Advertisement

ತವರಲ್ಲಿ ಬಿಎಸ್‌ವೈಗೆ ಪರೀಕ್ಷೆ

10:59 AM Dec 13, 2019 | Lakshmi GovindaRaj |

ತವರು ಕ್ಷೇತ್ರ ಕೆ.ಆರ್‌.ಪೇಟೆಯೊಳಗೆ ನಡೆದಿರುವ ಉಪಕದನ ಸಿಎಂ ಯಡಿಯೂರಪ್ಪಗೆ ಅಗ್ನಿಪರೀಕ್ಷೆ ಕಾಲ. ಅಂತೆಯೇ ಜೆಡಿಎಸ್‌ಗೆ ಅಸ್ತಿತ್ವದ ಉಳಿವಿನ ಪ್ರಶ್ನೆಯಾಗಿ ಕಾಡಿದ್ದು, ಕಾಂಗ್ರೆಸ್‌, ಅನುಕಂಪದ ಒಲವನ್ನು ಎದುರು ನೋಡುತ್ತಿದೆ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌-ಜೆಡಿಎಸ್‌ನ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಡುತ್ತಿದ್ದ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಶಕ್ತಿ ಪ್ರದರ್ಶನಕ್ಕಿಳಿದಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ, ಉಭಯ ಪಕ್ಷಗಳಿಗೂ ಸಮರ್ಥ ಪೈಪೋಟಿ ನೀಡುವಷ್ಟು ಸಾಮರ್ಥ್ಯ ವೃದ್ಧಿಸಿಕೊಂಡು ಪ್ರಚಾರದ ಅಖಾಡ ರಂಗೇರುವಂತೆ ಮಾಡಿದೆ.

Advertisement

ಜೆಡಿಎಸ್‌ ಭದ್ರಕೋಟೆಯೊಳಗೆ “ಆಪರೇಷನ್‌ ಕಮಲ’ ನಡೆಸಿದ ಬಿಜೆಪಿ, ಕೆ.ಆರ್‌.ಪೇಟೆ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರನ್ನು ಸೆಳೆಯುವಲ್ಲಿ ಯಶಸ್ವಿ ಯಾಯಿತು. ಉಪ ಚುನಾವಣೆಯಲ್ಲಿ ನಾರಾಯಣ ಗೌಡರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಗೆಲುವಿನ ಗುರಿ ಮುಟ್ಟುವ ಕನಸು ಕಾಣುತ್ತಿದೆ. ಇದಕ್ಕಾಗಿ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಕೆ.ಆರ್‌.ಪೇಟೆಯಲ್ಲೇ ಠಿಕಾಣಿ ಹೂಡಿ ರಣತಂತ್ರ ರೂಪಿಸುತ್ತಿದ್ದಾರೆ. ಅಲ್ಲದೆ, ಸಿಎಂ ತವರು ಕ್ಷೇತ್ರ ಎಂಬ ಕಾರಣಕ್ಕೆ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕೆ.ಆರ್‌.ಪೇಟೆ ಚುನಾವಣಾ ಇತಿಹಾಸದಲ್ಲಿ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ.

