Advertisement

ಐಪಿಎಲ್‌: ಶುಭಮನ್‌ ಗಿಲ್‌ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್‌

11:42 PM Apr 08, 2022 | Team Udayavani |

ಮುಂಬೈ: ಶುಕ್ರವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಸೋತುಹೋಗಿದೆ. ಮತ್ತೊಂದು ಕಡೆ ನೂತನ ತಂಡ ಗುಜರಾತ್‌ ಟೈಟಾನ್ಸ್‌, ಸತತ ಮೂರನೇ ಗೆಲುವು ಸಾಧಿಸಿದೆ.

Advertisement

ಪಂದ್ಯದ ಕೊನೆಯವರೆಗೂ ಹೋರಾಟ ನಡೆಯಿತು ಎನ್ನುವುದು ಗಮನಾರ್ಹ. ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 9 ವಿಕೆಟಿಗೆ 189 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಗುಜರಾತ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿತು.

ಗುಜರಾತ್‌ ಪರ ಶುಭಮನ್‌ ಗಿಲ್‌ ಅದ್ಭುತ ಬ್ಯಾಟಿಂಗ್‌ ಮಾಡಿದರು. ಆರಂಭಿಕನಾಗಿ ಕ್ರೀಸ್‌ಗೆ ಬಂದ ಅವರು 59 ಎಸೆತ ಎದುರಿಸಿ, 11 ಬೌಂಡರಿ, 1 ಸಿಕ್ಸರ್‌ಗಳ ನೆರವಿನಿಂದ 96 ರನ್‌ ಗಳಿಸಿ ಔಟಾದರು. ಹೋರಾಟಕಾರಿ ಬ್ಯಾಟಿಂಗ್‌ ಮಾಡಿದ ನಾಯಕ ಹಾರ್ದಿಕ್‌ ಪಾಂಡ್ಯ (27) ರನೌಟಾಗಿದ್ದರು. ಆಗ ಸೋಲಿನ ಚಿಂತೆಯಿಂದ ಗುಜರಾತ್‌ ಹತಾಶವಾಗಿತ್ತು. ಅಂತಹ ಹೊತ್ತಿನಲ್ಲಿ ಬ್ಯಾಟ್‌ ಹಿಡಿದು ಬಂದ ರಾಹುಲ್‌ ತೆವಾಟಿಯ ಕೊನೆಯ ಎರಡು ಎಸೆತಗಳಲ್ಲಿ ಸತತ 2 ಸಿಕ್ಸರ್‌ ಬಾರಿಸಿ, ಗುಜರಾತ್‌ಗೆ ನಂಬಲಸಾಧ್ಯ ಜಯ ತಂದಿತ್ತರು.

ಲಿವಿಂಗ್‌ಸ್ಟೋನ್‌ ಸ್ಫೋಟ: ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಲಿಯಮ್‌ ಲಿವಿಂಗ್‌ಸ್ಟೋನ್‌ ಸ್ಫೋಟಿಸಿದರು. ಉಳಿದವರು ಆ ಮಟ್ಟದ ಪ್ರದರ್ಶನ ನೀಡಲಿಲ್ಲ. ನಾಯಕ ಮಾಯಾಂಕ್‌ ಅಗರ್ವಾಲ್‌ (5) ಮತ್ತು ಈ ಋತುವಿನ ಮೊದಲ ಪಂದ್ಯವಾಡಿದ ಜಾನಿ ಬೇರ್‌ಸ್ಟೊ (8) ಬೇಗನೇ ಔಟಾದದ್ದು ತಂಡಕ್ಕೆ ಹಿನ್ನಡೆಯಾಯಿತು. ಬೇರ್‌ಸ್ಟೊ ಆಟ ಎಂಟೇ ರನ್ನಿಗೆ ಮುಗಿಯಿತು.

3ನೇ ವಿಕೆಟಿಗೆ ಜತೆಗೂಡಿದ ಶಿಖರ್‌ ಧವನ್‌-ಲಿಯಮ್‌ ಲಿವಿಂಗ್‌ಸ್ಟೋನ್‌ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸತೊಡಗಿದರು. 11ನೇ ಓವರ್‌ನ ಮೊದಲ ಎಸೆತದಲ್ಲಿ ಗುಜರಾತ್‌ಗೆ ದೊಡ್ಡದೊಂದು ಯಶಸ್ಸು ಸಿಕ್ಕಿತು. ರಶೀದ್‌ ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ವಿಯಾದರು. ಧವನ್‌ ಆಟಕ್ಕೆ ತೆರೆ ಎಳೆದರು (30 ಎಸೆತ, 35 ರನ್‌, 4 ಬೌಂಡರಿ).

