ಬೆಂಗಳೂರು :ರಾಜ್ಯದಲ್ಲಿ ಇಂದು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮಾಡಿರುವ ಅನಾಹುತ ವಿಕೋಪಕ್ಕೆ ಹೋಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಸಮಿತಿಯ ಕಾರ್ಯವೈಖರಿ ಕುರಿತು ಸಾಹಿತಿಗಳು, ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಸಮಿತಿಗೆ ಅದಕ್ಕೇ ಆದ ಗೌರವವಿದೆ. ಅದರದೇ ಆದ ತೂಕವಿದೆ. ಅದಕ್ಕೆ ಅರ್ಹವುಳ್ಳ ವ್ಯಕ್ತಿಗಳು ಅಧ್ಯಕ್ಷರಾಗಿ ನೇಮಕವಾಗುತ್ತಿದ್ದರು. ಆದರೆ ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆ ಸಮಿತಿಯಿಂದ ಶಿಕ್ಷಣದ ಮೌಲ್ಯ ಹಾಳಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ನಾಸಿಕ್ ಸಭೆಗೆ ಗೋವಿಂದ ಸರಸ್ವತಿ ಸ್ವಾಮಿ ತೆರಳಿದ್ದು ಸರಿಯಲ್ಲ:ಮಹಾಂತ ವಿದ್ಯಾದಾಸ
ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಸದಸ್ಯರಿದ್ದು, ಅದರಲ್ಲಿ 7 ಮಂದಿ ಒಂದೇ ಸಮುದಾಯಕ್ಕೆ ಸೇರಿದವರು. ರಾಜಾರಾಮ್ ಹೆಗಡೆ ಅಧ್ಯಕ್ಷರು, ಸತ್ಯಪ್ರಕಾಶ್- ವಿದ್ಯಾವರ್ಧಕ ಸಂಘ, ರಂಗನಾಥ್- ರಾಷ್ಟ್ರೋತ್ಥಾನ, ಬಿ.ಕೆ ವಾಸುಕಿ- ವಿದ್ಯಾಭವನ, ಅನಂತ ಕೃಷ್ಣ ಭಟ್- ವಿಶ್ವಹಿಂದೂ ಪರಿಷತ್ ಮುಖಂಡರು, ವಿಠಲ ಪೊತೆದಾರ್- ಎಮಿತಿಕ್ ಸೊಸೈಟಿ ಸದಸ್ಯರು. ಇವರೆಲ್ಲರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ. ಈ ಸಮಿತಿಯಲ್ಲಿ ಮಹಿಳೆಯರಿಗೆ, ಬೇರೆ ವರ್ಗದವರಿಗೆ ಯಾವುದೇ ಸ್ಥಾನ ನೀಡಿಲ್ಲ ಎಂದು ದೂರಿದರು.
ಇನ್ನು ಈ ಸಮಿತಿ ಹೊಸದಾಗಿ ಸೇರಿಸಿರುವ 10 ಬರಹದಲ್ಲಿ 8 ಬರಹ ಒಂದೇ ಸಮುದಾಯಕ್ಕೆ ಸೇರಿದೆ. ಕೆ.ಬಿ ಹೆಡೆಗೆವಾರ್, ಗಜಾನನ ಶರ್ಮಾ, ಪರಮೇಶ್ವರ್ ಭಟ್, ಗಣೇಶ್ ಶತಾವದಾನಿ, ಬನ್ನಂಜೆ ಗೋವಿಂದಾಚಾರ್ಯ ಹಾಗೂ ಚಿದಾನಂದ ಅವರ ಬರಹ ಸೇರಿಸಲಾಗಿದೆ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪಿ. ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬುಬಕರ್, ಎಲ್. ಬಸವರಾಜು, ಎನ್ ನೀಲಾ, ಬಿ.ಟಿ ಲಲಿತಾ ನಾಯಕ್ ಅವರ ಬರಹ ಕೈಬಿಟ್ಟಿದ್ದಾರೆ ಎಂದು ದೂಷಿಸಿದರು.