Advertisement

ಮಣ್ಣು-ನೀರು ಪರೀಕ್ಷಿಸಿ ಪೋಷಕಾಂಶ ನೀಡಿ

05:13 PM Oct 30, 2018 | |

ಕೊಪ್ಪಳ: ರೈತರು ಕಬ್ಬು ಸೇರಿದಂತೆ ಯಾವುದೇ ಬೆಳೆ ಬೆಳೆಯುವ ಮುನ್ನ ಮಣ್ಣು ಹಾಗೂ ನೀರನ್ನು ಪರೀಕ್ಷೆ ಮಾಡಿಸಬೇಕು. ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶ ಕೊಡಬೇಕು ಎಂದು ಬೆಳಗಾವಿ ಜಿಲ್ಲಾ ಸದಗಲ್ಗಾ ಪ್ರಗತಿಪರ ರೈತ ರುದ್ರಕುಮಾರ ಹಾಲಪ್ಪನವರ್‌ ಸಲಹೆ ನೀಡಿದರು. ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಮುಂಡರಗಿಯ ವಿಜಯನಗರ ಶುಗರ್‌ ಪ್ರೈವೆಟ್‌ ಲಿ, ಸಹಯೋಗದಲ್ಲಿ ಸೋಮವಾರ ರೈತರ ಆದಾಯ ದ್ವಿಗುಣಗೊಳಿಸುವ ತಾಂತ್ರಿಕತೆಗಳು ಮತ್ತು ಉಪ ಕಸಬುಗಳು, ಕಬ್ಬಿನಲ್ಲಿ ಅಧಿಕ ಇಳುವರಿ ನೀಡುವ ಆಧುನಿಕ ತಾಂತ್ರಿಕತೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರೈತರು ಕೃಷಿ ಚಟುವಟಿಕೆಯಲ್ಲಿ ಮಣ್ಣಿನ ಫಲವತ್ತತೆ ಹಾಗೂ ನೀರಿನ ಗುಣಮಟ್ಟ ತಿಳಿಯಲು ಪರೀಕ್ಷೆ ಮಾಡಿಸಬೇಕು. ಬೆಳೆಯನ್ನು ಬೆಳೆಯು ವೇಳೆ ಯಾವ ಪೋಷಕಾಂಶ ಕಡಿಮೆ ಇದೆಯೋ ಅದನ್ನು ಪೂರೈಕೆ ಮಾಡಬೇಕು. ಸುಮ್ಮನೆ ಎಲ್ಲರಂತೆ ರಾಸಾಯನಿಕ ಗೊಬ್ಬರ ಬಳಸುವುದು ಸರಿಯಲ್ಲ. ಜೊತೆಗೆ ಕಬ್ಬು ಬೆಳೆಯುವ ವೇಳೆ ಸಸಿಯಿಂದ ಸಸಿಗೆ ಎರಡು ಅಡಿ ಅಂತರ ಇರಬೇಕು. ಬೀಜೋಪಚಾರ ಮಾಡಬೇಕು ಎಂದರು.

ಪ್ರಸ್ತುತ ದಿನದಲ್ಲಿ ಕೃಷಿಗೆ ನೀರಿನ ಅಭಾವ ಹೆಚ್ಚಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ಶೇ. 60ರಷ್ಟು ನೀರು ಉಳಿತಾಯ ಮಾಡಲು ಸಾಧ್ಯವಿದೆ. ಹರಿ ನೀರಾವರಿಯಿಂದ ಬೆಳೆಯ ಇಳುವರಿ ಕಡಿಮೆ ಬರುವುದಲ್ಲದೆ ಸುಮ್ಮನೆ ನೀರು ವ್ಯಯವಾಗಲಿದೆ. ಆದರೆ, ಹನಿ ನೀರಾವರಿ ಮೂಲಕ ಹೆಚ್ಚು ಇಳುವರಿ ಬರಲಿದೆ. ಇದರಿಂದ ಕಬ್ಬಿನ ಬೆಳವಣಿಗೆ ಚೆನ್ನಾಗಿ ಆಗಲಿದೆ. ಸಮಯಕ್ಕೆ ತಕ್ಕಂತೆ ಪೋಷಕಾಂಶ ಕೊಡಬೇಕು. ನೀರಿನ ನಿರ್ವಹಣೆ, ಡೊಣ್ಣೆ ಹುಳುವಿನ ನಿರ್ವಹಣೆ ಮಾಡಬೇಕೆಂದರು.

