Advertisement

Test; ಆಸೀಸ್‌ ಕುಸಿತ, ಆದರೂ ಸುರಕ್ಷಿತ: ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಅಂಪಾಯರ್‌!

11:59 PM Dec 28, 2023 | Team Udayavani |

ಮೆಲ್ಬರ್ನ್: ಬಾಕ್ಸಿಂಗ್‌ಡೇ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಕುಸಿತ ಅನುಭವಿಸಿದರೂ ಸುರಕ್ಷಿತವಾಗಿದೆ. 3ನೇ ದಿನದಾಟದ ಅಂತ್ಯಕ್ಕೆ ಆಸೀಸ್‌ 6 ವಿಕೆಟಿಗೆ 187 ರನ್‌ ಗಳಿಸಿದ್ದು, 241 ರನ್ನುಗಳ ಮುನ್ನಡೆಯಲ್ಲಿದೆ.

Advertisement

ಶಾಹೀನ್‌ ಶಾ ಅಫ್ರಿದಿ ಮತ್ತು ಮಿರ್‌ ಹಮ್ಜಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ 16 ರನ್‌ ಮಾಡುವಷ್ಟರಲ್ಲಿ 4 ವಿಕೆಟ್‌ ಕಳೆದು ಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಆದರೆ ಮಿಚೆಲ್‌ ಮಾರ್ಷ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರ 153 ರನ್‌ ಜತೆಯಾಟದ ನೆರವಿನಿಂದ ಚೇತರಿಕೆ ಕಂಡಿತು.

ಮಿಚೆಲ್‌ ಮಾರ್ಷ್‌ 96 ಮತ್ತು ಸ್ಟೀವನ್‌ ಸ್ಮಿತ್‌ 50 ರನ್‌ ಬಾರಿಸಿ ತಂಡವನ್ನು ದೊಡ್ಡ ಅಪಾಯದಿಂದ ಪಾರುಮಾಡಿದರು. ತಂಡದ ಕುಸಿತವನ್ನೂ ಲೆಕ್ಕಿಸದೆ ಬಿರುಸಿನ ಆಟವಾಡಿದ ಮಾರ್ಷ್‌ ಶತಕದತ್ತ ದೌಡಾಯಿಸಿದರು. ಆದರೆ ನೂರರ ಗಡಿ ಮುಟ್ಟಲು ಇನ್ನೇನು 4 ರನ್‌ ಬೇಕಿದೆ ಎನ್ನುವಾಗ ಮಿರ್‌ ಹಮ್ಜಾ ಮೋಡಿಗೆ ಸಿಲುಕಿದರು. ಮಾರ್ಷ್‌ ಅವರ 130 ಎಸೆತಗಳ ಇನ್ನಿಂಗ್ಸ್‌ ನಲ್ಲಿ 13 ಬೌಂಡರಿ ಸೇರಿತ್ತು. ದಿನದ ಕೊನೆಯ ಓವರ್‌ನಲ್ಲಿ ಔಟಾದ ಸ್ಮಿತ್‌ ಕೊಡುಗೆ ಭರ್ತಿ 50 ರನ್‌. 176 ಎಸೆತಗಳ ಈ ಆಪತ್ಕಾಲದ ಆಟದಲ್ಲಿ ಕೇವಲ 3 ಬೌಂಡರಿ ಸೇರಿತ್ತು. ಅಲೆಕ್ಸ್‌ ಕ್ಯಾರಿ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಉಸ್ಮಾನ್‌ ಖ್ವಾಜಾ ಅವರನ್ನು 2ನೇ ಎಸೆತದಲ್ಲೇ ಕಳೆದುಕೊಂಡಿತು. ಅವರು ಖಾತೆಯನ್ನೇ ತೆರೆಯಲಿಲ್ಲ. ಮಾರ್ನಸ್‌ ಲಬುಶೇನ್‌ (4), ಡೇವಿಡ್‌ ವಾರ್ನರ್‌ (6) ಮತ್ತು ಟ್ರ್ಯಾವಿಸ್‌ ಹೆಡ್‌ (0) ವಿಕೆಟ್‌ ಪಟಪಟನೆ ಉರುಳಿತು. ಅಫ್ರಿದಿ ಮತ್ತು ಹಮ್ಜಾ ತಲಾ 3 ವಿಕೆಟ್‌ ಕೆಡವಿದರು.

ಇದಕ್ಕೂ ಮುನ್ನ 6ಕ್ಕೆ 194 ರನ್‌ ಮಾಡಿದ್ದ ಪಾಕಿಸ್ಥಾನ ಗುರುವಾರದ ಆಟ ಮುಂದುವರಿಸಿ 264ಕ್ಕೆ ಆಲೌಟ್‌ ಆಯಿತು. ಮೊಹಮ್ಮದ್‌ ರಿಜ್ವಾನ್‌ 42, ಆಮೀರ್‌ ಜಮಾಲ್‌ 33, ಅಫ್ರಿದಿ 21 ರನ್‌ ಮಾಡಿದರು.
ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ -316 ಮತ್ತು 6 ವಿಕೆಟಿಗೆ 187 (ಮಾರ್ಷ್‌ 96, ಸ್ಮಿತ್‌ 50, ಹಮ್ಜಾ 27ಕ್ಕೆ 3, ಅಫ್ರಿದಿ 58ಕ್ಕೆ 3). ಪಾಕಿಸ್ಥಾನ-264 (ಶಫೀಕ್‌ 62, ಮಸೂದ್‌ 54, ರಿಜ್ವಾನ್‌ 42, ಜಮಾಲ್‌ 33, ಕಮಿನ್ಸ್‌ 48ಕ್ಕೆ 5, ಲಿಯಾನ್‌ 73ಕ್ಕೆ 4).

