Advertisement

Test; ಶಮಿ ಚೇತರಿಕೆ ವಿಳಂಬ; ಐಪಿಎಲ್‌ನಿಂದಲೂ ಹೊರಗುಳಿವರೇ ಸೂರ್ಯ?

12:39 AM Jan 09, 2024 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಪ್ರಮುಖ ಆಟಗಾರರಾದ ಮೊಹಮ್ಮದ್‌ ಶಮಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಚೇತರಿಕೆ ವಿಳಂಬವಾಗಲಿದೆ ಎಂಬುದಾಗಿ ಬಿಸಿಸಿಐ ಮೂಲವೊಂದು ತಿಳಿಸಿದೆ. ಇಬ್ಬರೂ ಸುದೀರ್ಘ‌ ಕಾಲ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದಿದೆ.

Advertisement

ಮೊಹಮ್ಮದ್‌ ಶಮಿ ಪಾದದ ನೋವಿಗೆ ಸಿಲುಕಿದ್ದು, ಇನ್ನೂ ಬೌಲಿಂಗ್‌ ನಡೆಸಲು ಆರಂಭಿಸಿಲ್ಲ. ಹೀಗಾಗಿ ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲೆರಡು ಟೆಸ್ಟ್‌ಗಳಿಂದ ದೂರ ಉಳಿಯುವ ಸಾಧ್ಯತೆ ಇದೆ. ಸೂರ್ಯಕುಮಾರ್‌ ಯಾದವ್‌ ಜರ್ಮನಿಯಲ್ಲಿ “ನ್ಪೋರ್ಟ್ಸ್ ಹರ್ನಿಯಾ’ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ದೇಶಿ ಕ್ರಿಕೆಟ್‌ ಹಾಗೂ 2024ರ ಐಪಿಎಲ್‌ನಲ್ಲೂ ಆಡುವುದು ಅನುಮಾನ ಎನ್ನಲಾಗಿದೆ.

“ಮೊಹಮ್ಮದ್‌ ಶಮಿ ಇನ್ನೂ ಬೌಲಿಂಗ್‌ ನಡೆಸಲು ಆರಂಭಿಸಿಲ್ಲ. ಫಿಟ್‌ನೆಸ್‌ ಸಾಬೀತು ಪಡಿಸಲು ಅವರು ಎನ್‌ಸಿಗೆ ತೆರಳಬೇಕಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಆಡುವುದು ಅನುಮಾನ. ಸೂರ್ಯಕುಮಾರ್‌ ಅವರದು ಹರ್ನಿಯಾ ಸಮಸ್ಯೆ. ಇದಕ್ಕೆ ಶಸ್ತ್ರಚಿಕಿತ್ಸೆ ಆಗಬೇಕಿದೆ. ಅನಂತರ 8ರಿಂದ 9 ವಾರಗಳ ವಿಶ್ರಾಂತಿ ಅಗತ್ಯವಿದೆ. ಐಪಿಎಲ್‌ ವೇಳೆ ಫಿಟ್‌ ಆದಾರೆಂಬ ನಿರೀಕ್ಷೆ ಇದೆ’ ಎಂಬುದಾಗಿ ಬಿಸಿಸಿಐ ಮೂಲವೊಂದು ತಿಳಿಸಿದೆ.

ವಿಶ್ವಕಪ್‌ ಪಂದ್ಯಾವಳಿಯ ವೇಳೆ ಮೊಹಮ್ಮದ್‌ ಶಮಿ ಚುಚ್ಚುಮದ್ದು ತೆಗೆದುಕೊಂಡು ಬೌಲಿಂಗ್‌ ನಡೆಸಿದ್ದರೆಂಬುದು ಸುದ್ದಿ ಆಗಿತ್ತು. ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರು. ಆದರೆ ಸಮಸ್ಯೆ ಬಗೆಹರಿಯದ ಕಾರಣ ಸರಣಿಯಿಂದ ಬೇರ್ಪಡಬೇಕಾಯಿತು.

ಸೂರ್ಯ: 2 ತಿಂಗಳು ರೆಸ್ಟ್‌
ಮುಂಬಯಿಯನ್ನು ಪ್ರತಿನಿಧಿಸುವ ಸೂರ್ಯ ಕುಮಾರ್‌ಗೆ ಕನಿಷ್ಠ 2 ತಿಂಗಳ ವಿಶ್ರಾಂತಿ ಅಗತ್ಯವಿದೆ. ಈಗಿನ ಸ್ಥಿತಿಯಂತೆ ಅವರಿಗೆ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗದು. ಐಪಿಎಲ್‌ನ ಆರಂಭಿಕ ಪಂದ್ಯಗಳಿಂದಲೂ ದೂರ ಉಳಿಯಬೇಕಾದುದು ಅನಿವಾರ್ಯ. ಈ ಅವಧಿ ವಿಸ್ತರಣೆಗೊಳ್ಳಲೂಬಹುದು. ಸದ್ಯ ಅವರು ಬೆಂಗಳೂರಿನ ಎನ್‌ಸಿಎಯಲ್ಲಿದ್ದಾರೆ. ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಸೂರ್ಯ ಸಂಪೂರ್ಣ ದೈಹಿಕ ಕ್ಷಮತೆಯಿಂದ ಮರಳಬಹುದು. ಟೀಮ್‌ ಇಂಡಿಯಾಕ್ಕೆ ಅವರು ಅನಿವಾರ್ಯವೂ ಹೌದು.

Advertisement
Advertisement

Udayavani is now on Telegram. Click here to join our channel and stay updated with the latest news.

Next