ಬಸವಕಲ್ಯಾಣ: ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಅನುದಾನ ಸಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳು ಸರಬರಾಜು ಕಾರ್ಯ ಭರದಿಂದ ಸಾಗಿದೆ.
ಮೇ ಅಂತ್ಯದೊಳಗೆ ಎಲ್ಲ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಬೇಕೆಂಬ ಇಲಾಖೆ ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕ ತುಕರಾಮ ರೊಡ್ಡೆ ಸಮ್ಮುಖದಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ. ನಗರದ ಬಂಗ್ಲಾ ಹತ್ತಿರದ ಹಳೆ ವಿದ್ಯಾಪೀಠ ಶಾಲೆಯ ಕಟ್ಟಡದಲ್ಲಿ ಸಂಗ್ರಹಿಸಲಾದ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಆಯಾ ಶಾಲೆಗಳಿಗೆ ವಾಹನಗಳ ಮೂಲಕ ಕೆಲವು ದಿನಗಳಿಂದ ಸರಬರಾಜು ಮಾಡಲಾಗುತ್ತಿದೆ.
ತಾಲೂಕಿನ ಒಟ್ಟು 24 ಸಿಆರ್‌ಸಿ ಪೈಕಿ ಬಸವಕಲ್ಯಾಣ ನಗರದ ಹೊರತು ಪಡಿಸಿ 23 ಸಿಆರ್‌ಸಿ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಈಗಾಗಲೇ ಸರ್ಕಾರದಿಂದ ಬಂದ ಕೆಲವು ಪಠ್ಯಪುಸ್ತಕಗಳನ್ನು ತಲುಪಿಸುವ ಕಾರ್ಯ ಮುಗಿದಿದೆ. ಮರಾಠಿ ಮತ್ತು ಉರ್ದು ವಿಷಯಕ್ಕೆ ಸಂಬಂಧ ಪಟ್ಟ ಶೇ.40ರಷ್ಟು ಪುಸ್ತಗಳು ಸಂಬಂಧ ಪಟ್ಟ ಇಲಾಖೆ ಯಿಂದ ಸರಬರಾಜು ಆಗಿಲ್ಲ. ಅವುಗಳನ್ನು ಕೆಲವು ದಿನಗಳಲ್ಲಿ ತರಿಸಿ ಆಯಾ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಒಂದು ವೇಳೆ ವಿಳಂಬವಾದಲ್ಲಿ, ಕಳೆದ ವರ್ಷ ಉಳಿದ ಅಲ್ಪಸ್ವಲ್ಪ ಪುಸ್ತಕಗಳನ್ನು ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಬಾರದ ಪುಸ್ತಕಗಳು: 3ನೇ ತರಗತಿಯ ಗಣಿತ, ನಲಿಕಲಿ, 4ನೇ ತರಗತಿಯ ಗಣಿತ ಮತ್ತು ಪರಿಸರ ವಿಷಯ, 6ನೇ ತರಗತಿಯ ಗಣಿತ ಭಾಗ-2, ವಿಜ್ಞಾನ, ಸಮಾಜ ವಿಜ್ಞಾನ ಭಾಗ-2, ಇಂಗ್ಲಿಷ್, 7ನೇ ತರಗತಿಯ ಗಣಿತ ಭಾಗ-1 ಮತ್ತು ವಿಜ್ಞಾನ ಭಾಗ-2, ಸಮಾಜ ವಿಜ್ಞಾನ ಭಾಗ-2, 8ನೇ ತರಗತಿಯ ವಿಜ್ಞಾನ ಭಾಗ-1, ಸಮಾಜ ವಿಜ್ಞಾನ ಭಾಗ-2, ದೈಹಿಕ ಶಿಕ್ಷಣ, 9ನೇ ತರಗತಿಯ ವಿಜ್ಞಾನ ಭಾಗ-1 ಮತ್ತು 2, ಇಂಗ್ಲಿಷ್ ಮತ್ತು 10ನೇ ತರಗತಿಯ ವಿಜ್ಞಾನ ಭಾಗ-2 ಪುಸ್ತಕಗಳ ಕೊರತೆ ಇದೆ.
•ವೀರಾರೆಡ್ಡಿ ಆರ್.ಎಸ್.