Advertisement

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

12:58 AM Apr 08, 2020 | Hari Prasad |

ಪ್ರಪಂಚದಾದ್ಯಂತ 12 ಲಕ್ಷಕ್ಕೂ ಅಧಿಕ ಕೋವಿಡ್ 19 ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 65 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಇರಲಿ, ಜಾಗತಿಕ ಸೂಪರ್‌ ಪವರ್‌ ಎಂದು ಕರೆಸಿಕೊಳ್ಳುವ ಅಮೆರಿಕದಲ್ಲೇ 3 ಲಕ್ಷಕ್ಕೂ ಅಧಿಕ ಜನ ರಲ್ಲಿ ಸೋಂಕು ಪತ್ತೆಯಾಗಿದ್ದು, 8000ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಖುದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಹೇಳುತ್ತಿದ್ದಾರೆ.

Advertisement

ಇಟಲಿ ಮತ್ತು ಸ್ಪೇನ್‌ನಲ್ಲಿ ಸಾವಿನ ಸಂಖ್ಯೆ 10 ಸಾವಿರದ ಗಡಿಯನ್ನು ದಾಟಿಯಾಗಿದೆ. ಯುರೋಪ್‌ನ ಪ್ರಮುಖ ರಾಷ್ಟ್ರ ಜರ್ಮನಿಯ ಪರಿಸ್ಥಿತಿ ಹದಗೆಟ್ಟಿದೆಯಾದರೂ ಅಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ರವಿವಾರದ ವೇಳೆಗೆ ಆ ದೇಶದಲ್ಲಿ ಸೋಂಕಿತರ ಸಂಖ್ಯೆ 96 ಸಾವಿರವಿದ್ದರೆ, ಮೃತಪಟ್ಟವರ ಸಂಖ್ಯೆ 1,422ರಷ್ಟಿದೆ. ಇದುವರೆಗೆ ಅಲ್ಲಿ 26,400 ಜನರು ಚೇತರಿಸಿಕೊಂಡಿದ್ದಾರೆ.

ಆರೋಗ್ಯ ಸೇವೆಗಳಿಗೆ ಹೆಸರುವಾಸಿಯಾಗಿದ್ದ ಇಟಲಿಯನ್ನಂತೂ ಕೋವಿಡ್ 19 ವೈರಸ್ ಚಿಂತಾಗ್ರಸ್ತ ಸ್ಥಿತಿಗೆ ದೂಡಿದೆ. 1 ಲಕ್ಷ 24 ಸಾವಿರಕ್ಕೂ ಅಧಿಕ ಸೋಂಕಿತರು ಮತ್ತು 15 ಸಾವಿರಕ್ಕೂ ಅಧಿಕ ಮೃತಪಟ್ಟವರಷ್ಟೇ ಅಲ್ಲದೇ, ಚಿಕಿತ್ಸಾ ಸೌಲಭ್ಯ ಸಿಗದೆ ಮನೆಗಳಲ್ಲಿ, ರಸ್ತೆಗಳಲ್ಲಿ ಪ್ರಾಣಬಿಡುತ್ತಿರುವವರ ಸಂಖ್ಯೆ ಅಧಿಕವಿದ್ದು, ಅವೆಲ್ಲ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗುತ್ತಿದೆ.

ಈ ಅಂಕಿ ಅಂಶಗಳನ್ನೆಲ್ಲ ಗಮನಿಸಿದರೆ ಕೋವಿಡ್ 19 ವೈರಸ್ ನಿಂದ ತಮ್ಮ ಜನರ ಪ್ರಾಣ ಉಳಿಸುವ ವಿಷಯದಲ್ಲಿ ಜರ್ಮನಿ ಇತರ ರಾಷ್ಟ್ರಗಳಿಗಿಂತಲೂ ಮುಂದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಅಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಲಾಕ್‌ ಡೌನ್‌ ನಿಯಮಗಳು ಮತ್ತು ಮುಖ್ಯವಾಗಿ ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿರುವುದು.

