ಬೆಂಗಳೂರು: 2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಫಲಿತಾಂಶವನ್ನು ಮುಂದಿನ ವಾರಾಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಶಾಲಾ ಶಿಕ್ಷಕರ ಪರೀಕ್ಷೆಯ ಫಲಿತಾಂಶವನ್ನು ಮುಂದಿನ ವಾರಾಂತ್ಯದಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನ.6ರಂದು ರಾಜ್ಯಾದ್ಯಂತ ನಡೆದ ಟಿಇಟಿ ಪರೀಕ್ಷೆಯ ಪತ್ರಿಕೆ-1 (1ರಿಂದ 5ನೇ ತರಗತಿ) ಪರೀಕ್ಷೆಗೆ 1,54,929 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ, ಪತ್ರಿಕೆ -2 (6 ರಿಂದ 8ನೇ ತರಗತಿ) ಕ್ಕೆ 2,06,456 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಒಟ್ಟು 3,61,385 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ 1,09,551 ಹೆಚ್ಚುವರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ಅಂತಿಮ ಕೀ ಉತ್ತರಗಳನ್ನು ನ.25ರಂದು ಬಿಡುಗಡೆ ಮಾಡಲಾಗಿತ್ತು.
ಟ್ವೀಟ್‌ನಲ್ಲೇ ಸಚಿವರಿಗೆ ಪ್ರಶ್ನೆ: ಸಚಿವರು ಟ್ವೀಟ್ ಮಾಡಿದ ಬೆನ್ನಲ್ಲೇ ಅಭ್ಯರ್ಥಿಗಳು ಹಲವು ವಿಚಾರಗಳ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯು ಅತೀ ವೇಗದಲ್ಲಿ ನಡೆಯುತ್ತಿದೆ ಎಂದು ಹೇಳಿಕೊಂಡೇ ಹಿಂದಿನ ನೇಮಕಾತಿಗಿಂತ ಹೆಚ್ಚು ದಿನಗಳನ್ನು ಕಳೆದಾಗಿದೆ. ಇನ್ನಾದರೂ ಅಂತಿಮ ಪಟ್ಟಿ ಪ್ರಕಟಿಸಿ ಬೇಗ ಶಾಲೆಗೆ ನಿಯುಕ್ತಿಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನೆರವಾಗಿ. ಜಿಪಿಎಸ್‌ಟಿಆರ್ ಮುಖ್ಯ ಆಯ್ಕೆ ಪಟ್ಟಿ ಯಾವಾಗ ಬಿಡ್ತೀರಾ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಭ್ಯರ್ಥಿಗಳು ಸಚಿವರನ್ನು ಪ್ರಶ್ನಿಸಿದ್ದಾರೆ.