Advertisement

ಮುಂದಿನ ವರ್ಷ ಭಾರತಕ್ಕೆ ಟೆಸ್ಲಾ ಪ್ರವೇಶ!

08:27 PM Jun 21, 2023 | Team Udayavani |

ನ್ಯೂಯಾರ್ಕ್‌: ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ವರ್ಷ ದೇಶದಲ್ಲಿ ಉದ್ಯಮಿ ಎಲಾನ್‌ ಮಸ್ಕ್ ಅವರ ಕಂಪನಿ ಟೆಸ್ಲಾ ಕಾರ್ಯಾರಂಭ ಮಾಡಲಿದೆ. ಅಮೆರಿಕಕ್ಕೆ ಮೊದಲ ಅಧಿಕೃತ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನ್ಯೂಯಾರ್ಕ್‌ನಲ್ಲಿ ಟೆಸ್ಲಾ ಸಿಇಒ ಮತ್ತು ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಜತೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಮಾತನಾಡಿದ ಎಲಾನ್‌ ಮಸ್ಕ್ ಅವರು “ನಾನು ನರೇಂದ್ರ ಮೋದಿ ಅವರ ಅಭಿಮಾನಿ’ ಎಂದರು.

Advertisement

ಪ್ರಧಾನಿ ಮೋದಿಯವರ ಭೇಟಿ ಸ್ಮರಣೀಯ ಎಂದು ಪ್ರತಿಪಾದಿಸಿದ ಮಸ್ಕ್, 2015ರಲ್ಲಿ ಕ್ಯಾಲಿಫೋರ್ನಿಯದಲ್ಲಿ ಇರುವ ಕಾರು ಉತ್ಪಾದನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಹೀಗಾಗಿ, ನಮಗಿಬ್ಬರಿಗೆ ಪರಸ್ಪರ ಪರಿಚಯ ಇದೆ. ಭಾರತದಲ್ಲಿ ನಮ್ಮ ಕಂಪನಿಯ ಕಾರ್ಯಚಟುವಟಿಕೆಗಳನ್ನು ಶುರು ಮಾಡುವುದರ ಬಗ್ಗೆ ಉತ್ಸುಕನಾಗಿದ್ದೇನೆ. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದರು. ನಾವು ಯಾವ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತೇವೆಯೋ, ಅಲ್ಲಿನ ನಿಯಮಗಳನ್ನು ಪಾಲನೆ ಮಾಡಲೇಬೇಕು. ಇಲ್ಲದಿದ್ದರೆ ವಹಿವಾಟು ನಡೆಸುವುದೇ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಮುಂದಿನ ವರ್ಷ ಪ್ರವೇಶ: ಮುಂದಿನ ವರ್ಷ ಟೆಸ್ಲಾ ಭಾರತದ ಮಾರುಕಟ್ಟೆ ಪ್ರವೇಶ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಎಲ್ಲಾ ಪ್ರಯತ್ನಗಳು ಕೈಗೂಡಿದರೆ ಮುಂದಿನ ವರ್ಷ ಭಾರತದ ಮಾರುಕಟ್ಟೆ ಪ್ರವೇಶಿಸುವ ಇಚ್ಛೆ ನಮಗಿದೆ’ ಎಂದರು. ಪ್ರಧಾನಿ ಮೋದಿಯವರು ಬೆಂಬಲ ನೀಡುವ ಮಾತುಗಳನ್ನಾಡಿದ್ದಾರೆ. ಅವರಿಗೆ ಧನ್ಯವಾದಗಳು. ಹೀಗಾಗಿ, ನಾವು ಕೆಲವೊಂದು ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದರು ಮಸ್ಕ್. ಈ ಬಗ್ಗೆ ತಕ್ಷಣವೇ ಏನನ್ನು ಹೇಳಲೂ ಬಯಸುವುದಿಲ್ಲ, ಆದರೆ, ನಾವು ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಹೂಡಲಿದ್ದೇವೆ ಎಂದೂ ಹೇಳಿದ್ದಾರೆ.

ಮೋದಿ ಭೇಟಿ ಮಾಡಿದ ಇತರೆ ಪ್ರಮುಖರು:
ಮಸ್ಕ್ ಜತೆಗಿನ ಭೇಟಿಯ ಬಳಿಕ ಲೇಖಕ ಮತ್ತು ಖಗೋಳಶಾಸ್ತ್ರಜ್ಞ ನೀಲ್‌ ಡೆ ಗ್ರಾಸೆ ಟೈಸನ್‌, ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಪೌಲ್‌ ರಾಮರ್‌, ಲೇಖಕ ನಿಕೊಲಸ್‌ ನಾಸ್ಸಿಮ್‌ ತಲೇಬ್‌ ಮತ್ತು ಬಂಡವಾಳ ಹೂಡಿಕೆದಾರ ರೇ ಡಾಲಿಯೋ ಅವರನ್ನು ಭೇಟಿಯಾಗಿದ್ದರು. ಇದಲ್ಲದೆ ನ್ಯೂಯಾರ್ಕ್‌ ವಿವಿಯ ಟಂಡನ್‌ ಸ್ಕೂಲ್‌ ಆಫ್ ಎಂಜಿನಿಯರಿಂಗ್‌ನ ಆಡಳಿತ ಮಂಡಳಿ ಮುಖ್ಯಸ್ಥೆ ಚಂದ್ರಿಕಾ ಟಂಡನ್‌, ಸ್ಟಾನ್‌ಫೋರ್ಡ್‌ ವಿವಿಯ ಡಾ.ಅನುರಾಗ್‌ ಮೈರಾಲ್‌, ಶಿಕಾಗೋ ವಿವಿಯ ಬೂತ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ನ ಡೀನ್‌ ಮಾಧವ ರಂಜನ್‌, ವಾರ್ಟನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ನ ನಿರ್ದೇಶಕ ಪ್ರೊ.ಜಗಮೋಹನ್‌ ಎಸ್‌.ರಾಜು, ಪದ್ಮಶ್ರೀ ಪುರಸ್ಕೃತ ರತನ್‌ ಲಾಲ್‌, ಪೆನ್ಸಿಲ್ವೇನಿಯಾ ಸ್ಟೇಟ್‌ ವಿವಿಯ ಅಧ್ಯಕ್ಷೆ ನೀಲಿ ಬೆಂದಾಪುದಿ ಸೇರಿದಂತೆ ಪ್ರಮುಖರನ್ನು ಭೇಟಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next