ಮುಂಬಯಿ: ಶಿವಸೇನೆ ಪ್ರಮುಖ ದಿ| ಬಾಳಾಸಾಹೇಬ್ ಠಾಕ್ರೆ ಅವರ ಜೀವನದ ಬಗ್ಗೆ ನಿರ್ಮಾಣವಾಗಲಿರುವ ಚಲನಚಿತ್ರ ಠಾಕ್ರೆ ಇದರ ಟೀಸರ್ ಮತ್ತು ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ.
ಗುರುವಾರ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಚಿತ್ರದ ನಿರ್ಮಾಪಕ ಸಂಸದ ಸಂಜಯ್ ರಾವುತ್ ಅವರ ಉಪಸ್ಥಿತಿಯಲ್ಲಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು.
ಈ ಚಿತ್ರವು 2019ರ ಜ.23ರಂದು ದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲಿದೆ. ಶಿವಸೇನೆ ನಾಯಕ ಸಂಜಯ್ ರಾವುತ್ ಅವರು ಬರೆದ ಈ ಜೀವನಚರಿತ್ರೆಗೆ ಅಭಿಜಿತ್ ಪನ್ಸೆ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ನಟ ನವಾಜುದ್ದೀನ್ ಸಿದ್ದೀಕಿ ಅವರು ಬಾಳಾಸಾಹೇಬ್ ಠಾಕ್ರೆ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ನವಾಜುದ್ದೀನ್ ಅವರಿಗಿಂತ ಮೊದಲು ಈ ಪಾತ್ರಕ್ಕೆ ಅಕ್ಷಯ್ ಕುಮಾರ್ ಮತ್ತು ಇರ್ಫಾನ್ ಖಾನ್ ಅವರ ಹೆಸರು ಚರ್ಚೆಯಲ್ಲಿತ್ತು.
ಟೀಸರ್ ಬಿಡುಗಡೆಗೊಳಿಸಿದ ಬಳಿಕ ತಮ್ಮ ಭಾಷಣದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರನ್ನು ನೆನಪಿಸಿದ ಅಮಿತಾಭ್ ಬಚ್ಚನ್ ಅವರು, ಠಾಕ್ರೆ ಸಾಹೇಬ್ ಅವರು ಎಲ್ಲರ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಿದ್ದರು. ಕೂಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಗಾಯಗೊಂಡಿದ್ದಾಗ, ಠಾಕ್ರೆ ಸಾಹೇಬ್ ಅವರು ನನಗೆ ಸಹಾಯ ಮಾಡಿದ್ದರು. ಅದೇ ರೀತಿ, ಬೊಫೋರ್ಸ್ ಪ್ರಕರಣದಲ್ಲಿ ಹೆಸರು ಕೇಳಿಬಂದ ಅನಂತರವೂ ಅವರು ನನಗೆ ಸಹಾಯ ಮಾಡಿದ್ದರು ಎಂದರು.
ಕೇವಲ ಒಂದು ಚಿತ್ರದಲ್ಲಿ ಬಾಳಾಸಾಹೇಬ್ ಅವರ ಇಡೀ ಜೀವನವನ್ನು ತೋರಿಸಲು ಸಾಧ್ಯವಿಲ್ಲ. ಅದಕ್ಕೆ ಬದಲಿಗೆ, ಅವರ ಜೀವನದ ಇಡೀ ಸೀರೀಜ್ ಅನ್ನು ನಿರ್ಮಾಣಮಾಡಬೇಕು ಎಂದು ಬಚ್ಚನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದು ನನಗೆ ಮಹತ್ವದ ದಿನವಾಗಿದೆ. ಠಾಕ್ರೆ ಅವರಂತಹ ಮಹಾನ್ ವ್ಯಕ್ತಿತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ. ನನ್ನ ಪ್ರಕಾರ ಯಾವುದೇ ನಟನು ಸಹ ಠಾಕ್ರೆ ಅವರ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂದು ಟೀಸರ್ ಬಿಡುಗಡೆ ವೇಳೆ ನಟ ನವಾಜುದ್ದೀನ್ ಸಿದ್ದೀಕಿ ಅವರು ನುಡಿದಿದ್ದಾರೆ.
ಕೃತಜ್ಞತೆ ಸಲ್ಲಿಕೆ
ನಾನು ಸಂಜಯ್ ರಾವುತ್, ಉದ್ಧವ್ ಠಾಕ್ರೆ, ಅಭಿಜಿತ್ ಹಾಗೂ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ಅಮಿತಾಭ್ ಸರ್ ಅವರಿಗೆ ಕೃತಜ್ಞರಾಗಿರುತ್ತೇನೆ. ಅಭಿಜಿತ್ ಮತ್ತು ನಾವು ಸೇರಿ ಈ ಜೀವನಚರಿತ್ರೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಮಾರಿಷಸ್‌ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿರುವ ನವಾಜುದ್ದೀನ್ ಸಿದ್ದೀಕಿ ಅವರು ವೀಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಸಂತಸದ ಮಾತನ್ನ ಹೇಳಿದ್ದಾರೆ.