ಮುಂಬಯಿ: ಸೀಮರ್ ಪೂಜಾ ವಸ್ತ್ರಾಕರ್ ಮತ್ತು ಆಫ್ ಸ್ಪಿನ್ನರ್ ಸ್ನೇಹ ರಾಣ ಅವರ ಅಮೋಘ ನಿರ್ವಹಣೆಯಿಂದ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿಯೂ ಮೇಲುಗೈ ಸಾಧಿಸಿದೆ. ಅವರಿಬ್ಬರ ಬಿಗು ದಾಳಿಯಿಂದಾಗಿ ಆಸ್ಟ್ರೇಲಿಯ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 219 ರನ್ನಿಗೆ ಆಲೌಟಾಗಿದೆ.
ಆಬಳಿಕ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಭಾರತ ವನಿತೆಯರು ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಮೊದಲ ವಿಕೆಟಿಗೆ 90 ರನ್ನುಗಳ ಜತೆಯಾಟ ನಡೆಸಿ ಬೇರ್ಪಟ್ಟರು. 40 ರನ್ ಗಳಿಸಿದ ಶಫಾಲಿ ದಿನದಾಟದ ಅಂತ್ಯದ ವೇಳೆ ಔಟಾದರು. ಅವರಿಬ್ಬರು ಆಸೀಸ್ ದಾಳಿಯನ್ನು ದಿಟ್ಟವಾಗಿ ಎದರಿಸಿದ್ದರು. ಎಂಟು ಬೌಂಡರಿ ಬಾರಿಸಿರುವ ಮಂಧನಾ 43 ರನ್ನುಗಳಿಂದ ಆಡುತ್ತಿದ್ದು ಭಾರತದ ಆಸರೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್‌ನಲ್ಲಿ ದಾಖಲೆಯ ಅಂತರದಲ್ಲಿ ಜಯ ಸಾಧಿಸಿದ್ದ ಸಂಭ್ರಮದಲ್ಲಿದ್ದ ಭಾರತೀಯ ವನಿತೆಯರು ಆಸ್ಟ್ರೇಲಿಯ ವಿರುದ್ಧವೂ ಅಮೋಘ ಹೋರಾಟ ಮುಂದುವರಿಸಿದ್ದರು. ಭಾರತೀಯರ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ವನಿತೆಯರು ಆಗಾಗ್ಗೆ$ವಿಕೆಟ್ ಕಳೆದುಕೊಳ್ಳುತ್ತ ಪೂರ್ಣ ಶರಣಾದರು. ತಹ್ಲಿಯಾ ಮೆಕ್‌ಗ್ರಾಥ್ ತಾಳ್ಮೆಯ ಅರ್ಧಶತಕ ಹೊಡೆದರೂ ಉಳಿದವರ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.
ಮೊದಲ ಓವರಿನಲ್ಲಿಯೇ ತಂಡ ವಿಕೆಟನ್ನು ಕಳೆದುಕೊಂಡಿತ್ತು. ನಾಲ್ಕು ಎಸೆತಗಳ ಬಳಿಕ ವಸ್ತ್ರಾಕರ್ ಅಮೋಘ ದಾಳಿ ಸಂಘಟಿಸಿ ಎಲಿಸ್ ಪೆರ್ರಿ ಅವರ ವಿಕೆಟನ್ನು ಹಾರಿಸಲು ಯಶಸ್ವಿಯಾದರು. ಇದರಿಂದಾಗಿ ಆಸ್ಟ್ರೇಲಿಯ 7 ರನ್ ತಲುಪುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಮೆಕ್‌ಗ್ರಾಥ್ ತಾಳ್ಮೆಯ ಆಟವಾಡಿ ಇನ್ನಷ್ಟು ಕುಸಿತ ಆಗದಂತೆ ತಡೆದರೂ ಕ್ರೀಸ್‌ನ ಇನ್ನೊಂದು ಬದಿಯಿಂದ ವಿಕೆಟ್ ಉರುಳಿಸಲು ಭಾರತೀಯರು ಯಶಸ್ವಿಯಾದರು. ಅಂತಿಮವಾಗಿ ಆಸ್ಟ್ರೇಲಿಯ 219 ರನ್ನಿಗೆ ಆಲೌಟಾಯಿತು.
ಬಿಗು ದಾಳಿ ಸಂಘಟಿಸಿದ ವಸ್ತ್ರಾಕರ್ 53 ರನ್ನಿಗೆ ನಾಲ್ಕು ವಿಕೆಟ್ ಮಿಂಚಿದರು. ಅವರಿಗೆ ಉಪಯುಕ್ತ ಬೆಂಬಲ ನೀಡಿದ ಸ್ನೇಹ ರಾಣ 56 ರನ್ನಿಗೆ 3 ವಿಕೆಟ್ ಕಿತ್ತರೆ ದೀಪ್ತಿ ಶರ್ಮ 45 ರನ್ನಿಗೆ 2 ವಿಕೆಟ್ ಹಾರಿಸಿದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 219 (ಬೆತ್ ಮೂನಿ 40, ತಹ್ಲಿಯಾ ಮೆಕ್‌ಗ್ರಾಥ್ 50, ಅಲಿಸಾ ಹೀಲಿ 38, ವಸ್ತ್ರಾಕರ್ 53ಕ್ಕೆ 4, ಸ್ನೇಹ ರಾಣ 56ಕ್ಕೆ 3, ದೀಪ್ತಿ ಶರ್ಮ 45ಕ್ಕೆ 2); ಭಾರತ 1 ವಿಕೆಟಿಗೆ 98 (ಮಂಧನಾ 43 ಔಟಾಗದೆ, ಶಫಾಲಿ ವರ್ಮ 40).