ಹೊಸದಿಲ್ಲಿ: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಸಾಧನೆ ಯಿಂದಲೇ ಸುದ್ದಿಯಲ್ಲಿರುವ ಭಾರತದ ಪ್ರಧಾನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈಗ ಮತ್ತೊಂದು ಎತ್ತರದತ್ತ ನೋಟ ಹಾಯಿಸಿದ್ದಾರೆ. ಅವರೀಗ 100ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್‌ನಲ್ಲಿ ಈ ಮೈಲುಗಲ್ಲು ನೆಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮ ಅವರು “ಟೆಸ್ಟ್ ಶತಕ ಸಾಧಕ’ ಆರ್. ಅಶ್ವಿನ್ ಅವರಿಗೆ ಧರ್ಮಶಾಲಾದಲ್ಲಿ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್ ಈವರೆಗಿನ 99 ಟೆಸ್ಟ್‌ಗಳಲ್ಲಿ 507 ವಿಕೆಟ್ ಉರುಳಿಸಿದ್ದಾರೆ. ಅತ್ಯಧಿಕ 35 ಸಲ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ ಭಾರತೀಯ ದಾಖಲೆ ಇವರದು. 3 ಸಾವಿರಕ್ಕೂ ಅಧಿಕ ರನ್, 5 ಸೆಂಚುರಿಯೊಂದಿಗೆ ಆಲ್‌ರೌಂಡ್ ಸಾಧಕನಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಐಸಿಸಿ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಹಿರಿಮೆಯೂ ಇವರದ್ದಾಗಿದೆ.
ನೂರರ ಸಾಧಕರು
100 ಟೆಸ್ಟ್ ಆಡಿರುವ ಭಾರತದ ಸಾಧಕರೆಂದರೆ ಸಚಿನ್ ತೆಂಡುಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್‌ದೇವ್ (131), ಸುನೀಲ್ ಗಾವಸ್ಕರ್ (125), ಸೌರವ್ ಗಂಗೂಲಿ (113), ವಿರಾಟ್ ಕೊಹ್ಲಿ (113), ಇಶಾಂತ್ ಶರ್ಮ (103), ಹರ್ಭಜನ್ ಸಿಂಗ್ (103), ವೀರೇಂದ್ರ ಸೆಹವಾಗ್ (103) ಮತ್ತು ಚೇತೇಶ್ವರ್ ಪೂಜಾರ (103).