Advertisement

ಹಾರ್ಡ್‌ ಹಿಟ್ಟರ್‌ ಲಿವಿಂಗ್‌ಸ್ಟೋನ್‌ ಅಬ್ಬರಿಸುವ ಮೂಲಕ ಪಂಜಾಬ್‌ ಮೊತ್ತದಲ್ಲಿ ಭರ್ಜರಿ ಪ್ರಗತಿ ಕಂಡುಬಂತು. ಅವರು ಕೇವಲ 21 ಎಸೆತಗಳಿಂದ ಅರ್ಧಶತಕ ಪೂರೈಸಿದರು. ಒಟ್ಟು 27 ಎಸೆತ ಎದುರಿಸಿದ ಅವರು 7 ಬೌಂಡರಿ, 4 ಸಿಕ್ಸರ್‌ ನೆರವಿನಿಂದ ಸರ್ವಾಧಿಕ 64 ರನ್‌ ಬಾರಿಸಿದರು.

ಈ ನಡುವೆ ದರ್ಶನ್‌ ನಲ್ಕಂಡೆ ಸತತ ಎಸೆತಗಳಲ್ಲಿ ಜಿತೇಶ್‌ ಶರ್ಮ ಮತ್ತು ಒಡೀನ್‌ ಸ್ಮಿತ್‌ ವಿಕೆಟ್‌ ಉಡಾಯಿಸಿ ಮೆರೆದರು. ಜಿತೇಶ್‌ ಅವರದು ಮಿಂಚಿನ ಆಟ. 11 ಎಸೆತಗಳಿಂದ 23 ರನ್‌ ಹೊಡೆದರು (1 ಬೌಂಡರಿ, 2 ಸಿಕ್ಸರ್‌). 22 ರನ್ನಿಗೆ 3 ವಿಕೆಟ್‌ ಕಿತ್ತ ರಶೀದ್‌ ಖಾನ್‌ ಗುಜರಾತ್‌ ತಂಡದ ಯಶಸ್ವಿ ಬೌಲರ್‌ ಎನಿಸಿಕೊಂಡರು.

18ನೇ ಓವರ್‌ನಲ್ಲಿ 9ನೇ ವಿಕೆಟ್‌ ಕಳೆದುಕೊಂಡ ಪಂಜಾಬ್‌ ಆಲೌಟ್‌ ಬಾಗಿಲಲ್ಲಿ ನಿಂತಿತ್ತು. ಆದರೆ ರಾಹುಲ್‌ ಚಹರ್‌ (22) ಮತ್ತು ಅರ್ಷದೀಪ್‌ ಸಿಂಗ್‌ (10) ಕೊನೆಯ ವಿಕೆಟಿಗೆ ಅಂಟಿಕೊಂಡು ನಿಂತರು. 27 ಬಹುಮೂಲ್ಯ ರನ್‌ ಒಟ್ಟುಗೂಡಿತು. ಗುಜರಾತ್‌ಗೆ 190 ರನ್ನುಗಳ ಟಾರ್ಗೆಟ್‌ ಲಭಿಸಿತು.

ಸಂಕ್ಷಿಪ್ತ ಸ್ಕೋರು: ಪಂಜಾಬ್‌ 20 ಓವರ್‌, 189/9 (ಲಿಯಮ್‌ ಲಿವಿಂಗ್‌ಸ್ಟೋನ್‌ 64, ಶಿಖರ್‌ ಧವನ್‌ 35, ರಶೀದ್‌ ಖಾನ್‌ 22ಕ್ಕೆ 3). ಗುಜರಾತ್‌ 20 ಓವರ್‌, 190/4 (ಶುಭಮನ್‌ ಗಿಲ್‌ 96, ರಾಹುಲ್‌ ತೆವಾಟಿಯ 13, ಕ್ಯಾಗಿಸೊ ರಬಾಡ 35ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next