Advertisement
ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಬೆನ್ನಲ್ಲೇ ಭಾರತ 4ರಿಂದ 3ನೇ ಸ್ಥಾನಕ್ಕೆ ನೆಗೆಯಿತು. ಬಳಿಕ ಆಸ್ಟ್ರೇಲಿಯ ವಿರುದ್ಧ ಎರಡೇ ದಿನಗಳಲ್ಲಿ ಸೋತ ದಕ್ಷಿಣ ಆಫ್ರಿಕಾದಿಂದಾಗಿ ಭಾರತ ಇನ್ನೂ ಒಂದು ಸ್ಥಾನ ಮೇಲೇರಿತು. ಹೀಗೆ ಒಂದೇ ದಿನದಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಎರಡು ಸ್ಥಾನ ಭಡ್ತಿ ಪಡೆದ ಹೆಗ್ಗಳಿಕೆ ಟೀಮ್ ಇಂಡಿಯಾದ್ದಾಯಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ನಾಯಕ ರೋಹಿತ್ ಶರ್ಮ ಗೈರು ಎಲ್ಲೂ ಕಾಡಲಿಲ್ಲ. ಕೆ.ಎಲ್. ರಾಹುಲ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ ನಾಯಕನಾಗಿ ಮೊದಲ ಟೆಸ್ಟ್ ಗೆಲುವು ಕಂಡರು. ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಆಡುತ್ತಿಲ್ಲ. ಇದರಿಂದ ಭಾರತಕ್ಕೇನೂ ನಷ್ಟವಿಲ್ಲ. ಆದರೆ ಅಭ್ಯಾಸದ ವೇಳೆ ರಾಹುಲ್ ಕೈಗೆ ಏಟಾಗಿರುವುದು ಚಿಂತಿಸಬೇಕಾದ ಸಂಗತಿಯಾಗಿದೆ. “ಇದೇನೂ ಗಂಭೀರವಲ್ಲ. ರಾಹುಲ್ ಆಡುತ್ತಾರೆಂಬ ವಿಶ್ವಾಸವಿದೆ…’ ಎಂಬುದಾಗಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಹೇಳಿದ್ದಾರೆ. ಒಂದು ವೇಳೆ ರಾಹುಲ್ ಆಡದೇ ಹೋದರೆ ಮೊದಲ ಆಯ್ಕೆಯ ಇಬ್ಬರೂ ನಾಯಕರ ಗೈರಲ್ಲಿ ಟೀಮ್ ಇಂಡಿಯಾ ಕಣಕ್ಕೆ ಇಳಿಯಬೇಕಾಗುತ್ತದೆ. ಆಗ ಚೇತೇಶ್ವರ್ ಪೂಜಾರ ತಂಡವನ್ನು ಮುನ್ನಡೆಸುವರು. ರಾಹುಲ್ ಜಾಗಕ್ಕೆ ಅಭಿಮನ್ಯು ಈಶ್ವರನ್ ಬರಲಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.
Related Articles
ಚತ್ತೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆರಂಭಕಾರ ಶುಭಮನ್ ಗಿಲ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹೀರೋಗಳಾಗಿದ್ದರು. ಗಿಲ್ ಮೊದಲ ಶತಕ ಬಾರಿಸಿದರೆ, ಸದಾ ಕಡೆಗಣಿಸುತ್ತಲೇ ಬಂದ ಕುಲದೀಪ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿ ಪಂದ್ಯಶ್ರೇಷ್ಠರೆನಿಸಿದ್ದರು. ಹಾಗೆಯೇ ಚೇತೇಶ್ವರ್ ಪೂಜಾರ ತಮ್ಮ ಟೆಸ್ಟ್ ಬಾಳ್ವೆಯಲ್ಲೇ ಅತ್ಯಂತ ವೇಗದ ಸೆಂಚುರಿ ಹೊಡೆದುದನ್ನೂ ಮರೆಯುವಂತಿಲ್ಲ. ಬಹುಶಃ ಅವರ ಇಂಗ್ಲಿಷ್ ಕೌಂಟಿ ಯಶಸ್ಸು ಈಗ ಫಲ ನೀಡುತ್ತಿರಬೇಕು.
