ಬೆಂಗಳೂರು: ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಸುವ ಕುರಿತ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ವಿಚಾರವಾಗಿ ಎ.ಎ. ಸಂಜೀವ್ ನಾರಾಯಣ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾ| ಪಿ. ಕೃಷ್ಣಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ಯಾವ ಹಂತದಲ್ಲಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಸರಕಾರದ ಪರ ವಕೀಲರು ಉತ್ತರಿಸಿ, ಹಂತ-ಹಂತವಾಗಿ ಪಠ್ಯ ಪುಸ್ತಕಗಳನ್ನು ಪೂರೈಸಲಾಗು ವುದು. ಸೆಪ್ಟಂಬರ್ ಕೊನೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿ ಸಲಾಗುವುದು ಎಂದು ತಿಳಿಸಿದರು.
ಅದಕ್ಕೆ, ತರಗತಿಗಳು ಆರಂಭವಾಗುವುದಕ್ಕಿಂತ ಮುಂಚೆ ಪಠ್ಯ ಪುಸ್ತಕಗಳು ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಪಠ್ಯ ಪುಸ್ತಕಗಳು ಇಲ್ಲದೇ ಮಕ್ಕಳು ತಗರತಿಗೆ ಬಂದರೆ ಅದು ನಿಷ್ಪ್ರಯೋಜಕವಾಗಲಿದೆ. ಆದ್ದರಿಂದ ಮಕ್ಕಳಿಗೆ ಶಾಲಾ ಪಠ್ಯ ಪುಸ್ತಕಗಳನ್ನು ಪೂರೈಸುವ ವ್ಯವಸ್ಥೆಯ ಆಗಸ್ಟ್ 30ರೊಳಗಿನ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತು.
ಆನ್‌ಲೈನ್ ಶಿಕ್ಷಣ ಪದ್ದತಿ ನಡೆಯುತ್ತಿರುವುದರಿಂದ ಸೌಲಭÌವಿಲ್ಲದ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರೈಸಬೇಕು ಎಂದು ಅರ್ಜಿ ದಾರರು ಮನವಿ ಮಾಡಿದ್ದಾರೆ. ಆದರೆ, ಈಗಾಗಲೇ ಶಾಲೆಗಳು ಪ್ರಾರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದರಿಂದ ಈ ನಿಟ್ಟಿನಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡುವು ದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.