ಅಡಿಲೇಡ್: ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯದ ವೇಗದ ಬೌಲಿಂಗ್ ದಾಳಿಯನ್ನು ನಿಭಾಯಿಸಲಾಗದೆ ಪರದಾಡಿದ ವೆಸ್ಟ್ ಇಂಡೀಸ್ 188ಕ್ಕೆ ಕುಸಿದಿದೆ. ಜವಾಬಿತ್ತ ಆಸೀಸ್ 2 ವಿಕೆಟ್ ಕಳೆದುಕೊಂಡು 59 ರನ್ ಮಾಡಿದೆ.
ನಾಯಕ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹೇಝಲ್‌ವುಡ್ ತಲಾ 4 ವಿಕೆಟ್ ಉಡಾಯಿಸಿ ವಿಂಡೀಸ್‌ಗೆ ಕಂಟಕವಾದರು. ವನ್‌ಡೌನ್ ಬ್ಯಾಟರ್ ಕರ್ಕ್ ಎಡ್ವರ್ಡ್ಸ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್‌ಗಳಿಗೆ ಆಸೀಸ್ ಬೌಲಿಂಗ್ ಆಕ್ರಮಣವನ್ನು ಎದುರಿಸಿ ನಿಲ್ಲಲಾಗಲಿಲ್ಲ. ಎಡ್ವರ್ಡ್ಸ್ ಭರ್ತಿ 50 ರನ್ ಹೊಡೆದರು (94 ಎಸೆತ, 7 ಬೌಂಡರಿ).
ವೆಸ್ಟ್ ಇಂಡೀಸ್‌ನ 9 ವಿಕೆಟ್ 133ಕ್ಕೆ ಉರುಳಿತ್ತು. ಅಂತಿಮ ವಿಕೆಟಿಗೆ ಜತೆಗೂಡಿದ ಕೆಮರ್ ರೋಚ್ ಮತ್ತು ಶಮರ್ ಜೋಸೆಫ್ 55 ರನ್ ಒಟ್ಟುಗೂಡಿಸದೇ ಹೋಗಿದ್ದರೆ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು. ಕೊನೆಯವರಾಗಿ ಕ್ರೀಸ್ ಇಳಿದ ಜೋಸೆಫ್ 36 ರನ್ ಬಾರಿಸಿ ಅಜೇಯರಾಗಿ ಉಳಿದರು (41 ಎಸೆತ, 3 ಬೌಂಡರಿ, 1 ಸಿಕ್ಸರ್). ಕೊನೆಗೆ ಬೌಲಿಂಗ್‌ನಲ್ಲೂ ಮಿಂಚಿ ಆಸ್ಟ್ರೇಲಿಯದ ಎರಡೂ ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. ರೋಚ್ ಗಳಿಕೆ ಅಜೇಯ 17.
ಆಸ್ಟ್ರೇಲಿಯ ಈಗಾಗಲೇ ಸ್ಟೀವನ್ ಸ್ಮಿತ್ (12) ಮತ್ತು ಮಾರ್ನಸ್ ಲಬುಶೇನ್ (10) ವಿಕೆಟ್ ಕಳೆದು ಕೊಂಡಿದೆ. ಡೇವಿಡ್ ವಾರ್ನರ್ ವಿದಾ ಯದಿಂದಾಗಿ ಸ್ಮಿತ್‌ಗೆ ಆರಂಭಿಕನಾಗಿ ಭಡ್ತಿ ನೀಡಲಾಗಿತ್ತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್-188 (ಕರ್ಕ್ ಎಡ್ವರ್ಡ್ಸ್ 50, ಶಮರ್ ಜೋಸೆಫ್ 36, ರೋಚ್ ಔಟಾಗದೆ 17). ಆಸ್ಟ್ರೇಲಿಯ-2 ವಿಕೆಟಿಗೆ 59 (ಖ್ವಾಜಾ ಬ್ಯಾಟಿಂಗ್ 30, ಸ್ಮಿತ್ 12, ಲಬುಶೇನ್ 10, ಶಮರ್ 18ಕ್ಕೆ 2).