೇ ಆಗಿರುತ್ತದೆ. ಕಿಟಕಿ ಬಾಗಿಲುಗಳನ್ನು ಸುಂದರಗೊಳಿಸಲು ಅವಕ್ಕೆ ಅಳವಡಿಸಬಹುದಾದ ಸಜ್ಜಾಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿ, ಮನೆಯ ಅಂದವನ್ನೂ ಹೆಚ್ಚಿಸಬಹುದು. ಮಾಮೂಲಿ ಚಪ್ಪಟೆ ಸಜ್ಜಾಗಳಿಂದ ಹಿಡಿದು ಸ್ಲೋಪಿಂಗ್‌ – ಇಳಿಜಾರು, ಆರ್ಚ್‌- ಕಮಾನು, ಕಾರ್ಬೆಲ್‌ – ಮೆಟ್ಟಿಲು ಮೆಟ್ಟಿಲು ಮುಂತಾದ ವಿನ್ಯಾಸಗಳ ಮಾದರಿಯ ಪಟ್ಟಿ ದೊಡ್ಡದೇ ಇದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಗಾಜಿನ ಸಜ್ಜಾಗಳೂ ಜನಪ್ರಿಯವಾಗಿವೆ. ಟಫ‌ನ್ಡ್  – ಗಟ್ಟಿಗೊಳಿಸಿದ ಗಾಜು ಸುಲಭದಲ್ಲಿ ಒಡೆಯದ ಕಾರಣ ಎಲ್ಲೆಲ್ಲಿ ಬೆಳಕು ಕಡಿಮೆ ಆಗಬಾರದು. ಆದರೆ, ಮಳೆಯ ಭರಾಟೆ ತಗ್ಗಬೇಕು ಎಂದಿರುತ್ತದೋ ಅಲ್ಲೆಲ್ಲ ಗಾಜಿನ ಸಜ್ಜಾಗಳನ್ನು ಧಾರಾಳವಾಗಿ ಬಳಸಬಹುದು.

ಜನಪ್ರಿಯ ವಿನ್ಯಾಸಗಳು
ಕೆಲವೊಮ್ಮೆ ಗಾಳಿಗೆಂದು ದೊಡ್ಡದಾದ ಕಿಟಕಿಗಳನ್ನು ಇಟ್ಟ ಬಳಿಕ ಬೆಳಕು ಹೆಚ್ಚಾಯಿತು ಇಲ್ಲವೇ ಮಳೆಯಿಂದ ರಕ್ಷಣೆ ಪಡೆಯುವುದು ಅನಿವಾರ್ಯ ಎಂದಾದರೆ ಮರದ ಇಲ್ಲವೇ ಉಕ್ಕಿನ ಸಣ್ಣ ಪಟ್ಟಿಗಳನ್ನು ಅಲಂಕಾರಿಕ ಎನ್ನುವ ರೀತಿಯಲ್ಲಿ ಕೆಳಗೆ ಇಳಿಬಿಡಬಹುದು. ಈ ಹಿಂದೆ ದೊಡ್ಡ ಬಂಗಲೆಗಳ ಕಿಟಕಿಗಳ ಮುಂದಿನ ಸಜ್ಜಾಗಳಿಗೆ ಈ ಮಾದರಿಯ ವಿನ್ಯಾಸ ಮಾಡುವುದು ಜನಪ್ರಿಯವಾಗಿತ್ತು.ಇತ್ತೀಚಿನ ದಿನಗಳಲ್ಲಿ ಅದೇ ರೀತಿಯ ಮತ್ತೆ ಬಳಕೆಗೆ ಬಂದಿದೆ. ಅದೀಗ ತುಸುಮಟ್ಟಿಗೆ ಜನಪ್ರಿಯವೂ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next