ಈ ಭಾಗದ ರೈತರು ಹಳೇ ತಳಿಗಳನ್ನೇ ಹೆಚ್ಚು ಬೆಳೆಯುತ್ತಾರೆ. ಇದರಿಂದ ಇಳುವರಿ ಕಡಿಮೆ ಬರುತ್ತದೆ. ಹೊಸ ತಳಿಯ ಬೆಳೆ ಬೆಳೆಯಲು ಮುಂದಾಗಬೇಕು. ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ ಕಬ್ಬು ಸಂಶೋಧನಾ ಕೇಂದ್ರವಿದ್ದು, ಅಲ್ಲಿ 92-93, 92-11 ತಳಿಯ ಬೆಳೆ ಲಭ್ಯ ಇವೆ. ಅದರ ಮಾಹಿತಿ ಪಡೆದು ಹೊಸ ಹೊಸ ತಳಿಗಳನ್ನು ಬೆಳೆದರೆ ಕೃಷಿಯಲ್ಲಿ ಆದಾಯ ದ್ವಿಗುಣ ಕಾಣಲು ಸಾಧ್ಯವಿದೆ ಎಂದರು.

ರಾಯಚೂರಿನ ಕೃಷಿ ವಿಸ್ತರಣಾ ನಿರ್ದೇಶಕ ಡಾ| ಬಿ.ಎಂ. ಚಿತ್ತಾಪೂರ ಮಾತನಾಡಿ, ಉತ್ತರ ಕರ್ನಾಟಕ ಪದೇ ಪದೇ ಬರಕ್ಕೆ ತುತ್ತಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಮಳೆಯಾದರೆ ಈ ಭಾಗದಲ್ಲಿ ಮಳೆಯ ಕೊರತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ರೈತರು ಹರಿ ನೀರಾವರಿ ಪದ್ಧತಿ ಬಿಟ್ಟು ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡುವುದು ಸೂಕ್ತ. ಭವಿಷ್ಯದಲ್ಲಿ ನೀರಿನ ಅಭಾವ ಎದುರಾಗಿ ಎಲ್ಲೆಡೆಯೂ ಹನಿ ನೀರಾವರಿ ಪದ್ಧತಿ ಅಳವಡಿಕೆಯಾಗುವ ಸಾಧ್ಯತೆಯಿದೆ. ಎಕರೆಯಲ್ಲಿ ಕಬ್ಬು ಬೆಳೆದರೆ, ಅದೇ ನೀರನ್ನು ಹನಿ ನೀರಾವರಿ ಮಾಡಿದರೆ ಎರಡೂವರೆ ಎಕರೆಯಲ್ಲಿ ಬೆಳೆಯನ್ನು ಬೆಳೆಯಬಹುದು ಡ್ರಿಪ್‌ ಮೂಲಕವೂ ರೈತರು ಬೆಳೆಗೆ ಗೊಬ್ಬರ ಕೊಡಲು ಅವಕಾಶವಿದೆ ಎಂದರು.

Advertisement

ರಾಯಚೂರಿನ ಕೃಷಿ ವಿವಿ ಸಿಂಡಿಕೇಟ್‌ ಸದಸ್ಯ ಡಾ| ಎಂ. ಶೇಖರಗೌಡ ಮಾತನಾಡಿ, ಕೃಷಿ ವಿಸ್ತರಣಾ ಕೇಂದ್ರದಲ್ಲಿ ರೈತರಿಗೆ ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಸುವರ್ಣಾಕಾಶವಾಗಿದೆ. ಪ್ರತಿಯೊಬ್ಬ ರೈತರು ಇದರ ಜ್ಞಾನ ಪಡೆದು ಕಬ್ಬು ಸೇರಿದಂತೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಜಂಟಿ ನಿರ್ದೇಶಕಿ ಶಬಾನ್‌ ಶೇಖ್‌, ಪ್ರಗತಿಪರ ರೈತ ಖಾಜಾ ಹುಸೇನಿ, ಸುಗರ್‌ ಕಂಪನಿ ಮ್ಯಾನೇಜರ್‌ ಜಯಚಂದ್ರ ಟಿ.ಎಸ್‌. ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿಜ್ಞಾನಿ ಡಾ| ಟಿ.ಆರ್‌. ಬದ್ರಿಪ್ರಸಾದ ಸ್ವಾಗತಿಸಿದರು. ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next