Advertisement
ಶ್ರೇಯಸ್ ಅಯ್ಯರ್ ಕೂಡ ತಮ್ಮ ಬ್ಯಾಟಿಂಗ್ ಫಾರ್ಮ್ ಸಾಬೀತುಪಡಿಸಿದ್ದರು. ಅಶ್ವಿನ್ ಅರ್ಧ ಶತಕ ಬಾರಿಸಿ ಮಿಂಚಿದ್ದೊಂದು ಬೋನಸ್. ಕುಲದೀಪ್ ಕೂಡ ಬ್ಯಾಟಿಂಗ್‌ನಲ್ಲಿ ಸೈ ಎನಿಸಿದ್ದರು.
ಬ್ಯಾಟಿಂಗ್ ಬರಗಾಲಕ್ಕೆ ಸಿಲುಕಿದವರು ಇಬ್ಬರು ಮಾತ್ರ-ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್. ಇವರಲ್ಲಿ ಕೊಹ್ಲಿ ಫಾರ್ಮ್ ಬಗ್ಗೆ ಚಿಂತೆಪಡಬೇಕಾದ್ದೇನಿಲ್ಲ. ಬಾಂಗ್ಲಾ ವಿರುದ್ಧವೇ ಏಕದಿನದಲ್ಲಿ ಶತಕ ಬಾರಿಸುವ ಮೂಲಕ ದೊಡ್ಡದೊಂದು ಬರಗಾಲ ನೀಗಿಸಿಕೊಂಡಿದ್ದರು. ಆದರೆ ಟೆಸ್ಟ್‌ನಲ್ಲಿ 2019ರ ನವೆಂಬರ್ ಬಳಿಕ ಮೂರಂಕೆಯ ಗಡಿ ತಲುಪಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳಬೇಕಿದೆ.
ಇನ್ನು ಕೆ.ಎಲ್. ರಾಹುಲ್. ಮುಂಬರುವ ಆಸ್ಟ್ರೇಲಿಯ ಎದುರಿನ ಸರಣಿಯಲ್ಲಿ ಭದ್ರ ಬುನಾದಿ ನಿರ್ಮಿಸಲು ರಾಹುಲ್ ಫಾರ್ಮ್ ನಿರ್ಣಾಯಕ. ಅವರ ದೊಡ್ಡ ಇನ್ನಿಂಗ್ಸ್‌ಗೆ ಈ ದ್ವಿತೀಯ ಪಂದ್ಯವೇ ಸೋಪಾನವಾಗಬೇಕಿದೆ.
ತ್ರಿವಳಿ ಸ್ಪಿನ್ ಆಕ್ರಮಣಚತ್ತೋಗ್ರಾಮ್ನಂತೆ ಮಿರ್ಪುರ್ ಟ್ರ್ಯಾಕ್ ಕೂಡ ನಿಧಾನ ಗತಿಯ ಬೌಲರ್ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಭಾರತ ತ್ರಿವಳಿ ಸ್ಪಿನ್ ಆಕ್ರಮಣನ್ನು ಮುಂದುವರಿಸುವುದು ನಿಶ್ಚಿತ. ಕುಲದೀಪ್, ಅಶ್ವಿನ್ ಜತೆಗೆ ಅಕ್ಷರ್ ಪಟೇಲ್ ದಾಳಿಯನ್ನು ಸಂಘಟಿಸಲಿದ್ದಾರೆ. ವೇಗಕ್ಕೆ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಇದ್ದಾರೆ. ಈಗಿನ ಲೆಕ್ಕಾಚಾರದಂತೆ ಭಾರತ ತಂಡದಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಕಡಿಮೆ. ಚೇತರಿಸೀತೇ ಬಾಂಗ್ಲಾ?
ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯವನ್ನು ದೊಡ್ಡ ಅಂತರದಿಂದ ಕಳೆದುಕೊಂಡಿದ್ದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಬ್ಯಾಟಿಂಗ್ ನೀಡಿದ್ದನ್ನು ಮರೆಯುವಂತಿಲ್ಲ. ಆರಂಭಕಾರ ಝಾಕಿರ್ ಹಸನ್ ಪದಾರ್ಪಣ ಟೆಸ್ಟ್‌ನಲ್ಲೇ ಶತಕ ಬಾರಿಸಿದ್ದರು. ಮತ್ತೋರ್ವ ಆರಂಭಕಾರ ನಜ್ಮುಲ್ ಹುಸೇನ್, ನಾಯಕ ಶಕಿಬ್ ಅಲ್ ಹಸನ್ ಅರ್ಧ ಶತಕ ಹೊಡೆದು ಹೋರಾಟ ಸಂಘಟಿಸಿದ್ದರು. ಮುಶ್ಫಿಕರ್ ರಹೀಂ, ಲಿಟನ್ ದಾಸ್ ಬ್ಯಾಟಿಂಗ್ ಬರಗಾಲ ನೀಗಿಸಿಕೊಂಡರೆ ಬಾಂಗ್ಲಾದಿಂದ ಉತ್ತಮ ಹೋರಾಟ ನಿರೀಕ್ಷಿಸಬಹುದು.ಆದರೆ ಆತಿಥೇಯರ ಬೌಲಿಂಗ್ ಘಾತಕವೇನಲ್ಲ. ಗಾಯಾಳು ಶಕಿಬ್ ದ್ವಿತೀಯ ಸರದಿಯಲ್ಲಿ ಬೌಲಿಂಗ್ ನಡೆಸದಿರುವುದೊಂದು ಹಿನ್ನಡೆ. ಬಾಂಗ್ಲಾ ತಂಡಕ್ಕೆ ನಾಸುಮ್ ಅಹ್ಮದ್
ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಎಡಗೈ ಸ್ಪಿನ್ನರ್ ನಾಸುಮ್ ಅಹ್ಮದ್ ಬಾಂಗ್ಲಾದೇಶ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಸ್ಪಿನ್ನರ್ ಕೂಡ ಆಗಿರುವ ನಾಯಕ ಶಕಿಬ್ ಅಲ್ ಹಸನ್ ದ್ವಿತೀಯ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡುವುದು ಅನುಮಾನವಾದ್ದರಿಂದ ನಾಸುಮ್ ಅಹ್ಮದ್ ಅವರಿಗೆ ಅವಕಾಶ ನೀಡಲಾಗಿದೆ. ನಾಸುಮ್ ಸೀಮಿತ್ ಓವರ್‌ಗಳ 32 ಪಂದ್ಯಗಳನ್ನಾಡಿದರೂ ಇನ್ನೂ ಟೆಸ್ಟ್ ಆಡಿಲ್ಲ. ಶಕಿಬ್ ಭುಜದ ನೋವಿಗೆ ಸಿಲುಕಿದ್ದಾರೆ. ಅಲ್ಲದೇ ದ್ವಿತೀಯ ಏಕದಿನ ಪಂದ್ಯದ ವೇಳೆ ಉಮ್ರಾನ್ ಮಲಿಕ್ ಅವರ ಎಸೆತವೊಂದು ಪಕ್ಕೆಲುಬಿಗೆ ಬಿದ್ದಿತ್ತು. ಇದರ ನೋವು ಕೂಡ ಪೂರ್ತಿ ವಾಸಿಯಾಗಿಲ್ಲ. ಮೊದಲ ಟೆಸ್ಟ್‌ನಲ್ಲಿ ಶಕಿಬ್ ಕೇವಲ 12 ಓವರ್ ಎಸೆದಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ನಡೆಸಿರಲಿಲ್ಲ. ಪ್ರಧಾನ ವೇಗಿ ಇಬಾದತ್ ಹುಸೇನ್ ಕೂಡ ಬೆನ್ನುನೋವಿನಿಂದಾಗಿ ದ್ವಿತೀಯ ಇನ್ನಿಂಗ್ಸ್ ನಲ್ಲಿ ಬೌಲಿಂಗ್‌ಗೆ ಇಳಿದಿರಲಿಲ್ಲ. ಆದರೆ ತಂಡದಲ್ಲಿ ಮುಂದುವರಿದಿದ್ದಾರೆ. ಸಂಭಾವ್ಯ ತಂಡಗಳು
ಭಾರತ
ಕೆ.ಎಲ್. ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್. ಬಾಂಗ್ಲಾದೇಶ
ನಜ್ಮುಲ್ ಹುಸೇನ್, ಝಾಕಿರ್ ಹಸನ್, ಯಾಸಿರ್ ಅಲಿ, ಲಿಟನ್ ದಾಸ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಂ, ನುರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಮ್, ಇಬಾದತ್ ಹುಸೇನ್, ಖಾಲಿದ್ ಅಹ್ಮದ್. ಸ್ಥಳ: ಮಿರ್ಪುರ್
ಆರಂಭ: ಬೆ. 9.00
ಪ್ರಸಾರ: ಸೋನಿ ಸ್ಪೋರ್ಟ್ಸ್