1989ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎನ್‌.ಕೆಂಗೇಗೌಡರು 30,791 ಹಾಗೂ 1994ರಲ್ಲಿ 22,785 ಮತಗಳನ್ನು ಗಳಿಸಿದ್ದೇ ಇದುವರೆಗಿನ ದೊಡ್ಡ ಸಾಧನೆಯಾಗಿದೆ. 2018ರಲ್ಲಿ ಅಭ್ಯರ್ಥಿಯಾಗಿದ್ದ ಬಿ.ಕೆ.ಮಂಜು, 9,819 ಮತಗಳನ್ನು ಗಳಿಸಿ ನಿರಾಸೆ ಮೂಡಿಸಿದ್ದರು. ಜೆಡಿಎಸ್‌ನಿಂದ ಕಮಲ ಪಾಳಯ ಸೇರಿದ ಕೆ.ಸಿ. ನಾರಾಯಣಗೌಡರಿಂದ ಬಿಜೆಪಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ತವರು ಕ್ಷೇತ್ರದಲ್ಲಿ ಕಮಲ ಅರಳಿಸ ಲೇಬೇಕು ಎಂದು ಯಡಿಯೂರಪ್ಪ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಪುತ್ರ ವಿಜಯೇಂದ್ರನಿಗೆ ಉಸ್ತುವಾರಿ ಜವಾಬ್ದಾರಿ ಕೊಟ್ಟು ಅಲ್ಲೇ ಠಿಕಾಣಿ ಹೂಡುವಂತೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ವಿವಿಧ ಜಾತಿಯ ನಾಯಕರನ್ನು ಕ್ಷೇತ್ರದಲ್ಲಿ ಬೀಡು ಬಿಡುವಂತೆ ಮಾಡಿ ಜಾತಿ ಮತಗಳನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಪ್ರತಿತಂತ್ರ: ಬಿಜೆಪಿ ರಣತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌, ನಾರಾಯಣಗೌಡರು ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿ ಸೇರಿದರೆಂಬ ಆರೋಪವನ್ನೇ ಗುರಿಯಾಗಿಸಿಕೊಂಡು ಅವರ ವಿರುದ್ಧ ವಿರೋಧಿ ಅಲೆ ಸೃಷ್ಠಿಸುವ ಪ್ರಯತ್ನ ನಡೆಸಿವೆ. ಕೆ.ಆರ್‌.ಪೇಟೆ, ಕಳೆದೆರಡು ವರ್ಷಗಳಿಂದ ಜೆಡಿಎಸ್‌ ಭದ್ರಕೋಟೆಯಾಗಿ ಉಳಿದುಕೊಂಡಿತ್ತು. 2013 ಹಾಗೂ 2018ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡರು ಸತತ ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು.

ನಾರಾಯಣಗೌಡರು ಜೆಡಿಎಸ್‌ ಅಭ್ಯರ್ಥಿಯಾಗಿ 2013ರಲ್ಲಿ 56,784 ಹಾಗೂ 2018ರಲ್ಲಿ 88,016 ಮತಗಳನ್ನು ಗಳಿಸಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದು, ಹ್ಯಾಟ್ರಿಕ್‌ ವಿಜಯದ ಕನಸು ಕಾಣುತ್ತಿರುವ ನಾರಾಯಣಗೌಡರಿಗೆ ಹಿಂದಿನ ಚುನಾವಣೆಯಂತೆಯೇ ಒಕ್ಕಲಿಗರು, ಕುರುಬರು, ದಲಿತರು ಶಕ್ತಿ ತುಂಬುವರೇ ನೋಡಬೇಕಿದೆ. 1999ರಿಂದ 2019ರವರೆಗೆ ಐದು ಚುನಾವಣೆಗಳನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎದುರಿಸಿರುವ ಕೆ.ಬಿ.ಚಂದ್ರಶೇಖರ್‌, ಎರಡು ಬಾರಿ ಮಾತ್ರ ಗೆಲುವು ಸಾಧಿಸಿದ್ದಾರೆ.

Advertisement

1999 ಹಾಗೂ 2008ರಲ್ಲಿ ಗೆಲುವು ಸಾಧಿಸಿದ್ದು, ಒಮ್ಮೆ ಕೆ.ಆರ್‌.ಪೇಟೆ ಕೃಷ್ಣ ಹಾಗೂ ಎರಡು ಬಾರಿ ಕೆ.ಸಿ.ನಾರಾಯಣಗೌಡರ ವಿರುದ್ಧ ಸೋಲು ಕಂಡಿದ್ದಾರೆ. ಈ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತೆ ಅವರಿಗೇ ಟಿಕೆಟ್‌ ನೀಡಿದೆ. ಜೆಡಿಎಸ್‌ನ ಬಿ.ಎಲ್‌.ದೇವರಾಜು ಅವರು ಎರಡನೇ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. 1999ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವರಾಜು, 28,802 ಮತಗಳನ್ನು ಪಡೆಯುವುದಕ್ಕಷ್ಟೇ ಶಕ್ತರಾಗಿದ್ದರು. ಕಾಂಗ್ರೆಸ್‌, ಎರಡು ಬಾರಿ ಸೋಲು ಕಂಡಿರುವ ಕೆ.ಬಿ.ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿ ಅನುಕಂಪವನ್ನು ಎದುರು ನೋಡುತ್ತಿದೆ.