Advertisement

ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಅಂಪಾಯರ್‌!

ಕ್ರಿಕೆಟ್‌ ಪಂದ್ಯಗಳು ನಾನಾ ಕಾರಣಗಳಿಂದ ವಿಳಂಬಗೊಂಡಿದ್ದನ್ನು ಕೇಳಿದ್ದೇವೆ. ಇದರ ಹಿಂದೆ ಸ್ವಾರಸ್ಯಕರ ಸಂಗತಿಗಳೂ ಅಡಗಿವೆ. ಇಂಥದೇ ಒಂದು ವಿದ್ಯಮಾನ ಆಸ್ಟ್ರೇಲಿಯ-ಪಾಕಿಸ್ಥಾನ ಟೆಸ್ಟ್‌ ಪಂದ್ಯದ ಗುರುವಾರದ ಭೋಜನ ವಿರಾಮದ ವೇಳೆ ಸಂಭವಿಸಿತು. ಪಂದ್ಯದ ತೃತೀಯ ಅಂಪಾಯರ್‌ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಪಂದ್ಯ ಕೆಲವು ನಿಮಿಷ ತಡವಾಗಿ ಆರಂಭಗೊಂಡಿತು.

ಆಟಗಾರರು ಹಾಗೂ ಫೀಲ್ಡ್‌ ಅಂಪಾಯರ್‌ಗಳಾದ ಮೈಕಲ್‌ ಗಾಫ್, ಜೋಯೆಲ್‌ ವಿಲ್ಸನ್‌ ಲಂಚ್‌ ಮುಗಿಸಿ ಅಂಗಳಕ್ಕಿಳಿದರು. ಬೌಲರ್‌ ಬೌಲಿಂಗ್‌ ಆರಂಭಿಸಬೇಕು ಎನ್ನುವಾಗಿ ತೃತೀಯ ಅಂಪಾಯರ್‌ ಕಾಣದಿರುವುದು ಗಮನಕ್ಕೆ ಬಂತು. ಆಗ ದಿಢೀರ್‌ ವಿರಾಮ ಘೋಷಿಸಲಾಯಿತು. ಬಳಿಕ ಅಂಪಾಯರ್ ವಿಷಯ ತಿಳಿಸಿದರು.
“ತೃತೀಯ ಅಂಪಾಯರ್‌ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡಿರುವುರಿಂದ ಇನ್ನೂ ತಮ್ಮ ಕ್ಯಾಬಿನ್‌ಗೆ ಬಂದಿಲ್ಲ. ಹೀಗಾಗಿ ಆಟ ಸ್ವಲ್ಪ ವಿಳಂಬಗೊಳ್ಳಲಿದೆ’ ಎಂದರು. ಬಳಿಕ ವೀಕ್ಷಕ ವಿವರಣಕಾರರೂ ಸುದ್ದಿಯನ್ನು ಬಿತ್ತರಿಸಿದರು. “ಕ್ರಿಕೆಟ್‌ ಆಸ್ಟ್ರೇಲಿಯ’ ಕೂಡ “ಎಕ್ಸ್‌’ನಲ್ಲಿ ಈ ಘಟನೆಯನ್ನು ಪೋಸ್ಟ್‌ ಮಾಡಿತು. ಲಿಫ್ಟ್ನ ತಾಂತ್ರಿಕ ದೋಷವೇ ಇದಕ್ಕೆ ಕಾರಣ.

ಕೆಲವೇ ಕ್ಷಣದಲ್ಲಿ ತಮ್ಮ ಇಲ್ಲಿಂಗ್‌ವರ್ತ್‌ ತಮ್ಮ ಕ್ಯಾಬಿನ್‌ಗೆ ಮರಳಿದರು. ಕ್ಯಾಮರಾಗಳೆಲ್ಲ ಇವರತ್ತಲೇ ಫೋಕಸ್‌ ಮಾಡುತ್ತಿದ್ದಾಗ ಆಟಗಾರರು, ವೀಕ್ಷಕರೆಲ್ಲ ನಗುವಿನ ಅಲೆಯಲ್ಲಿ ತೇಲಾಡಿದರು. ಇದಕ್ಕೆ ಸಂಬಂಧಿಸಿದ ಬಗೆಬಗೆಯ ಮೀಮ್ಸ್‌ಗಳೂ ಜಾಲತಾಣದಲ್ಲಿ ಹರಿದಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next