Advertisement

ಪಠ್ಯಪುಸ್ತಕ ಪರಿಷ್ಕರಣೆ ಗೊಂದಲ ಶೀಘ್ರ ಬಗೆಹರಿಯಲಿ

11:58 PM Jun 21, 2022 | Team Udayavani |

ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದೀಚೆಗೆ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಶೀಘ್ರವೇ ಬಗೆಹರಿಯಬೇಕಿದೆ. ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆ, ಪ್ರತಿಹೇಳಿಕೆಗಳು, ಪ್ರತಿಭಟನೆಯ ಹೆಸರಲ್ಲಿ ಪಕ್ಷಗಳು ಮತ್ತು ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ತೋರುತ್ತಿರುವ ವರ್ತನೆಗಳು ಇಡೀ ರಾಜ್ಯದ ಮಾನವನ್ನು ಹರಾಜು ಹಾಕುತ್ತಿವೆ.

Advertisement

ಶಾಲಾ ಮಕ್ಕಳ ಪಠ್ಯ ಪುಸ್ತಕಗಳ ಪರಿಷ್ಕರಣೆ ಹೊಸದೇನಲ್ಲ. ಕಾಲಕಾಲಕ್ಕೆ ಪಠ್ಯಗಳ ಪರಿಷ್ಕರಣೆ, ಬದಲಾವಣೆ ಕಾರ್ಯ ನಡೆಯುತ್ತಲೇ ಬಂದಿವೆ. ಪ್ರತಿಯೊಂದೂ ಬಾರಿಯೂ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ ಸಮಿತಿಯಿಂದ ಒಂದಿಷ್ಟು ತಪ್ಪುಗಳಾಗಿರುವುದು ಸಹಜ. ಅವನ್ನು ಸರಿಪಡಿಸಿಕೊಂಡು ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಆಯಾಯ ಸರಕಾರಗಳು ಕ್ರಮಕೈಗೊಂಡಿದ್ದವು. ಈ ಬಾರಿ ಪರಿಷ್ಕೃತ ಪಠ್ಯಗಳಲ್ಲಿನ ಲೋಪಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿ ಪರಿಷ್ಕೃತ ಪಠ್ಯದಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿ ವಾರಗಳೇ ಕಳೆದಿವೆ. ಆದರೆ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ಪ್ರಯತ್ನ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತು ಕಾರ್ಯಾಂಗ ಸಂಪೂರ್ಣವಾಗಿ ಅತ್ತ ಗಮನ ಹರಿಸಿದ್ದರಿಂದಾಗಿ ಪಠ್ಯಪುಸ್ತಕದಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕಾರ್ಯ ವಿಳಂಬವಾಗಿರಬಹುದು. ಆದರೆ ಇದೀಗ ಪ್ರಧಾನಿ ಅವರ ರಾಜ್ಯ ಭೇಟಿ ಮುಕ್ತಾಯಗೊಂಡಿದ್ದು ಇನ್ನಾದರೂ ಸರಕಾರ ಪಠ್ಯಪುಸ್ತಕ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಿ ಶಾಲೆಗಳಲ್ಲಿ ಸುಗಮವಾಗಿ ಪಾಠಪ್ರವಚನಗಳು ನಡೆಯುವಂತಾಗಲು ಅವಕಾಶ ಮಾಡಿಕೊಡಬೇಕಿದೆ. ಇದೇ ವೇಳೆ ಬುಧವಾರದಂದು ಶಿಕ್ಷಣ ಇಲಾಖೆಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆ ನಡೆಸಿ ಪಠ್ಯಪುಸ್ತಕದಲ್ಲಿನ ಲೋಪಗಳನ್ನು ಸರಿಪಡಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹೀಗಾಗಿ ಸದ್ಯ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ಗೊಂದಲ ಶೀಘ್ರದಲ್ಲಿಯೇ ಬಗೆಹರಿದೀತು ಎಂಬ ಆಶಾಭಾವನೆ ಮೂಡಿದೆ.

ಮಕ್ಕಳ ಶಿಕ್ಷಣದಲ್ಲೂ ರಾಜಕೀಯ ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆಸಿರುವುದು ಸರಿಯಲ್ಲ. ಅಲ್ಲದೆ ವಿವಾದವನ್ನು ಇಷ್ಟೊಂದು ಸುದೀರ್ಘ‌ ಕಾಲ ಜೀವಂತವಾಗಿರಿಸಿದುದು ಒಳ್ಳೆಯ ಬೆಳವಣಿಗೆಯಲ್ಲ. ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಒಂದಿಷ್ಟು ಲೋಪಗಳಾಗಿರಬಹುದು. ಅದನ್ನೊಂದು ಬಲುದೊಡ್ಡ ವಿವಾದವನ್ನಾಗಿಸಿ ವಿನಾಕಾರಣ ಹಾದಿಬೀದಿ ರಂಪಾಟ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ರಾಜಕೀಯ ಪಕ್ಷಗಳು ಮುಂದಾದುದು ತೀರಾ ಬೇಸರದ ಸಂಗತಿ. ಅಷ್ಟು ಮಾತ್ರವಲ್ಲದೆ ಈ ವಿಚಾರವನ್ನು ಇತ್ತಂಡಗಳೂ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿದ್ದು, ಜಾತಿ-ಸಮುದಾಯಗಳ ನಡುವೆ ಬಿರುಕು ಸೃಷ್ಟಿಸುವ ಪ್ರಯತ್ನ ನಡೆಸಿದ್ದು, ವಾಸ್ತವಾಂಶವನ್ನೂ ಅರಿತುಕೊಳ್ಳುವ ಪ್ರಯತ್ನ ನಡೆಸದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಏನೇನೋ ಗೀಚಿ ವಿವಾದಕ್ಕೆ ತುಪ್ಪ ಸುರಿದುದು ಈ ಎಲ್ಲ ನಡವಳಿಕೆಗಳು ಸಮಾಜದಲ್ಲಿ ನಾಯಕರೆಂದು ಗುರುತಿಸಿಕೊಂಡವರಿಗೆ ಒಂದಿಷ್ಟೂ ಶೋಭೆ ತರಿಸದು.

ಬುಧವಾರ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಅವರು ಪಠ್ಯ ಪುಸ್ತಕ ಪರಿಷ್ಕರಣೆಯ ವೇಳೆ ಆಗಿದೆ ಎನ್ನಲಾಗಿರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ವ್ಯಕ್ತಿಗತ, ಸೈದ್ಧಾಂತಿಕ, ರಾಜಕೀಯ ಪ್ರತಿಷ್ಠೆಗಳೆಲ್ಲವನ್ನೂ ಬದಿಗಿರಿಸಿ ವಿವಾದಕ್ಕೆ ಇತಿಶ್ರೀ ಹಾಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next