ಕಳೆದ ಚುನಾವಣೆಯಲ್ಲಿ ಕೆ.ಬಿ.ಚಂದ್ರಶೇಖರ್‌ 18 ಸಾವಿರ ಮತಗಳ ಅಂತರದಿಂದ ನಾರಾಯಣಗೌಡರ ವಿರುದ್ಧ ಸೋಲು ಕಂಡಿದ್ದರು. 2013ರ ಚುನಾವಣೆಯಲ್ಲಿ 56,784 ಹಾಗೂ 2018ರಲ್ಲಿ 70,897 ಮತಗಳನ್ನು ಪಡೆದು ಸೋಲುಂಡಿದ್ದ ಚಂದ್ರಶೇಖರ್‌, ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಜನರ ಒಲವನ್ನು ಗಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ಗೆ ದ್ರೋಹವೆಸಗಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರನ್ನು ಮಣಿಸಲೇಬೇಕೆಂದು ಹಠ ತೊಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ, ವಿಭಿನ್ನ ಕಾರ್ಯತಂತ್ರದೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಕ್ಷೇತ್ರದ ಇತಿಹಾಸ: ಕೆ.ಆರ್‌.ಪೇಟೆ ಕ್ಷೇತ್ರ 16 ಮಹಾಚುನಾವಣೆಗಳನ್ನು ಕಂಡಿದ್ದು, ಇದು ಎರಡನೇ ಉಪ ಚುನಾವಣೆಯಾಗಿದೆ. ಶೀಳನೆರೆಯಿಂದ ಎಸ್‌.ಎಂ.ಲಿಂಗಪ್ಪ, ಸಂತೇಬಾಚಹಳ್ಳಿಯಿಂದ ಕೃಷ್ಣ, ಕೆ.ಸಿ.ನಾರಾಯಣಗೌಡ, ಬೂಕನಕೆರೆಯಿಂದ ಎಂ.ಕೆ.ಬೊಮ್ಮೇಗೌಡ, ಎಂ.ಪುಟ್ಟಸ್ವಾಮಿಗೌಡ ಹಾಗೂ ಕಸಬಾ ಹೋಬಳಿಯ ಎನ್‌.ನಂಜೇಗೌಡ, ಪ್ರಕಾಶ್‌, ಕೆ.ಬಿ.ಚಂದ್ರಶೇಖರ್‌ ಶಾಸಕರಾಗಿ ಆಡಳಿತ ನಡೆಸಿದ್ದಾರೆ. ಅಕ್ಕಿಹೆಬ್ಟಾಳು ಹಾಗೂ ಕಿಕ್ಕೇರಿ ಹೋಬಳಿಯಿಂದ ಇದುವರೆಗೆ ಯಾರೊಬ್ಬರೂ ಶಾಸಕರಾಗಿ ಆಯ್ಕೆಯಾಗಿಲ್ಲ. ಕೆ.ಆರ್‌. ಪೇಟೆಯಿಂದ ಶಾಸಕರಾಗಿರುವವರ ಪೈಕಿ ಕೊತ್ತಮಾರನಹಳ್ಳಿ ಕೃಷ್ಣ ಅವರೊಬ್ಬರು ಮಾತ್ರ ಮಂತ್ರಿಯೋಗ ಹಾಗೂ ಸ್ಪೀಕರ್‌ ಪದವಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ಣಾಯಕ ಅಂಶ: ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನದೇ ಆದ ಓಟ್‌ಬ್ಯಾಂಕ್‌ ಹೊಂದಿದೆ. ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೋಲಿಸಿದರೆ ಜೆಡಿಎಸ್‌ ಕಾರ್ಯಕರ್ತರ ಪಡೆ ಹೆಚ್ಚು ಪ್ರಬಲವಾಗಿದೆ. ಒಕ್ಕಲಿಗ ಮತಗಳನ್ನು ಯಾರು ಹೆಚ್ಚು ಪಡೆಯುವರೋ ಅವರ ಗೆಲುವಿನ ಹಾದಿ ಸುಗಮವಾಗಲಿದೆ. ಕುರುಬರು, ದಲಿತರು ಹಾಗೂ ಸಣ್ಣ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು – 80,000.
ಕುರುಬರು – 30,000.
ಲಿಂಗಾಯತರು – 20,000.
ಪ.ಜಾತಿ -20,000.
ಪ.ಪಂಗಡ – 10,000.
ವಿಶ್ವಕರ್ಮ – 12,000.
ಮುಸ್ಲಿಮರು – 8,000.
ನಾಯಕರು – 7000.

ಮತದಾರರು ಎಷ್ಟು?
ಒಟ್ಟು ಮತದಾರರು – 2,08,630.
ಪುರುಷರು – 1,05,953.
ಮಹಿಳೆಯರು – 1,02,666.
ಇತರರು- 05.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next