ಇನ್ನು ದಕ್ಷಿಣ ಕೊರಿಯಾವಂತೂ ನಿಬ್ಬೆರಗಾಗಿಸುವ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಎಪ್ರಿಲ್‌ 1ರ ವೇಳೆಗೆ ಆ ರಾಷ್ಟ್ರ 4,12,000 ಜನರ ಪರೀಕ್ಷೆ ನಡೆಸಿದೆ! ಜರ್ಮನಿಯಲ್ಲಿ ಪ್ರತಿ ದಿನ 50 ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿರುವುದು ಶ್ಲಾಘನೀಯ ವಿಚಾರವೇ ಹೌದು. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಎಪ್ರಿಲ್‌ 1ರ ವೇಳೆಗೆ 53,605 ಜನರನ್ನು ಪರೀಕ್ಷೆ ಮಾಡಲಾಗಿದೆ.

Advertisement

ಇನ್ನೊಂದೆಡೆ ಭಾರತವೂ ತನ್ನದೇ ಆದ ರೀತಿಯಲ್ಲಿ ಈ ವೈರಸ್‌ ವಿರುದ್ಧ ಸಮರ ಸಾರಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ 19 ವೈರಸ್ ವಿರುದ್ಧದ ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದೆ. ಕೋವಿಡ್‌-19 ವಿಷಯದಲ್ಲಿ ಭಾರತ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡುತ್ತಾ ಡಬ್ಲ್ಯುಎಚ್‌ಒನ ವಿಶೇಷ ಪ್ರತಿ ನಿಧಿ ಡಾ| ಡೇವಿಡ್‌ ನವಾರೋ, ಭಾರತವು ಸರಿಯಾದ ಸಮಯದಲ್ಲಿ ಲಾಕ್‌ ಡೌನ್‌ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ, ಒಂದೆಡೆ ಅಮೆರಿಕ ಮತ್ತು ಬಹುತೇಕ ಐರೋಪ್ಯ ರಾಷ್ಟ್ರಗಳ ಸರ್ಕಾರಗಳು ಲಾಕ್‌ ಡೌನ್‌ ವಿಚಾರದಲ್ಲಿ ಬಹಳ ತಡ ಮಾಡಿದವು, ಆದರೆ ಭಾರತ ಬೇಗನೆ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಹಾಗೆಂದು ಆಗಬೇಕಾದ ಕೆಲಸ ಇಷ್ಟೇ ಇಲ್ಲ. ನಮ್ಮ ವೈದ್ಯರು, ನರ್ಸ್‌ಗಳು ಮತ್ತು ಉಳಿದ ಮೆಡಿಕಲ್‌ ಸಿಬಂದಿಯ ಬಳಿ ಸಾಕಷ್ಟು ಸುರಕ್ಷತಾ ಉಪಕರಣಗಳು ಇಲ್ಲ. ಕೋವಿಡ್ 19 ವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವ ವೈದ್ಯರು, ಪೊಲೀಸರು, ಆರೋಗ್ಯ ಸಿಬಂದಿ ಮತ್ತು ಆಶಾಕಾರ್ಯಕರ್ತೆಯರಂಥ ಪರಿಶ್ರಮಿಗಳಿಗೂ ಸುರಕ್ಷತಾ ಸಾಮಗ್ರಿಗಳು ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ,.

ಇವೆಲ್ಲದರ ನಡುವೆಯೇ ನಿಜಾಮುದ್ದೀನ್‌ನಂಥ ಘಟನೆಗಳು ನಡೆದು, ಇಡೀ ಯಂತ್ರದ ಪ್ರಯತ್ನದ ಮೇಲೆ ಮತ್ತಷ್ಟು ಒತ್ತಡ ಬೀಳಲಾರಂಭಿಸಿದೆ. ಆದಾಗ್ಯೂ ಭಾರತವು ಲಾಕ್‌ ಡೌನ್‌ನಿಂದಾಗಿ ರೋಗ ಹರಡುವಿಕೆಯ ವೇಗವನ್ನು ತಗ್ಗಿಸಿರುವುದಂತೂ ಸುಳ್ಳಲ್ಲ. ಇನ್ನು ಟೆಸ್ಟಿಂಗ್‌ ವಿಚಾರದಲ್ಲಿ ನಾವು ದಕ್ಷಿಣ ಕೊರಿಯಾ, ಜರ್ಮನಿಯಂಥ ರಾಷ್ಟ್ರಗಳನ್ನು ಸರಿಗಟ್ಟುವುದು ಅಸಾಧ್ಯವೇನೋ ಅನ್ನಿಸಿದರೂ, ಮುಂದಿನ ದಿನಗಳಲ್ಲಾದರೂ ಆ ಹಾದಿಯಲ್ಲಿ ನಾವು ಬಹಳಷ್ಟು ಪ್ರಯತ್ನ ಮಾಡಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next